

ಬೆಂಗಳೂರು : ಸನಾತನ ಧರ್ಮ, ಸಂಸ್ಕೃತಿ ಉಳಿವಿಗೆ ಭಜನೆ ಬಹಳ ಪ್ರಮುಖ ಮಾಧ್ಯಮವಾಗಿದ್ದು, ಸಮಜಾವನ್ನು ಒಗ್ಗೂಡಿಸುವಲ್ಲಿ ಭಜನೆಯ ಪಾತ್ರ ಪ್ರಮುಖವಾಗಿದೆ ಎಂದು ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಡಾ.ವಾದಿರಾಜ ತಾಯಲೂರು ಹೇಳಿದ್ದಾರೆ.
ಬಸವನಗುಡಿಯ ಗೋವರ್ಧನ ಕ್ಷೇತ್ರ ಪುತ್ತಿಗೆ ಮಠ ಮತ್ತು ಅಮೃತ ಶಿಶು ನಿವಾಸದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಖಿಲ ಕರ್ನಾಟಕ ಭಜನಾ ಪರಿಷತ್ತು ಮತ್ತು 20ನೇ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಭಜನಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿವಿಧ ಕಾರಣಗಳಿಂದ ಸಮಾಜ ವಿಭಜನೆಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಸಮಾಜವನ್ನು ಒಗ್ಗೂಡಿಸಲು ಭಜನಾ ಸ್ಪರ್ಧೆ ಅಗತ್ಯವಾಗಿದೆ. ವಿಭಜನೆಯಿಂದ ಭಜನೆಯತ್ತ ಜನ ಬರಬೇಕಾಗಿದೆ ಎಂದು ವಾದಿರಾಜ ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಚಿಂತಕ ಡಾ.ಅನಂತರಾವ್ ದಂಡಿನ್, ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್, ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ,ಆಯೋಜಕರಾದ ಡಾ.ಕೆ.ಜಿ.ಮುರುಳಿಧರ ಶರ್ಮ, ಟಿ.ವಿ.ಮಲ್ಲಿಕಾರ್ಜುನ, ತೀರ್ಪುಗಾರರಾದ ಪದ್ಮ ಪ್ರಕಾಶ್, ಸುಗುಣ ಬೆಳ್ಳೂರು ಮತ್ತಿತರರು ಪಾಲ್ಗೊಂಡಿದ್ದರು.