ವೇದದರ್ಶನ: ವರವನ್ನು ಅನುಗ್ರಹಿಸಿದ ಯಮ

Veda Darshan vvani
Published on

‘‘ಯಾವನು ದುರಾಚಾರವನ್ನು ಬಿಟ್ಟಿಲ್ಲವೋ, ಶಾಂತಪ್ರವೃತ್ತಿ ಹೊಂದಿಲ್ಲವೋ, ಇಂದ್ರಿಯನಿಗ್ರಹಾದಿ ಸಂಪತ್ತಿಯನ್ನು ಹೊಂದಿಲ್ಲವೋ, ಅವನು ಎಷ್ಟೇ ಬುದ್ಧಿವಂತನಾದರೂ ಕೇವಲ ಸ್ವಯಂಪ್ರಜ್ಞೆಯಿಂದ ಭಗವಂತನನ್ನು ಪಡೆಯಲಾರನು’’ (ನಾವಿರತೋ ದುಃಶ್ಚರಿತಾತ್ ನಾಶಾಂತೋ ನಾಸಮಾಹಿತಃ | ನಾಶಾಂತಮಾನಸೋವಾಪಿ ಪ್ರಜ್ಞಾನೇನ ಏನಂ ಆಪ್ನುಯಾತ್ || 2.24). ಹೀಗೆ ಪರಮಪುರುಷಾರ್ಥವಾದ ವಿಷ್ಣುಪದ ಪ್ರಾಪ್ತಿಗೆ ಮೊದಲನೆಯ ಮೆಟ್ಟಿಲಿನಲ್ಲಿ ಯೋಗ್ಯತೆಯನ್ನು ಹೇಗೆ ಸಂಪಾದಿಸಿಕೊಳ್ಳಬೇಕೆಂಬುದೇ ನಚಿಕೇತನ ಮೊದಲನೆಯ ವರದಲ್ಲಿ ಅಡಗಿರುವ ಸಾರ್ವತ್ರಿಕ ಸಂದೇಶ, ಪ್ರಶ್ನೆ. ತನ್ನ ತಂದೆಯು ಕೇವಲ ನಿಮಿತ್ತ. ಅವನಿಗಾಗಿ ಪ್ರಾರ್ಥಿಸಲ್ಪಟ್ಟಿರುವ ಶಾಂತ ಸಂಕಲ್ಪತ್ವ, ಕ್ರೋಧರಾಹಿತ್ಯಗಳು ಎಲ್ಲ ಸಾಧಕರಿಗೂ ಉಪಲಕ್ಷಣಗಳು ಎಂದು ತಿಳಿಯಬೇಕು.

ಯಮನು ಪ್ರಸನ್ನನಾಗಿ ಅನುಗ್ರಹಿಸುತ್ತಾನೆ. ‘‘ನಿನ್ನ ತಂದೆ ಔದ್ದಾಲಕ ಆರುಣಿಯು, ಎಂದಿನಂತೆಯೇ, ನಿನ್ನನ್ನು ಮಗನೆಂದೇ ಭಾವಿಸಿ ಸಂತುಷ್ಟನಾಗುತ್ತಾನೆ. ಅವನ ಕ್ರೋಧವು ಹೋಗಿ, ಮೃತ್ಯುಮುಖದಿಂದ ಮರಳಿದ ನಿನ್ನನ್ನು ಕಂಡು ಪ್ರೀತಿಯುಂಟಾಗಿ, ಇನ್ನುಮೇಲೆ ಪ್ರತಿ ರಾತ್ರಿಯೂ ಸುಖವಾಗಿ ಮಲಗುವಂತಾಗುತ್ತದೆ. ‘ಸುಖಂ ರಾತ್ರೀಃ ಶಯಿತಾ ವೀತಮನ್ಯುಃ (1.11)’ (ಇದರಿಂದ ಈ ಪೂರ್ವದಲ್ಲಿ ಅವನಿಗೆ ರಾತ್ರಿ ಕಾಲ ನಿದ್ದೆ ಬರುತ್ತಿರಲಿಲ್ಲವೆಂದೂ, ಏನಾದರೊಂದು ಕಾರಣದಿಂದ ಮನಸ್ಸು ಕ್ರೋಧದಿಂದ ಕುದಿಯುತ್ತಿದ್ದಿತೆಂದೂ ಸೂಚಿತವಾಗುತ್ತದೆ. ನಚಿಕೇತನು ಇದು ಹೋಗಲೆಂದು ಮೊದಲನೆಯದಾಗಿ ವರ ಕೇಳಿದುದರಲ್ಲಿ ಸಾಧಕನಿಗೆ ವಿಶೇಷಾರ್ಥವು ಸ್ಪಷ್ಟವಾಗಿದೆ.) ಈಗ ನಚಿಕೇತನು ಎರಡನೆಯ ವರ ಕೇಳುತ್ತಾನೆ. ‘‘ಪರಮಪದದಲ್ಲಿ ಯಾವ ಭಯವೂ ಇಲ್ಲವೆಂದೂ, ಮುಪ್ಪಿಲ್ಲವೆಂದೂ, ಹಸಿವು, ಬಾಯಾರಿಕೆಗಳಿಲ್ಲವೆಂದೂ, ಶೋಕವಿಲ್ಲವೆಂದೂ, ಮೃತ್ಯುದೇವನಿಗೆ ಅಲ್ಲಿ ಪ್ರವೇಶವೇ ಇಲ್ಲವೆಂದೂ, ಕೇಳುತ್ತೇವೆಯಷ್ಟೇ! ಎಲೈ, ಯಮದೇವನೆ! ಇಂತಹ ದಿವ್ಯಲೋಕಕ್ಕೆ ಹೋಗಬೇಕೆಂದು ನನಗೆ ಶ್ರದ್ಧೆ ಉಂಟಾಗಿದೆ. ನೀನು ಅದಕ್ಕೆ ಮಾರ್ಗವನ್ನು ತಿಳಿದಿರುವೆ. ಅದನ್ನು ಕೃಪೆಯಿಂದ ಉಪದೇಶಿಸಬೇಕು.’’

ಉಪನಿಷತ್ತಿನಲ್ಲಿ ‘‘ಸ್ವರ್ಗ’’ ಶಬ್ದಾರ್ಥ

ಇಲ್ಲಿ ನಚಿಕೇತನ ಪ್ರಶ್ನೆಯಲ್ಲಿ ‘‘ಸ್ವರ್ಗೆಲೋಕೇ’’ ಇತ್ಯಾದಿ ಶಬ್ದಗಳಲ್ಲಿ ಹೇಳಲ್ಪಟ್ಟಿರುವ ಲೋಕವು ಭೋಗಲೋಕವಾದ ರಂಭೆ, ಊರ್ವಶಿ, ಮೊದಲಾದವರ ವಾಸಸ್ಥಾನವಾದ ಇಂದ್ರಲೋಕವಲ್ಲ. ಏಕೆಂದರೆ ನಚಿಕೇತನು ಭೋಗಕಾಮಿಯಾಗಿ ಈ ವರವನ್ನು ಕೇಳುತ್ತಿಲ್ಲ ಎಂಬುದು ಸ್ಪಷ್ಟ. ಅಲ್ಲದೆ ಅವನು ಹೇಳುವ ಈ ಲೋಕದ ಲಕ್ಷಣಗಳು ರೂಢಿಯ ಅರ್ಥದಲ್ಲಿ ಬಳಸುವಂತಹ ಸ್ವರ್ಗಲೋಕಕ್ಕೆ ಹೊಂದುವುದಿಲ್ಲ.

ಏಕೆಂದರೆ, ಮೊದಲನೆಯದಾಗಿ ಅದು ಶಾಶ್ವತ ಲೋಕವಲ್ಲ. ಪುಣ್ಯವಶದಿಂದ ಅಲ್ಲಿಗೆ ಹೋದವರಿಗೆ ಕೆಳಗೆ ಬೀಳುವ ಭಯವು ಯಾವಾಗಲೂ ಇದ್ದೇ ಇರುವುದು. ನಚಿಕೇತನ ಮನಸ್ಸಿನಲ್ಲಾದರೋ ಇಂತಹ ಭಯಶೂನ್ಯವಾದ ಲೋಕದ ಕಲ್ಪನೆ ಇರುವುದು ಸ್ಪಷ್ಟ. ಅಲ್ಲದೆ ಆ ಲೋಕದ ವಾಸಿಗಳೇ ಆದ ದೇವತೆಗಳಿಗೂ ಸರ್ವದಾ ಸ್ವರ್ಗಚ್ಯುತಿಯ ಭಯವಿದ್ದೇ ಇರುವುದೂ, ಅವರು ಆಗಾಗ ಭ್ರಷ್ಟರಾಗಿ ಆ ಲೋಕವನ್ನು ಕಳೆದುಕೊಂಡು ಅಜ್ಞಾತರಾಗಿ ಬೇರೆ ಕಡೆಯಲ್ಲಿ ವಾಸಿಸಿದ ಕಥೆಗಳ ಉದಾಹರಣೆಗಳೂ ಪುರಾಣಗಳಲ್ಲಿ ಹೇರಳವಾಗಿವೆ. ಆದುದರಿಂದ ತುಚ್ಛವಾದ ಇಂದ್ರಾದಿ ದೇವಲೋಕವನ್ನು ಮಾತ್ರ ನಚಿಕೇತನು ಕುರಿತು ಇಲ್ಲಿ ಕೇಳುತ್ತಿರುವನೆಂದು ಬಗೆದರೆ ನಚಿಕೇತನ ಸ್ವಭಾವಕ್ಕೆ ದ್ರೋಹ ಬಗೆದಂತೆ ಆಗುವುದು. ಆದುದರಿಂದ ಇತರ ಉಪನಿಷತ್ತುಗಳಲ್ಲಿಯೂ ಆಗಾಗ ‘ಸ್ವರ್ಗ’ ಶಬ್ದವನ್ನು ‘ಪರಮಪದ’ ಎಂಬ ಅರ್ಥದಲ್ಲಿ ಬಳಸಿರುವಂತೆಯೇ ಇಲ್ಲಿಯೂ ಬಳಸಲಾಗಿದೆಯೆಂದು ವಿವೇಕಿಗಳು ಗ್ರಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net