

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಹಳ್ಳಿ ಶಾಲೆ ಮಕ್ಕಳಿಗೆ ಚಿತ್ರಕಲೆಗಳ ಜತೆಗೆ ಪರಿಸರ ಜಾಗೃತಿ ಪಾಠ ಮಾಡುವ ವಿಶೇಷ ಯೋಜನೆಗೆ ಯುವತಿಯೊರ್ವಳು ಕೈಹಾಕಿ ಸೈ ಎನಿಸಿಕೊಂಡಿದ್ದಾರೆ. ಪಶ್ಚಿಮಘಟ್ಟ ಸಾಲಿನ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹಳ್ಳಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ‘ವನಗಿರಿಯ ರಂಗು’ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಚಿತ್ರಕಲೆಗಳ ಜತೆಗೆ ಪರಿಸರದ ಪಾಠ ಕಲಿಸುವ ವಿನೂತನ ಪ್ರಯೋಗಕ್ಕೆ ಉಡುಪಿ ಜಿಲ್ಲೆ ಕಾಪುವಿನ ರಮೇಶ್, ಶಶಿಕಲಾ ದಂಪತಿ ಪುತ್ರಿ ಚಿತ್ರ ಕಲಾವಿದೆ ರಕ್ಷಾ ಪೂಜಾರಿ ಮುಂದಾಗಿದ್ದಾರೆ.
ಹಳ್ಳಿ ಪ್ರದೇಶದ ಹಿಂದುಳಿದಿರುವ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಚಿತ್ರಕಲೆಗಳಲ್ಲಿ ಆಸಕ್ತಿ ಮೂಡಿಸುವುದರ ಜತೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದೇ ಈ ಯೋಜನೆ ಮುಖ್ಯ ಉದ್ದೇಶ. ಈಗಾಗಲೇ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾಲಾಡಿಯ ಕೆಳಸುಂಕ ಶಾಲೆಯಲ್ಲಿ ‘ವನಗಿರಿ ರಂಗು’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಗ್ರಾಮೀಣ ಹಳ್ಳಿ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ರಕ್ಷಾ ಪೂಜಾರಿ ಬೆಂಗಳೂರು, ಮೈಸೂರು, ಕೋಲ್ಕತ್ತಾ ಸೇರಿದಂತೆ ದೇಶಾದ್ಯಂತ ರಾಷ್ಟ್ರೀಯ ಮಟ್ಟದಲ್ಲಿ ನೂರಾರು ಕಲಾಕೃತಿಗಳ ಪ್ರದರ್ಶನ ನೀಡಿದ್ದಾರೆ. ವಿವಿಧ ಕಲಾಕೃತಿ ರಚಿಸಿ ಮಾರಾಟ ಮಾಡಿದ್ದು, ಆಯಿಲ್ ಪೇಂಟಿಂಗ್, ವಾಲ್ ಮ್ಯೂರಲ್ಸ್, ವಾಲ್ ಪೇಂಟಿಂಗ್‌ಗಳ ರಚನೆಯಲ್ಲಿ ರಕ್ಷಾ ಪೂಜಾರಿ ಪ್ರತಿಭಾವಂತೆ.
ಆಧುನಿಕ ಜಗತ್ತಿನಿಂದ ಪರಿಸರದ ಮೇಲೆ ಸಾಕಷ್ಟು ತೊಂದರೆಗಳಾಗುತ್ತಿದ್ದು, ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಉಡುಪಿ ಜಿಲ್ಲೆ ಸಾಸ್ತಾನದ ವನ್ಯಜೀವಿ ಛಾಯಾಚಿತ್ರ ಗ್ರಾಹಕ ಮನೋಜ್ ಭಂಡಾರಿ ತೆಗೆದಿರುವ ವಿವಿಧ ಕಾಡುಪ್ರಾಣಿ, ಪಕ್ಷಿಗಳ ಚಿತ್ರಗಳು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣಾ ಪ್ರಬಂಧಗಳು ಮಾಹಿತಿ ಕಾರ್ಯಾಗಾರ ನಡೆಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ.
ಹೆಬ್ರಿ, ನಾಡ್ಪಾಲು, ಅಮಾವಾಸ್ಯೆ ಬೈಲು, ಮುದ್ರಾಡಿ, ಕಬ್ಬಿನಾಲೆ, ಮುನಿಯಾಲು, ಮುಟ್ಲುಪಾಡಿ, ಅಂಡಾರು, ಕಾರ್ಕಳ ತಾಲೂಕಿನ ನೂರಲ್‌ಬೆಟ್ಟು, ನಾರಾವಿ, ಹೊಸ್ಮಾರು, ಶಿರ್ಲಾಲು, ಅಜೆಕಾರು ಕೆರುವಾಶೆ, ಮಾಳ, ಬೆಳ್ತಂಗಡಿ ತಾಲೂಕಿನ ಅಳದಂಗಡಿ, ಚಿಕ್ಕಮಗಳೂರಿನ ಕುದುರೆಮುಖ, ಕಳಸ, ಜಾಂಬಳೆ, ಸಂಸೆ, ಹೊರನಾಡು, ಶೃಂಗೇರಿ, ಕೊಗ್ರೆ, ಕಿಗ್ಗ, ಶಿವಮೊಗ್ಗ ಜಿಲ್ಲೆ ಆಗುಂಬೆ, ಹೊಸನಗರ, ತಾಲೂಕು ಭಾಗಗಳಲ್ಲಿ ಸಂಚರಿಸಿ ಸರ್ಕಾರಿ ಶಾಲೆಗಳಿಗೆ ತೆರಳಿ ಚಿತ್ರ ಕಲೆ ಜತೆಗೆ ಪರಿಸರದ ಪಾಠ ಕಲಿಸಲಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಚಿತ್ರಕಲೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶ ಇಟ್ಟುಕೊಂಡು ಈ ವಿನೂತನ ಯೋಜನೆಗೆ ನನ್ನ ತಂದೆ ತಾಯಿಯ ಸ್ಫೂರ್ತಿ, ಗೆಳೆಯರ ಪ್ರೋತ್ಸಾಹವೇ ಕಾರಣ. ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿಗಳ ಪ್ರದರ್ಶನ, 80ಕ್ಕೂ ಹೆಚ್ಚು ರಾಜ್ಯದ ವಿವಿಧೆಡೆ ಸಂಚರಿಸಿ ಚಿತ್ರಕಲಾ ಶಿಬಿರ ಏರ್ಪಡಿಸಿದ್ದೇನೆ.-ರಕ್ಷಾ ಪೂಜಾರಿ, ಚಿತ್ರ ಕಲಾವಿದೆ
ರಕ್ಷಾ ಪೂಜಾರಿ ಅವರ ವಿನೂತನ ಯೋಜನೆಯಲ್ಲಿ ನಾವು ಕೈ ಜೋಡಿಸುತ್ತಿದ್ದೇವೆ. ನಾನು ರಾಜ್ಯದ ವಿವಿಧ ಅಭಯಾರಣ್ಯಗಳಿಗೆ ತೆರಳಿದ ಸಂದರ್ಭ ಸೆರೆಹಿಡಿದ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಮಕ್ಕಳಲ್ಲಿ ಪ್ರಾಣಿ, ಪಕ್ಷಿಗಳ ಪರಿಚಯದ ಜತೆಯಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ.-ಮನೋಜ್ ಶೆಟ್ಟಿಗಾರ್, ವನ್ಯಜೀವಿ ಛಾಯಾಗ್ರಾಹಕ