

ಕಾರವಾರ: ಮಂಗಳೂರು-ಮಡಗಾಂವ ವಂದೇ ಭಾರತ ರೈಲಿಗೆ ಶನಿವಾರ ಚಾಲನೆ ದೊರೆತಿದ್ದು, ಭಾನುವಾರ ವೇಳಾಪಟ್ಟಿಯಂತೆ ವಾಣಿಜ್ಯ ಸಂಚಾರ ಪ್ರಾರಂಭವಾಯಿತು.
ಅತ್ಯಾಧುನಿಕ ಸೌಕರ್ಯಗಳಿರುವ 8 ಬೋಗಿಗಳ 450 ಆಸನ ವ್ಯವಸ್ಥೆ ಇರುವ ರೈಲು ಇದಾಗಿದ್ದು, 4.45 ನಿಮಿಷದಲ್ಲಿ 319 ಕಿಮೀ ದೂರದ ಮಡಗಾಂವ ತಲುಪಲಿದೆ. ರೈಲು ಪ್ರತಿ ಗಂಟೆಗೆ ಸರಾಸರಿ 67 ರಿಂದ 69.5 ಕಿಮೀ ವೇಗದಲ್ಲಿ ಸಂಚರಿಸಲಿದೆ. ಸಂಪೂರ್ಣ ರೈಲು ಹವಾ ನಿಯಂತ್ರಿತವಾಗಿದೆ. ಸಿಸಿ ಕ್ಯಾಮರಾ ಕಣ್ಗಾವಲಿಗೆ ಒಳಪಟ್ಟಿದೆ. ವಿಶಾಲ ಕಿಟಕಿ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.ವಿಮಾನದಲ್ಲಿ ಪ್ರಯಾಣಿಸುವ ಅನುಭವ ನೀಡಲಿದೆ.
ಡಿಸೆಂಬರ್ 31 ರಿಂದ ರೈಲು ಸಂಖ್ಯೆ 20646 ಗುರುವಾರ ಹೊರತುಪಡಿಸಿ ಉಳಿದ ದಿನ ಬೆಳಗ್ಗೆ 8.30 ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಬಿಡಲಿದೆ. 9.48 ಕ್ಕೆ ಉಡುಪಿಯಲ್ಲಿ, ಮಧ್ಯಾಹ್ನ 12.8 ಕ್ಕೆ ಕಾರವಾರದಲ್ಲಿ ತಲಾ 2 ನಿಮಿಷ ಮಾತ್ರ ನಿಲ್ಲಲಿದೆ. 1.15 ಕ್ಕೆ ಮಡಗಾಂವ ತಲುಪಲಿದೆ. ಸಾಯಂಕಾಲ 6.10 ಕ್ಕೆ ಮಡಗಾಂವನಿಂದ ಹೊರಡುವ ರೈಲು ಸಂಖ್ಯೆ 20645 ಸಾಯಂಕಾಲ 6.55 ಕ್ಕೆ ಕಾರವಾರದಲ್ಲಿ ನಿಲ್ಲಲಿದೆ. 9.12 ಕ್ಕೆ ಉಡುಪಿಗೆ ತಲುಪಲಿದೆ. 10.45 ಕ್ಕೆ ವಾಪಸ್ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪಲಿದೆ.
ಫುಲ್ ರಶ್:
ಅಯೋಧ್ಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು-ಮಡಗಾಂವ ಸೇರಿ 6 ರೈಲುಗಳಿಗೆ ಏಕ ಕಾಲದಲ್ಲಿ ಚಾಲನೆ ನೀಡಿದರು. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ದಕ್ಷಿಣ ರೈಲ್ವೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಿ ರೈಲನ್ನು ಬೀಳ್ಕೊಡಲಾಯಿತು. ಮಂಗಳೂರು ಸಂಸದ, ಶಾಸಕರು ರೈಲಿನಲ್ಲಿ ಮಡಗಾಂವವರೆಗೆ ಸಂಚರಿಸಿದರು. ಉಡುಪಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ, ಕಾರವಾರದಿಂದ ವಿವಿಧ ವಿವಿಧ ಶಾಲೆಗಳ 300 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿತ್ತು. ಪ್ರತಿ ನಿಲ್ದಾಣದಲ್ಲಿ ಜನರು ರೈಲಿನ ವೇಗದ ಓಟವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿರುವುದು ಕಂಡುಬಂತು.
ಎಲ್ಲ ಉದ್ಘಾಟನಾ ರೈಲಿನಲ್ಲಿ ಪ್ರಯಾಣ!
ಕಳೆದ 27 ವರ್ಷಗಳಿಂದ ವ್ಯಕ್ತಿಯಿಬ್ಬರು ಕೊಂಕಣ ರೈಲ್ವೆ ಪ್ರಾರಂಭಿಸುವ ಎಲ್ಲ ಹೊಸ ರೈಲುಗಳ ಉದ್ಘಾಟನಾ ಸಂಚಾರದಲ್ಲಿ ಪ್ರಯಾಣಿಸುತ್ತಿದ್ದಾರೆ.ಅವರು ಶನಿವಾರ ಪ್ರಾರಂಭವಾದ ಮಂಗಳೂರು-ಮಡಗಾಂವ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿನಲ್ಲಿ ಕೂಡ ಪ್ರಯಾಣಿಸಿದರು.
ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಮೂಲದ ನಿವೃತ್ತ ಪ್ರಾಂಶುಪಾಲ ಉದಯ ಬೋಡಸ್1996 ರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಾರಂಭವಾದ 24 ರೈಲುಗಳ ಉದ್ಘಾಟನಾ ಸಂಚಾರದಲ್ಲಿ ತೆರಳಿದ್ದಾರೆ. ಕಾಸರಗೋಡು ಬೈಂದೂರು ಪ್ಯಾಸೆಂಜರ್, ಮತ್ಸ್ಯಗಂಧ ಎಕ್ಸ್ ಪ್ರೆಸ್ ಸೇರಿ ಪ್ರಮುಖ ರೈಲುಗಳು ಪ್ರಾರಂಭವಾದ ಮೊದಲ ದಿನವೇ ಸಂಚರಿಸಿದ್ದಾರೆ. ವಿಜಯವಾಣಿ' ಜತೆ ಮಾತನಾಡಿದ ಅವರು, ಮಂಗಳೂರು-ಮುಂಬೈ ನಡುವೆ ಶೀಘ್ರ ಸ್ಲೀಪಪರ್ ವಂದೇ ಭಾರತ ಎಕ್ಸ್ ಪ್ರೆಸ್ ಪ್ರಾರಂಭವಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ' ಎಂದರು.
ಹಾಲಿ ಮಾಜಿಗಳ ಗಲಾಟೆ ಹಾಲಿ ಮಾಜಿಗಳ ಗಲಾಟೆಯಲ್ಲಿ ಶನಿವಾರ ಕಾರವಾರದಲ್ಲಿ ವಂದೇ ಭಾರತ ಎಕ್ಸ್ಪ್ರೆಸ್ ರೈಲಿನ ಸ್ವಾಗತ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು. ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆ ನಿಗಮವು ವಂದೇ ಭಾರತ ಎಕ್ಸ್ಪ್ರೆಸ್ ರೈಲಿನ ಸ್ವಾಗತಕ್ಕೆ ಕಾರ್ಯಕ್ರಮ ಆಯೋಜಿಸಿ, ಜನಪ್ರತಿನಿಽಗಳನ್ನು ಆಹ್ವಾನಿಸಲಾಗಿತ್ತು. ಆ ಸಂದರ್ಭಕ್ಕೆ ಡೊಳ್ಳು ಕುಣಿತ ತಂಡದೊಂದಿಗೆ ಬಿಜೆಪಿ ಶಾಲು ಹಾಕಿ ಆಗಮಿಸಿದ ಪಕ್ಷದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹಾಗೂ ಕಾರ್ಯಕರ್ತರುಜೈ, ಬಿಜೆಪಿ, ಜೈ ಮೋದಿಜಿ' ಎಂಬ ಘೋಷಣೆ ಕೂಗಿದರು. ಕಾಂಗ್ರೆಸ್ ಕಾರ್ಯಕರ್ತರು ಸೈಲ್ ಪರ ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಶಾಸಕ ಸತೀಶ ಸೈಲ್ ತಾನು ಈ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂದು ನಿಲ್ದಾಣದ ಮೇಲಿನ ಕೊಠಡಿಗೆ ಹೋಗಿ ಕುಳಿತರು. ನಂತರ ಕೊಂಕಣ ರೈಲ್ವೆ ನಿಗಮದ ಅಧಿಕಾರಿಗಳು "ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಸಹಕರಿಸಿ ಎಂದು ವಿನಂತಿಸಿದರು. ನಂತರ ರೈಲನ್ನು ಪುಷ್ಪ ಹಾಕಿ ಸ್ವಾಗತಿಸಿ, ಮಡಗಾಂವಗೆ ಬೀಳ್ಕೊಡಲಾಯಿತು.
ವಂದೇ ಭಾರತ ಎಕ್ಸ್ಪ್ರೆಸ್ ರೈಲು ಕಾರವಾರಕ್ಕೆ ಬಂದಿರುವುದು ಖುಷಿ ತಂದಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸತ್ತೇನೆ. ರೈಲು ಗೋಕರ್ಣ, ಮುರ್ಡೇಶ್ವರದಲ್ಲೂ ನಿಲ್ಲಬೇಕು ಎಂಬುದು ನಮ್ಮ ಒತ್ತಾಯ. ಆದರೆ, ಇಂಥ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಬಿಜೆಪಿಯವರು ಇಂಥ ಕಾರ್ಯಕ್ರಮಗಳಲ್ಲಿ ಗೊಂದಲ ಮಾಡುವ ಬದಲು ಕೊಂಕಣ ರೈಲ್ವೆ ನಿರಾಶ್ರಿತರಿಗೆ 30 ವರ್ಷಗಳಿಂದ ಸಿಗದ ಪರಿಹಾರ ಕೊಡಿಸಲಿ. ಯಶವಂತಪುರ-ಮುರ್ಡೇಶ್ವರ ರೈಲನ್ನು ಕಾರವಾರವರೆಗೆ ವಿಸ್ತರಿಸುವ ವ್ಯವಸ್ಥೆ ಮಾಡಲಿ.ಸತೀಶ ಸೈಲ್ಶಾಸಕ