ವರ್ಗಾವಣೆಯಾದ ಅಧಿಕಾರಿಗಳಿಗೆ ಮತ್ತೆ ಜಿಲ್ಲೆಯಲ್ಲೇ ಡ್ಯೂಟಿ

Published on

ಕಾರವಾರ: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ, ಬೇರೆಡೆ ವರ್ಗವಾಗಿ, ಬಡ್ತಿ ಹೊಂದಿ ತೆರಳಿದ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ 8 ಅಧಿಕಾರಿಗಳನ್ನು ವಿವಿಧ ತಾಲೂಕುಗಳ ಉಸ್ತುವಾರಿ ಅಧಿಕಾರಿಗಳನ್ನಾಗಿ ಸರ್ಕಾರ ನೇಮಕ ಮಾಡಿದೆ.
ಜಿಲ್ಲೆಯಲ್ಲಿ ಈ ಹಿಂದೆ ಎಡಿಸಿ, ಎಸಿಗಳಾಗಿ ಕರ್ತವ್ಯ ನಿರ್ವಹಿಸಿ, ಸದ್ಯ ಪಕ್ಕದ ಜಿಲ್ಲೆ, ಅಥವಾ ಬೆಂಗಳೂರಿನಲ್ಲಿರುವ ಹಿರಿಯ ಶ್ರೇಣಿಯ ಕೆಎಎಸ್ ಅಽಕಾರಿಗಳಿಗೆ ತಾಲೂಕುಗಳ ಜವಾಬ್ದಾರಿ ವಹಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಸ್.ಕಲ್ಪನಾ ಆದೇಶಿಸಿದ್ದಾರೆ.
ಹಾಲಿ ಅಪರ ಜಿಲ್ಲಾಧಿಕಾರಿ, ಪ್ರಕಾಶ ರಜಪೂತ ಅವರಿಗೆ ಕಾರವಾರ, ಕೆಎಸ್‌ಎಸ್‌ಐಡಿಸಿ ಪ್ರಧಾನ ವ್ಯವಸ್ಥಾಪಕ ರಮೇಶ ದೇಸಾಯಿ ಅವರಿಗೆ ಶಿರಸಿ, ಕೃಷಿ ವಿವಿ ರಿಜಿಸ್ಟ್ರಾರ್‌ ಆಗಿ ನೇಮಕಗೊಂಡಿರುವ ಜಯಲಕ್ಷ್ಮೀ ರಾಯಕೋಡ ಅವರಿಗೆ ಜೊಯಿಡಾ, ಉಡುಪಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಾಜು ಮೊಗವೀರ ಅವರಿಗೆ ಭಟ್ಕಳ, ಕೆಐಡಿಬಿ ವಿಶೇಷ ಉಪ ಆಯುಕ್ತ ದಯಾನಂದ ಭಂಡಾರಿ ಅವರಿಗೆ ಕುಮಟಾ, ಕಾನೂನು ಮತ್ತು ಒಳಾಡಳಿತ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಶಾಂತಕುಮಾರ ಎಸ್.ಬಿ. ಅವರಿಗೆ ಅಂಕೋಲಾ, ಆಡಳಿತ ಸುಧಾರಣಾ ಇಲಾಖೆಯ ವಿಶೇಷ ಕಾರ್ಯದರ್ಶಿ ನಾಗರಾಜ ಸಿಂಗ್ರೇರ್ ಅವರಿಗೆ ಹೊನ್ನಾವರ, ಬಾಗಲಕೋಟೆ ಜಮಖಂಡಿ ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಹಳಿಯಾಳ ತಾಲೂಕಿನ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಈ ಅಧಿಕಾರಿಗಳು ತಮಗೆ ಸಂಬಂಧಪಟ್ಟ ತಾಲೂಕಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಯಾದ ಬಗ್ಗೆ, ಶಿಕ್ಷಣದ ಗುಣಮಟ್ಟದ ಸುಧಾರಿಸುವ ಬಗ್ಗೆ ಕ್ರಮ ವಹಿಸಬೇಕು. ಹಾಸ್ಟೆಲ್, ವಸತಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯ ಕುಡಿಯುವ ನೀರು, ರಸ್ತೆ, ವಿದ್ಯುತ್ ಶಕ್ತಿ, ಮೇವು ಲಭ್ಯತೆ ಮುಂತಾದ ಮೂಲ ಸೌಕರ್ಯಗಳ ಪ್ರಗತಿ ಪರಿಶೀಲನೆ, ತಾಲೂಕಿನಲ್ಲಿ ಸಣ್ಣ ಕೈಗಾರಿಕೆಗೆ ಗುರುತಿಸಿ ಯುವಕರಿಗೆ ಉದ್ಯೋಗ ಕಲ್ಪಿಸುವುದು, ಜಲಮೂಲಗಳ ಜೀರ್ಣೋದ್ಧಾರ ಸೇರಿ 13 ಕಾರ್ಯಗಳನ್ನು ಪಟ್ಟಿ ಮಾಡಲಾಗಿದೆ. ಒಟ್ಟಾರೆ ತಾಲೂಕುಗಳ ಸಮಗ್ರ ಅಭಿವೃದ್ಧಿಯ ಮೇಲುಸ್ತುವಾರಿ ಅಧಿಕಾರಿಗಳದ್ದಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net