

ಬೆಂಗಳೂರು: ನಾಳೆ (ಶುಕ್ರವಾರ) ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ವೈಯಾಲಿಕಾವಲ್ನಲ್ಲಿರುವ ಟಿಟಿಡಿ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಟಿಟಿಡಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪಿ.ಬಾಲರಾಜು ತಿಳಿಸಿದ್ದಾರೆ.
ವೈಕುಂಠ ಏಕಾದಶಿ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಕಳೆದ ವರ್ಷ ಸುಮಾರು 68 ಸಾವಿರ ಜನ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದು, ಈ ವರ್ಷ 75 ಸಾವಿರ ಮೇಲ್ಪಟ್ಟು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರು, ಅನ್ನಪ್ರಸಾದ, ಲಡ್ಡು ಪ್ರಸಾದ ವಿನಿಯೋಗಿಸಲಾಗುತ್ತದೆ.
ಬೆಳಗ್ಗೆ 3.30 ರಿಂದ ಮಧ್ಯರಾತ್ರಿ 11.45ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ತುರ್ತು ಸಂದರ್ಭದ ನಿರ್ವಹಣೆಗಾಗಿ ಆ್ಯಂಬುಲೆನ್ಸ್, ಫೈರ್ಇಂಜಿನ್, ಪ್ರಥಮಚಿಕಿತ್ಸಾ ಘಟಕವನ್ನು ತೆರೆಯಲಾಗಿದೆ. ಪಾರ್ಕಿಂಗ್ ಸಮಸ್ಯೆ ಉಂಟಾಗದಂತೆ ವೈಯಾಲಿಕಾವಲ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ತಿರುಪತಿಯಿಂದ ಸುಮಾರು 25 ಸಾವಿರ ಲಡ್ಡು ಬರುತ್ತಿದ್ದು ಕೌಂಟರ್ನಲ್ಲಿ ದೊರೆಯಲಿವೆ. ಹಾಗೂ 2025ನೇ ಸಾಲಿನ ಟಿಟಿಡಿಯ ನೂತನ ಕ್ಯಾಲೆಂಡರ್, ಡೈರಿ ಹಾಗೂ ಮತ್ತಿತರ ಉತ್ಪನ್ನಗಳ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಾಲರಾಜ್ ವಿವರಿಸಿದರು. ಇದೇ ವೇಳೆ ವೈಕುಂಠ ಏಕಾದಶಿ ಆಮಂತ್ರಣ ಪತ್ರಿಕೆಯನ್ನು ಎಇಓ ಪಿ.ಬಾಲರಾಜ ಮತ್ತು ಅಧೀಕ್ಷಕಿ ಜಯಂತಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
"ಕಳೆದ ವರ್ಷ ವಿವಿಐಪಿ ಪಾಸ್ನಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಪಾಸ್ಗಳನ್ನು ವಿತರಣೆ ಮಾಡಿಲ್ಲ. ಬೆಳಗ್ಗೆ 4 ರಿಂದ 7 ರವರೆಗೆ ವಿವಿಐಪಿಗಳ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. 200 ರೂ. ಟಿಕೆಟ್ ಖರೀದಿಗೆ ಶೀರ್ಘ ದರ್ಶನ ದೊರೆಯಲಿದೆ." -ಜಯಂತಿ, ಟಿಟಿಡಿ ದೇವಸ್ಥಾನದ ಅಧೀಕ್ಷಕಿ