ಪ್ರಧಾನಿ ಮೋದಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ| Modi

vaibhav
Published on

ಪಾಟ್ನಾ: 2025 ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ರಾಜಸ್ಥಾನ್ ರಾಯಲ್ಸ್‌ ತಂಡದ ಆಟಗಾರ ವೈಭವ್ ಸೂರ್ಯವಂಶಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಸೂರ್ಯವಂಶಿ ಮತ್ತು ಅವರ ಪೋಷಕರಿಗೆ ಬಿಹಾರದ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ಈ ಸಂದರ್ಭದಲ್ಲಿ ವೈಭವ್‌, ಮೋದಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ.

ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬದೊಂದಿಗೆ ಭೇಟಿಯ ಚಿತ್ರಗಳನ್ನು ಪ್ರಧಾನಿ ಮೋದಿ ಅವರೇ ಹಂಚಿಕೊಂಡಿದ್ದಾರೆ. ರಾಜಸ್ತಾನ ರಾಯಲ್ಸ್ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ತಮ್ಮ ಊರಿಗೆ ಮರಳಿದ ಸೂರ್ಯವಂಶಿ, ಇಂದಿನ ಮೋದಿ ಸಮಾರಂಭದಲ್ಲಿ ತಮ್ಮ ಕುಟುಂಬದೊಂದಿಗೆ ಹಾಜರಾಗಿದ್ದರು. ನಂತರ ಪ್ರಧಾನಿ ಮೋದಿ ಅವರು ಯುವ ಕ್ರಿಕೆಟಿಗನ ಅಸಾಧಾರಣ ಬ್ಯಾಟಿಂಗ್ ಕೌಶಲ್ಯವನ್ನು ಶ್ಲಾಘಿಸಿದರು.

ಇನ್ನೂ ವೈಭವ್ ಜೊತೆಗಿನ ಫೋಟೋಗಳನ್ನು ಮೋದಿಯವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದಲ್ಲಿ, ಯುವ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅವರ ಕುಟುಂಬವನ್ನು ಭೇಟಿಯಾದೆ. ಅವರ ಕ್ರಿಕೆಟ್ ಕೌಶಲ್ಯವನ್ನು ದೇಶಾದ್ಯಂತ ಪ್ರಶಂಸಿಸಲಾಗುತ್ತಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಮೋದಿ X ನಲ್ಲಿ ಬರೆದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ, ಗುಜರಾತ್ ಟೈಟಾನ್ಸ್ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ಪುಸ್ತಕಗಳಲ್ಲಿ ಸ್ಥಾನ ಪಡೆದರು. ಕೇವಲ 38 ಎಸೆತಗಳಲ್ಲಿ ಅವರ 101 ರನ್ ಗಳಿಸಿ ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಐಪಿಎಲ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net