ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ! ಕಮಲ್​ ಹಾಸನ್​ ಮಾತಿಗೆ ಕನ್ನಡಿಗರು ಕಿಡಿನುಡಿ; 'ಥಗ್​ ಲೈಫ್'​ ಬ್ಯಾನ್​ಗೆ ಪಟ್ಟು | Kamal Haasan

ವಿಜಯವಾಣಿ - 2025-05-30T154054.035
Published on

Kamal Haasan: ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳುವ ಮೂಲಕ ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕಿರುವ ತಮಿಳು ನಟ ಕಮಲ್​ ಹಾಸನ್, ಈ ಹೇಳಿಕೆ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ಅಸ್ಮಿತೆಗೆ ಧಕ್ಕೆ ತರುವಂತೆ ಮಾತನಾಡಿರುವ ಕಮಲ್​ ಹಾಸನ್​ ಈ ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸಿರುವ ಕನ್ನಡಿಗರು, ಅವರ ಮುಂಬರುವ 'ಥಗ್ ಲೈಫ್​' ಸಿನಿಮಾವನ್ನು ಕರುನಾಡಿನಲ್ಲಿ ರಿಲೀಸ್ ಮಾಡದಂತೆ ಪಟ್ಟು ಹಿಡಿದಿದ್ದಾರೆ.

ಕನ್ನಡಿಗರ ವ್ಯಾಪಕ ಆಕ್ರೋಶದ ಬಳಿಕವೂ ತಾನು ಯಾವ ತಪ್ಪು ಮಾಡಿಲ್ಲ, ಕ್ಷಮೆಯೂ ಕೇಳೋದಿಲ್ಲ ಎಂದಿದ್ದ ಕಮಲ್​ ಹಾಸನ್, ಇದೀಗ ಮತ್ತೊಮ್ಮೆ 'ನಾನು ಕ್ಷಮೆ ಕೇಳುವುದಿಲ್ಲ' ಎಂದು ಪುನರುಚ್ಚರಿಸಿರುವುದು ಕನ್ನಡಿಗರ ಕಿಚ್ಚಿನ ಕಟ್ಟೆಯನ್ನು ಹೊಡೆದಿದೆ. ಈ ಮೂಲಕ ಉದ್ಧಟತನ ಮೆರೆದಿರುವ ಕಮಲ್​ ಹಾಸನ್​ಗೆ ಅವರ 'ಥಗ್​ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಕೂಡದು ಎಂಬ ಕೂಗುಗಳು ಬಲು ಜೋರಾಗಿ ಸದ್ದು ಮಾಡುತ್ತಿವೆ. ​ಈ ಕುರಿತು ಇಂದು ಸಂಜೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ತಿಳಿಸಿದೆ.

ಉರಿಯುವ ಬೆಂಕಿಗೆ ತುಪ್ಪ

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಮಲ್​ ಹಾಸನ್​, ‘ನಾನು ಕ್ಷಮೆ ಕೋರುವುದಿಲ್ಲ. ನಾನು ಪ್ರೀತಿಯಿಂದಲೇ ಹೇಳಿರುವುದು’ ಎಂದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದ್ದರೆ. ಮತ್ತೊಂದೆಡೆ, ಜಾಲತಾಣದಲ್ಲಿ ಕನ್ನಡ ನಟಿ ರಮ್ಯ ಹಾಕಿರುವ ಪೋಸ್ಟ್​ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕಮಲ್​ ಅವರ ಸಿನಿಮಾಗೆ ನಿಷೇಧ ಹೇರುವ ಆಗ್ರಹದ ಬಗ್ಗೆ ಟ್ವೀಟ್​ ಮಾಡಿ ಪ್ರತಿಕ್ರಿಯಿಸಿರುವ ರಮ್ಯ, ‘ಅವರು ಅನುಚಿತವಾಗಿ ಮಾತನಾಡಿರುವುದು ಸತ್ಯ. ಆದ್ರೆ, ಅವರ ಸಿನಿಮಾವನ್ನು ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಗಲಿಲ್ಲವೇ? ಒಂದು ಸಣ್ಣ ಕ್ಷಮೆ ಕೊಡಬಹುದಲ್ಲವೇ’ ಎಂದು ಹೇಳಿದ್ದಾರೆ. ಸದ್ಯ ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net