ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ

dvs
ಶಿವಮೊಗ್ಗದಲ್ಲಿ ವಚನ ಮಂಟಪ-ದತ್ತಿ ಕಾರ್ಯಕ್ರಮವನ್ನು ಡಿ.ಜಿ.ಬೆನಕಪ್ಪ ಉದ್ಘಾಟಿಸಿದರು. ಡಾ. ಎಂ.ರಾಜಶೇಖರ್, ಡಾ. ಎಂ.ವೆಂಕಟೇಶ್, ಪ್ರೊ. ಎಸ್.ಕೆ.ಸಾವಿತ್ರಿ, ಎಚ್.ಎನ್.ಮಹಾರುದ್ರ ಮುಂತಾದವರಿದ್ದರು.
Published on

ಶಿವಮೊಗ್ಗ: ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ವಚನ ಸಾಹಿತ್ಯದ ಕೊಡುಗೆ ಅಪಾರ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬರಲು ವಚನ ಸಾಹಿತ್ಯ ಕಾರಣ ಎಂದು ಕನ್ನಡ ಉಪನ್ಯಾಸಕ ಡಾ. ಎಂ.ರಾಜಶೇಖರ್ ಅಭಿಪ್ರಾಯಪಟ್ಟರು.

ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್‌ನಿಂದ ಕನ್ನಡ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ವಚನ ಮಂಟಪ-ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಶಾತವಾಹನರು, ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು ಸೇರಿದಂತೆ ಹಲವಾರು ರಾಜಮನೆತದವರು ಆಳ್ವಿಕೆ ನಡೆಸಿದ್ದಾರೆ. ಇವರೆಲ್ಲರ ಭಾಷೆ ಕನ್ನಡವೇ ಆಗಿತ್ತು ಎಂದರು.

ಅಂದಿನ ರಾಜರು ಸಾಹಿತಿಗಳು, ಕವಿಗಳು, ಕಲಿಗಳೂ ಆಗಿರುತ್ತಿದ್ದರು. 10ನೇ ಶತಮಾನ ಕನ್ನಡದ ಸುವರ್ಣಯುಗವಾಗಿತ್ತು. ಹಳೆಗನ್ನಡ ಸಾಹಿತ್ಯ, ಚಂಪು ಸಾಹಿತ್ಯ, ಮಾರ್ಗಸಾಹಿತ್ಯ ಕಲಿತವರ ಪಾಲಿನ ಕಾಮಧೇನುವಾಗಿತ್ತು. ವಚನ ಸಾಹಿತ್ಯ ಕಲಿಯುವವರ ಪಾಲಿನ ಕಾಮಧೇನುವಾಗಿತ್ತು ಎಂದು ಹೇಳಿದರು.

12ನೇ ಶತಮಾನದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಸಾಹಿತ್ಯ ಕ್ರಾಂತಿಯಾಯಿತು. ಕನ್ನಡದ ಶ್ರೀಮಂತಿಕೆಗೆ ಮಹತ್ವ ಕೊಟ್ಟಿದ್ದು ವಚನ ಸಾಹಿತ್ಯ. ಜೀವನದ ಅನುಭವವನ್ನು ಹೇಳುವುದರ ಜತೆಗೆ ಅನುಭವಿಸಿ ಬರೆದ ಸಾಹಿತ್ಯವೇ ವಚನ ಸಾಹಿತ್ಯ. ಅದರ ಒಂದು ಭಾಗ ಕೀರ್ತನ ಸಾಹಿತ್ಯವಾಗಿದೆ. 22 ಸಾವಿರಕ್ಕೂ ಹೆಚ್ಚು ವಚನಗಳು ನಮಗೆ ದೊರೆತಿವೆ ಎಂದು ತಿಳಿಸಿದರು.

ವಚನದ ಮುಖ್ಯ ಸಾರವೆಂದರೆ ಪ್ರಭುತ್ವವನ್ನು ಅಲ್ಲಗಳೆದು ಎಲ್ಲರೂ ಸಮಾನರು ಎನ್ನುವ ತತ್ವ. ಬಸವಾದಿಶರಣರು ಜಾತಿ, ರಾಜ, ದೇವರನ್ನು ಅಲ್ಲಗೆಳೆದಿಲ್ಲ. ಆದರೆ ಪ್ರಭುತ್ವ ಎಂಬ ಅಹಂಭಾವವನ್ನು ಅಲ್ಲಗೆಳೆದಿದ್ದಾರೆ. ಸಾಂಕೇತಿಕವಾಗಿ ಧರ್ಮ, ಜಾತಿ ಮತ್ತು ಪ್ರಭುತ್ವವನ್ನು ಟೀಕಿಸಿದ್ದಾರೆ ಎಂದರು.

ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಮಹಾರುದ್ರ, ದತ್ತಿ ದಾನಿಗಳಾದ ಡಿ.ಜಿ.ಬೆನಕಪ್ಪ, ಆರ್.ಎಸ್.ಸ್ವಾಮಿ, ಪ್ರೊ. ಎಸ್.ಕೆ.ಸಾವಿತ್ರಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net