ಕರೊನಾ ಲಸಿಕೆ ಜೀವಮಾನದ ಪರಿಹಾರವಲ್ಲ; ಸೀಮಿತ ಪರಿಣಾಮವಷ್ಟೇ ನಿರೀಕ್ಷಿಸಿ; ತಜ್ಞರ ಎಚ್ಚರಿಕೆ

fauci-7
Published on

ವಾಷಿಂಗ್ಟನ್​: ಕರೊನಾ ಲಸಿಕೆ ಬಂದರೆ ಸಾಕಪ್ಪ, ಇಡೀ ಜಗತ್ತಿನ ಸಂಕಷ್ಟವೇ ದೂರಾಗಲಿದೆ ಎಂಬುದು ಎಲ್ಲರ ನಿರೀಕ್ಷೆ. ಹೀಗಾಗಿ ಭಾರತದಲ್ಲಂತೂ ಇನ್ನಿಲ್ಲದ ವೇಗದಲ್ಲಿ ಲಸಿಕೆ ಪರೀಕ್ಷೆ ಕಾರ್ಯವನ್ನು ಇನ್ನಿಲ್ಲದ ವೇಗದಲ್ಲಿ ನಡೆಸಲಾಗುತ್ತಿದೆ. ಆಗಸ್ಟ್​ 15ರ ವೇಳೆಗೆ ಲಸಿಕೆ ಭವಿಷ್ಯವೇ ನಿರ್ಧಾರವಾಗಬೇಕು ಎಂಬ ಹಠ ತೊಡಲಾಗಿದೆ.

ಆದರೆ, ಸದ್ಯ ಲಸಿಕೆ ಸಂಶೋಧನಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ 20 ಲಕ್ಷ ಡೋಸ್​ ತುರ್ತು ಲಸಿಕೆಯನ್ನು ಈಗಾಗಲೇ ಉತ್ಪಾದಿಸಿ ಸಂಗ್ರಹದಲ್ಲಿಟ್ಟಿರುವ ಅಮೆರಿಕ ಹೇಳುವುದೇ ಬೇರೆ.

ಕರೊನಾ ಲಸಿಕೆ ಮಾನವನಿಗೆ ಜೀವಮಾನದ ಪರಿಹಾರವಲ್ಲ. ಇದರಿಂದ ಸೀಮಿತ ಪರಿಣಾಮವನ್ನಷ್ಟೇ ನಿರೀಕ್ಷಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋಣಿ ಫೌಸಿ.

ಕರೊನಾ ಸಂಕಷ್ಟದಲ್ಲಿ ಜಗತ್ತು ಮಂಡಿವರೆಗೂ ಮುಳುಗಿ ಹೋಗಿದೆ. ಇದರಿಂದ ಹೊರಬರಲು ಲಸಿಕೆ ದಿಕ್ಕು ತೋರಲಿದೆ ಎಂದೇ ಎಲ್ಲರೂ ನಿರೀಕ್ಷೆ ಹೊಂದಿದ್ದಾರೆ. ಆದರೆ, ಇದರಿಂದ ದೊರೆಯುವ ರಕ್ಷಣೆ ಸೀಮಿತ ಅವಧಿಯದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಲಸಿಕೆ ಸಿದ್ಧಗೊಳ್ಳುವುದು ಯಾವಾಗ ಎಂಬುದಕ್ಕೆ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಸಿಗಲಿದೆ. ದಡಾರಕ್ಕೆ ಒಮ್ಮೆ ಲಸಿಕೆ ಪಡೆದರೆ ಅದು ಜೀವಮಾನದವರೆಗೂ ನಮ್ಮನ್ನು ಕಾಯಲಿದೆ. ಆದರೆ, ಕರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ನಿರಂತರ ಪ್ರತಿರೋಧ ಶಕ್ತಿಯ ಅಗತ್ಯವಿದೆ ಎನ್ನುವುದು ಫೌಸಿ ಅಭಿಪ್ರಾಯ.

ಜನ ಜೀವನವನ್ನು ಎಂದಿನಂತೆ ಮುಂದುವರಿಸಲು ಮಾಸ್ಕ್​ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಆಗಾಗ ಕೈ ತೊಳೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net