ಕದ್ದ ಹಣದಿಂದ ಲಕ್ಷಾಧಿಪತಿಯಾದ ಕೆಲಸದಾಕೆ; ಹ್ಯಾಂಡಿಕ್ಯಾಮ್​ನಲ್ಲಿ ಸೆರೆಯಾಯ್ತು ಕಳ್ಳಿಯ ಕೈಚಳಕ!

theft
Published on

ಉತ್ತರಾಖಂಡ: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯ ದಂಪತಿಗಳು ಮಹಿಳೆಯೊಬ್ಬರ ಕಷ್ಟ ನೋಡಿ ತಮ್ಮ ಮನೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡರು. ಆದರೆ ಈಗ ಆಕೆ ವೈದ್ಯರ ಸಂಪಾದನೆಯಲ್ಲಿಯೇ ಲಕ್ಷಾಧಿಪತಿಯಾಗಿದ್ದಾಳೆ. ಹೌದು, ಮೂರು ವರ್ಷದಿಂದ ಆಕೆ ವೈದ್ಯರ ಮನೆಯಲ್ಲಿ 10.77 ಲಕ್ಷ ರೂ.ಕದ್ದಿದ್ದಾಳೆ.

ಎಂದಿನಂತೆ ಶನಿವಾರ 7500 ರೂ.ಗಳನ್ನು ಕದಿಯುತ್ತಿದ್ದಾಗ ಹ್ಯಾಂಡಿ ಕ್ಯಾಮ್‌ನಿಂದ ಆಕೆ ಕಳ್ಳತನ ಮಾಡುತ್ತಿರುವ ಸಂಗತಿ ಬಯಲಾಗಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಏನಿದು ಘಟನೆ?

ನೈನಿತಾಲ್ ರಸ್ತೆಯ ಕೃಷ್ಣ ಕುಂಜ್ ನಿವಾಸಿ ಡಾ.ರಾಹುಲ್ ಸಿಂಗ್ ಅವರು ತಮ್ಮ ಪತ್ನಿಯೊಂದಿಗೆ ತಾಂಡಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2019 ರಲ್ಲಿ, ಅವರು ಕುಮಾನ್ ಕಾಲೋನಿ ದಾಮುವಧುಂಗ ನಿವಾಸಿ ಮಧು ಅವರನ್ನು ತಮ್ಮ ಮನೆಯಲ್ಲಿ ಕೆಲಸ ಮಾಡಲು ನೇಮಿಸಿಕೊಂಡರು. ಆಕೆಯ ಮಾಸಿಕ ವೇತನ 3500 ರೂ ರಿಂದ 4500 ರೂಗೆ ಕೂಡ ಹೆಚ್ಚಿಸಲಾಗಿತ್ತು.

2022ರಿಂದ ಅವರ ಮನೆಯಿಂದ ಒಂದಷ್ಟು ಹಣ ನಿರಂತರವಾಗಿ ಕಳ್ಳತನವಾಗುತ್ತಿತ್ತು. ಅಲ್ಪಸ್ವಲ್ಪ ಹಣ ಕಳ್ಳತನವಾಗುತ್ತಿದ್ದರೂ ಅಷ್ಟಾಗಿ ಗಮನ ಕೊಡಲಿಲ್ಲ. ಆದರೆ ಜು.22ರಂದು ಬೀರುವಿನಲ್ಲಿಟ್ಟಿದ್ದ 10 ಲಕ್ಷ ರೂ. ಕದಿಯಲಾಗಿದೆ. ಜುಲೈ 25ರಂದು ಹಣ ಎಣಿಕೆ ಮಾಡಿದಾಗ 4.70 ಲಕ್ಷ ರೂ.ಇದೆ. ಕೆಲಸದಾಕೆಯನ್ನು ಅನುಮಾನಿಸಿ, ಹ್ಯಾಂಡಿಕ್ಯಾಮ್ ಅನ್ನು ಕಬೋರ್ಡ್‌ನಲ್ಲಿ ರೆಕಾರ್ಡಿಂಗ್ ಮೋಡ್‌ನಲ್ಲಿ ಇರಿಸಿದ್ದರು.

ಜುಲೈ 29ರಂದು ಮತ್ತೆ 7500 ರೂ. ಕಳುವಾಗಿದೆ. ಹ್ಯಾಂಡಿ ಕ್ಯಾಮ್ ಪರಿಶೀಲಿಸಿದಾಗ ಹಣ ಕದಿಯುತ್ತಿದ್ದ ಕೆಲಸದಾಕೆ ಮಧು ಸಿಕ್ಕಿಬಿದ್ದಿದ್ದಾಳೆ. ಈವರೆಗೆ 11 ಲಕ್ಷ ರೂಪಾಯಿ ಕಳ್ಳತನವಾಗಿದೆ ಎನ್ನುತ್ತಾರೆ ವೈದ್ಯರು.

ಕೆಲಸದಾಕೆ ಮನೆಯಲ್ಲಿ 4.70 ಲಕ್ಷ ರೂ.ಪತ್ತೆ

ಎಸ್‌ಐ ಮಂಜು ಜಲ್ಲಾ ಮತ್ತು ಕಾನ್ಸ್‌ಟೇಬಲ್ ಪ್ರಕಾಶ್ ಅವರನ್ನು ಕೆಲಸದಾಕೆಯನ್ನು ಬಂಧಿಸಲು ಮನೆಗೆ ಕಳುಹಿಸಲಾಗಿದೆ. ಈ ವೇಳೆ ಪೊಲೀಸರು ತಪಾಸಣೆ ನಡೆಸಿದಾಗ ಸಹಾಯಕಿ ಮಧು ಅವರ ಮನೆಯಲ್ಲಿ 4.70 ಲಕ್ಷ ರೂ. ಸಿಕ್ಕಿದೆ. ಪೊಲೀಸರ ವಿಚಾರಣೆ ಬಳಿಕ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಪೊಲೀಸರು ಕೆಲಸದಾಕೆಯ ಬ್ಯಾಂಕ್ ವಿವರಗಳನ್ನು ತೆಗೆದು ನೋಡಿದಾಗ 6. 30 ಲಕ್ಷ ರೂ.ಇದೆ. ಇಷ್ಟು ಮೊತ್ತವನ್ನು ವೈದ್ಯರ ಮನೆಯಿಂದಲೂ ಕದ್ದಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಇದೀಗ ಪೊಲೀಸರು ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಸಿಒ ಸಿಟಿ ಭೂಪೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ. ಸೋಮವಾರ ಪೊಲೀಸರು ಸೇವಕಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net