ಉತ್ತರ ಕನ್ನಡ ಲೋಕ ಕಣದಲ್ಲಿ ಎಂಇಎಸ್‌ ಕಿಚ್ಚು!

MES-rally
Published on

ಕಾರವಾರ: ಸದಾ ಬೆಳಗಾವಿಯಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಲಿರಿಸಿದೆ. ಎಂಇಎಸ್‌ ಸ್ಪರ್ಧೆ ಹಾಗೂ ಅವರು ನೀಡಿದ ಹೇಳಿಕೆ ಉತ್ತರ ಕನ್ನಡದಲ್ಲಿ ಸಂಚಲನ ಮೂಡಿಸಿದೆ. ಎಂಇಎಸ್‌ ಹೇಳಿಕೆಯನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಎಂಇಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳಾಗಿ ಸಂಘಟನೆಯ ಖಾನಾಪುರ ಕಾರ್ಯಾಧ್ಯಕ್ಷ  ನಿರಂಜನ ಉದಯಸಿನ್ಹಾ  ಸರ್ದೇಸಾಯಿ ಹಾಗೂ ಹೆಚ್ಚುವರಿ ಅಭ್ಯರ್ಥಿಯಾಗಿ ಕೃಷ್ಣಾಜಿ ಪುಂಡಲೀಕ ಪಾಟೀಲ್ ಸೋಮವಾರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ರ‍್ಯಾಲಿ ನಡೆಸಿದ ಎಂಇಎಸ್ ಪ್ರಮುಖರು, ಕಾರವಾರ ನಿಪ್ಪಾಣಿ, ಖಾನಾಪುರವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸಬೇಕು. ಸಂಯುಕ್ತ ಮಹಾರಾಷ್ಟ್ರ ರಚನೆಯಾಗಬೇಕು ಎಂದು ಘೋಷಣೆ ಕೂಗಿದರು. ಸೇರುವುದಾದರೆ ಮಹಾರಾಷ್ಟ್ರವನ್ನೇ ಸೇರುತ್ತೇವೆ. ಇಲ್ಲದಿದ್ದರೆ ಜೈಲಿನಲ್ಲಿರುತ್ತೇವೆ ಎಂದು ಘೋಷಣೆ ಕೂಗಿದರು.
`ಕಾರವಾರ, ಜೊಯಿಡಾ, ಹಳಿಯಾಳ ಭಾಗದಲ್ಲಿ ನೂರಾರು ಮರಾಠಿ ಮಾಧ್ಯಮ ಶಾಲೆಗಳಿದ್ದವು. ಸರ್ಕಾರ ಅವುಗಳನ್ನು ಮುಚ್ಚಿ ಹಾಕಿದೆ. ಮರಾಠಿ ಭಾಷಿಗರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಗಡಿ ಭಾಗದ ಶಾಲೆಗಳಿಗೆ ಮರಾಠಿ ಬದಲು ಕನ್ನಡ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಹಾಗಾಗಿ ಮರಾಠಿ ಭಾಷಿಗರ ಹಕ್ಕುಗಳ ರಕ್ಷಣೆಗೆ ಸ್ಪರ್ಧಿಸುತ್ತಿದ್ದೇವೆ. ಕಾರವಾರ, ಬೆಳಗಾವಿಯನ್ನು ದ್ವಿಭಾಷಿಕ ಪ್ರದೇಶಗಳಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತ ಬರಲಾಗಿದೆ. ಆಡಳಿತದಲ್ಲಿ ಕನ್ನಡದ ಜತೆ ಮರಾಠಿ ಭಾಷೆಯನ್ನೂ ಬಳಸುವಂತೆ ಒತ್ತಾಯಿಸಲಾಗಿದೆ. ಕರ್ನಾಟಕ ಸರ್ಕಾರ ಸ್ಪಂದಿಸುತ್ತಿಲ್ಲ ' ಎಂದು ಎಂಇಎಸ್ ಬೆಂಬಲಿತ ಅಭ್ಯರ್ಥಿ ನಿರಂಜನ ಸರ್ದೇಸಾಯಿ ಆರೋಪಿಸಿದರು. ಎಂಇಎಸ್ ಖಾನಾಪುರ ಘಟಕದ ಅಧ್ಯಕ್ಷ ಗೋಪಾಲ ದೇಸಾಯಿ, ಪ್ರಮುಖರಾದ ರಮೇಶ ದಬಾಲೆ, ಗೋಪಾಲ ಪಾಟೀಲ, ಬಾಳಾಸಾಹೇಬ ಶೇಲಾರ ಇದ್ದರು. 

ಕಸಾಪ ವಿರೋಧ

Vasare

ಲೋಕಸಭಾ ಚುನಾವಣೆಯಲ್ಲಿ ನಾಮ ಪತ್ರ ಸಲ್ಲಿಸುವ ವೇಳೆ ಎಂಇಎಸ್‌ನ ನಿರಂಜನ ದೇಸಾಯಿ ಅವರು ನಾಡ ವಿರೋಽಯಾದ ಹೇಳಿಕೆ ನೀಡಿದ್ದು, ಅದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ವಾಸರೆ, ಚುನಾವಣೆಯ ವೇಳೆ ಜಾತಿ, ಧರ್ಮ, ಗಡಿ, ನುಡಿ ಮುಂತಾದ ಭಾವನಾತ್ಮ ವಿಚಾರಗಳನ್ನು ಹೇಳಬಾರದೆಂದು ನೀತಿ ಸಂಹಿತೆಯಿದ್ದರೂ ಅಭ್ಯರ್ಥಿಯಾಗಿರುವ ನಿರಂಜನ ದೇಸಾಯಿಯವರು ಕಾರವಾರ, ಜೋಯಿಡಾ ಹಾಗೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಬಹಿರಂಗ ಹೇಳಿಕೆ ನೀಡಿರುವುದು ಚುನಾವಣಾ ನಿಯಮ ಉಲ್ಲಂಘನೆಯಾಗಿರುತ್ತದೆ. ಚುನಾವಣಾ ಆಯೋಗ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಾಸರೆ ಒತ್ತಾಯಿಸಿದ್ದಾರೆ.
ಕಾರವಾರ, ದಾಂಡೇಲಿ, ಜೋಯಿಡಾದಲ್ಲಿದ್ದ ಮರಾಠಿ ಭಾಷಾ ಶಾಲೆಗಳನ್ನು ಕರ್ನಾಟಕ ಸರ್ಕಾರ ಮುಚ್ಚಿದೆ ಎಂದು ನಿರಂಜನ ದೇಸಾಯಿ ಹೇಳಿರುವುದು ಅವರ ತಿಳಿವಳಿಕೆಯ ಕೊರತೆಯಾಗಿದೆ. ಮರಾಠಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಹಾಗೂ ಕಾಲೇಜ್‌ಗಳಲ್ಲಿ ಸಮಸ್ಯೆಯಾಗುತ್ತಿತ್ತು. ಕಾರಣ ಮರಾಠಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು. ಹಾಗೂ ಈ ಭಾಗದ ಮರಾಠಿ ಭಾಷಿಕರು ಕನ್ನಡವನ್ನು ನಾಡ ಭಾಷೆಯಾಗಿ ಪ್ರೀತಿಸಿ ಕನ್ನಡ ಮಾಧ್ಯಮದಲ್ಲೇ ಅಭ್ಯಾಸ ಮಾಡಲಾರಂಭಿಸಿದ ಹಿನ್ನೆಲೆಯಲ್ಲಿ, ಮರಾಠಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಅಂಥಹ ಶಾಲೆಗಳು ಬಂದ್ ಆಗಿವೆ. ಇದರಲ್ಲಿ ಯಾರ ದುರಾಲೋಚನೆಯೂ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ ಕನ್ನಡ ಶಾಲೆಗಳೂ ಮುಚ್ಚಿಕೊಳ್ಳುತ್ತಿವೆ. ವಾಸ್ತವಾಂಶ ತಿಳಿಯದೇ ನಿರಂಜನ ದೇಸಾಯಿ ಜನರೊಳಗೆ ಭಾವನಾತ್ಮಕ ಪ್ರಚೋದನೆ ನೀಡುವಂತಹ ಹೇಳಿಕೆ ಕೊಡುವುದು ಸಮಂಜಸವಲ್ಲ. ಉತ್ತರ ಕನ್ನಡ ಜಿಲ್ಲೆಯ ಯಾರೊಬ್ಬರೂ ಕೂಡಾ ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳುತ್ತಿಲ್ಲ. ಇಲ್ಲಿರುವ ಎಲ್ಲರೂ ಕನ್ನಡದ ನೆಲಕ್ಕೆ ನಿಷ್ಠರಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಿರಂಜನ ದೇಸಾಯಿ ನಮ್ಮ ಜಿಲ್ಲೆಗೆ ಬಂದು ಜಾತಿ ಹಾಗೂ ಭಾಷಿಕರ ನಡುವೆ ಸಂಘರ್ಷ ಹುಟ್ಟಿಸುವ ಹಾಗೂ ಮನಸ್ಸು ಕೆಡಿಸುವ ಮಾತನಾಡಿದ್ದು ನಾಡ ದ್ರೋಹದ ಕೆಲಸವಾಗಿದೆ ಎಂದಿದ್ದಾರೆ.

ಕರವೇ ಆಕ್ಷೇಪ

Karave

ಹಲವು ದಶಕಗಳಿಂದ ತಣ್ಣಗಾಗಿರುವ  ಕಾರವಾರ ಬೆಳಗಾವಿ ಗಡಿ  ವಿಚಾರ ಕೆಣಕಲು ಮಹಾರಾಷ್ಟ ಏಕೀಕರಣ ಸಮಿತಿಯ ( ಎಮ್ ಇ ಎಸ್) ಖಾನಾಪುರ ಘಟಕ ಮುಂದಾಗಿದೆ.ಅದರಲ್ಲೂ    ಎಮ್ ಇ ಎಸ್  ಅಭ್ಯರ್ಥಿಯಾಗಿ ಸ್ವರ್ಥಿಸುತ್ತಿರುವ ನಿರಂಜನ ಸರ್ ದೇಸಾಯಿ ಅವರು  ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ   ನೀತಿ ಸಂಹಿತೆ ಕಾನೂನು ಸುವ್ಯವಸ್ಥೆ ಉಲ್ಲಂಘಿಸಿ  ಕಾರವಾರ  ಜೊಯಿಡಾ ಬೆಳಗಾವಿ  ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕಾರವಾರದಲ್ಲಿ ಹೇಳಿಕೆ ನೀಡಿರುವುದು  ನಾಡ ವಿರೋಧಿ ಹೇಳಿಕೆ  ನೀಡಿರುವುದಲ್ಲದೇ  ಇವರ ಹೇಳಿಕೆ ವಿರೋಧಿ ಇಡೀ ಕರ್ನಾಟಕದಲ್ಲಿ  ಹೋರಾಟದ ಕಿಚ್ಚು ಹೆಚ್ಚುವಂತೆ   ಮಾಡಿ  ಹೋಗಿದ್ದಾರೆ .  ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡಲು  ಕಾರವಾರ  ಜೊಯಿಡಾ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೇಳಿಕೆ ನೀಡಿರುವುದು ಖಂಡನಾರ್ಹ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಹಾಗೂ ತಾಲ್ಲೂಕು ಅಧ್ಯಕ್ಷ ನರೇಂದ್ರ ತಳೇಕರ  ಅವರು  ಜಂಟಿ   ಪತ್ರಿಕಾ ಹೇಳಿಕೆ  ಮೂಲಕ ಖಂಡಿಸುತ್ತೇವೆ ಮತ್ತು  ಇವರ ಮೇಲೆ ಜಿಲ್ಲಾಡಳಿತ ಜಿಲ್ಲಾ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ನಿಲುವಿಗೆ ಬದ್ಧ

Anjali-Nimbalakar

ಉಕ ಲೋಕಸಭಾ ಕ್ಷೇತ್ರದಲ್ಲಿ ಎಂಇಎಸ್ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದ ಅಂಜಲಿ ನಿಂಬಾಳಕರ್, ಉತ್ತರ ಕನ್ನಡದ ಜೊಯಿಡಾ, ಕಾರವಾರ, ಖಾನಾಪುರ, ನಿಪ್ಪಾಣಿ, ಬೀದರ್‌ನ ಬಾಲ್ಕಿ ಮುಂತಾದ ತಾಲೂಕುಗಳನ್ನು ಮಹಾರಾಷ್ಟçಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಹಲವು ವರ್ಷಗಳಿಂದ ಹೋರಾಟ ನಡೆಸಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ನಡೆಸುವ ಹಕ್ಕಿದೆ. ಈ ವಿಚಾರದಲ್ಲಿ ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಮೇಲಾಗಿ ಈ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ಇದರಿಂದ ನಾನೊಂದು ಹೇಳಿ ನ್ಯಾಯಾಲಯದಲ್ಲಿ ಬೇರೆ ನಿರ್ಧಾರವಾದರೆ ಸರಿಯಲ್ಲ, ಭಾಷಾ ವಿವಾದದ ಬಗ್ಗೆ ಮಹಾಜನ್ ವರದಿಯೇ ಅಂತಿಮ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಕಾಂಗ್ರೆಸ್ ಪಕ್ಷದ ಹಿರಿಯರು ಹೇಳುತ್ತಿದ್ದಾರೆ. ಅದಕ್ಕೆ ನಾನೂ ಬದ್ಧನಾಗಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net