

ನವದೆಹಲಿ: ದೆಹಲಿಯ ಗಾಜಿಯಾಬಾದ್‌ನಲ್ಲಿ ಪತ್ರಕರ್ತರೊಬ್ಬನ ಮೇಲೆ ಕೆಲವು ಜನರು ಗುಂಡಿನ ದಾಳಿ ನಡೆಸಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಪತ್ರಕರ್ತ ವಿಕ್ರಮ್ ಜೋಶಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡುಗಳಲ್ಲಿ ಒಂದು ವಿಕ್ರಮ್ ಜೋಶಿಯ ತಲೆಗೆ ತಗುಲಿರುವ ಕಾರಣ, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾತ್ರಿ ಜೋಶಿ ಅವರು ತಮ್ಮ ಮಕ್ಕಳ ಜತೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆಸಿರುವ ಗುಂಪು, ಗುಂಡು ಹಾರಿಸಿದೆ. ಈ ಬಗ್ಗೆ ಸಿಸಿಟಿಯಲ್ಲಿ ಸೆರೆಯಾಗಿದೆ.
ವಿಕ್ರಮ್ ಜೋಶಿ ತಮ್ಮ ಮಕ್ಕಳ ಜತೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ, ಕೆಲ ಜನರು ಇರುವ ಗುಂಪೊಂದು ಅವರನ್ನು ತಡೆದು ಗುಂಡಿನ ದಾಳಿ ನಡೆಸಿದೆ. ಆ ಸಮಯದಲ್ಲಿ ಬೆದರಿದ ಮಕ್ಕಳು ಓಡಿಹೋಗಿದ್ದಾರೆ. ಅದಾದ ನಂತರ ಹಲ್ಲೆಕೋರರು ಜೋಶಿಯನ್ನು ಕಾರಿನ ಕಡೆಗೆ ಎಳೆದುಕೊಂಡು ನಂತರ ಸ್ಥಳದಿಂದ ಪಲಾಯನ ಮಾಡಿರುವುದು, ಆ ಗುಂಪು ಹೋದ ಮೇಲೆ ಮಕ್ಕಳು ಓಡಿ ಬಂದು ಸಹಾಯಕ್ಕಾಗಿ ಕಿರುಚಾಡಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಜೋಶಿಯವರು ತಮ್ಮ ಸಹೋದರಿ ಸಂಬಂಧಿ ಯುವತಿಯನ್ನು ಕೆಲವು ಪುರುಷರು ಕಿರುಕುಳ ನೀಡುತ್ತಿರುವ ಬಗ್ಗೆ ದೂರು ದಾಖಲು ಮಾಡಿದ್ದರು. ಬಹುಶಃ ಇದಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿರಬಹುದು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ದೂರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದರೂ, ಯಾರನ್ನೂ ಬಂಧಿಸಲಾಗಿಲ್ಲ. ಅವರೇ ಈ ದಾಳಿ ನಡೆಸಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
ಪತ್ರಕರ್ತನ ಮೇಲಿನ ದಾಳಿಗೆ ಸಂಬಂಧಿಸಿದಂತೆ ಐವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಗಾಜಿಯಾಬಾದ್ ಎಸ್‌ಎಸ್‌ಪಿ ತಿಳಿಸಿದ್ದಾರೆ.