

ಉತ್ತರಪ್ರದೇಶ: ಮದುವೆ ಮಂಟಪದಲ್ಲಿ ಮದುವೆ ಕ್ಯಾನ್ಸಲ್ ಆಗಿ ಮುರಿದು ಬಿದ್ದಿರುವ ಎಷ್ಟೋ ಘಟನೆಗಳ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ವಧು, ದೇಶದ ಪ್ರಧಾನಿ ಹೆಸರು ಹೇಳಲು ತಿಳಿಯದ ವರನ ಜತೆಗಿನ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಗಾಜಿಪುರ ಜಿಲ್ಲೆಯ ಸೈದ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು?: ಉತ್ತರಪ್ರದೇಶದ ಸೈದ್ಪುರ ಠಾಣೆ ವ್ಯಾಪ್ತಿಯ ನಾಸಿರ್ಪುರ ಗ್ರಾಮದಲ್ಲಿ ರಾಮ್ ಅವತಾರ್ ಎಂಬುವರ ಮಗ ಶಿವಶಂಕರ್ (27) ಮತ್ತು ಲಖೇದು ರಾಮ್ ಎಂಬುವರ ಪುತ್ರಿ ರಂಜನಾಗೆ ವಿವಾಹ ನಿಶ್ಚಯವಾಗಿತ್ತು. ಜೂನ್ 11ರಂದು ವಿವಾಹ ನೆರವೇರಿದೆ.
ಮದುವೆಯಾದ ಮರುದಿನ ಎರಡೂ ಕುಟುಂಬದವರು ಸೇರಿ ಖಿಚಡಿ( ಉತ್ತರಪ್ರದೇಶ ಸಂಪ್ರದಾಯ) ಕಾರ್ಯಕ್ರಮ ಆಯೋಜಿಸಿದ್ದರು. ಅಂದರೆ ಪ್ರಶೋತ್ತರ ಆಟವನ್ನು ಏರ್ಪಡಿಸಿದ್ದರು. ವಧುವಿನ ಕಡೆಯವರು ವರನಿಗೆ, ವರನ ಕಡೆಯವರು ವಧುವಿಗೆ ಪ್ರಶ್ನೆ ಕೇಳಿ, ಉತ್ತರ ಪಡೆಯುವ ಆಟವಿದು.
ಈ ಖಿಚಡಿ ಆಡುವಾಗ ವಧುವಿನ ಸೋದರಿ ವರನಿಗೆ ದೇಶದ ಪ್ರಧಾನಿ ಯಾರೆಂದು ಕೇಳಿದ್ದಾರೆ. ಆದರೆ ಅದಕ್ಕೆ ವರ ಉತ್ತರ ನೀಡಲಿಲ್ಲ. ಬಳಿಕ ಇನ್ನೂ ಕೆಲವು ಪ್ರಶ್ನೆ ಕೇಳಿದಾಗಲೂ ವರನ ಕಡೆಯಿಂದ ಉತ್ತರವೇ ಸಿಗಲಿಲ್ಲ.
ವರ ಉತ್ತರ ಕೊಡದೇ ಇರುವುದನ್ನು ಗಮನಿಸಿದ ವಧುಗೆ ಬೇಸರವಾಗಿದೆ. ಯಾವ ಪ್ರಶ್ನೆಗೂ ಉತ್ತರ ನೀಡದೇ ಇರುವುದುರಿಂದ ಅಲ್ಲಿದ್ದವರು ಗೇಲಿ ಮಾಡಲು ಪ್ರಾರಂಭಿಸಿದ್ದಾರೆ. ಕೋಪಗೊಂಡ ವಧು ಸಾಮಾನ್ಯ ಜ್ಞಾನವಿಲ್ಲದ ವ್ಯಕ್ತಿ ನನಗೆ ಗಂಡನಾಗಿ ಬೇಡಾ ಎಂದು ವಧೂ ಮದುವೆ ಮುರಿದುಕೊಂಡಿದ್ದಾಳೆ. ನಂತರ ಎರಡು ಮನೆಯವರ ಒತ್ತಾಯದ ಮೇರೆಗೆ ವರನ ಸಹೋದರನನ್ನು ಮತ್ತೆ ಮರು ಮದುವೆಯಾಗಿದ್ದಾಳೆ.
ನಂತರ ವಧುವಿನ ಕುಟುಂಬಸ್ಥರು ವರನ ಮನೆಗೆ ಹೋಗಿ ತಮ್ಮ ಮಗಳನ್ನು ಮನೆಗೆ ಕಳುಹಿಸಿ ಕೊಡಿ ಎಂದು ಗಲಾಟೆ ಮಾಡಿದ್ದಾರೆ. ಈ ಘಟನೆಯಿಂದ ಬೇಸರಗೊಂಡ ವರನ ಕುಟುಂಬಸ್ಥರು ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಈ ಪ್ರಕರಣದ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.