

ಕೋಟ: ಶರನ್ನವರಾತ್ರಿಯು ಧಾರ್ಮಿಕ ಸ್ಥಳ ಕೇಂದ್ರಿತ ಪ್ರಕೃತಿಯನ್ನು ಆರಾಧಿಸುವ ಉತ್ಸವ. ಶಾರದೋತ್ಸವ ಧಾರ್ಮಿಕ ಕಾರ್ಯದ ಜತೆಗೆ ಸಾಂಸ್ಕೃತಿಕ ಮೆರುಗು ಹೆಚ್ಚಿಸಿ ಜ್ಞಾನದ ಸಂಪತ್ತು ವೃದ್ಧಿಸುತ್ತಿದೆ, ಉತ್ಸವಗಳು ಹಬ್ಬವಾಗಿರದೆ ಸಮರ್ಪಣಾ ಮನೋಭಾವ ಹೊಸ ಹಿತ ಚಿಂತನೆಗಳಿಗೆ ವೇದಿಕೆ ಕಲ್ಪಿಸಿದೆ ಎಂದು ಪಾಂಡೇಶ್ವರದ ಯೋಗಗುರುಕುಲದ ಮುಖ್ಯಸ್ಥ ಡಾ.ವಿದ್ವಾನ್ ವಿಜಯ್ ಮಂಜರ್ ಹೇಳಿದರು.
ಪಾಂಡೇಶ್ವರ ಶಾಲಾ ವಠಾರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಸ್ತಾನದ ಸಂತ ಅಂತೋನಿ ಚರ್ಚ್ನ ಫಾ.ಸುನೀಲ್ ಡಿಸಿಲ್ವಾ ಮಾತನಾಡಿದರು. ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಸುಶೀಲಾ ಸದಾನಂದ ಪೂಜಾರಿ, ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಉಪಸ್ಥಿತರಿದ್ದರು.
ಸಮಿತಿಯ ರಾಘವೇಂದ್ರರಾಜ್ ಸ್ವಾಗತಿಸಿ ಸನ್ಮಾನಪತ್ರ ವಾಚಿಸಿದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ನಂತರ ರಘು ಪಾಂಡೇಶ್ವರ ನೇತೃತ್ವದಲ್ಲಿ ಸಾಧನಾ ಕಲಾ ತಂಡದ ಕಲಾವಿದರಿಂದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನಗೊಂಡಿತು.
ಧಾರ್ಮಿಕ ಕ್ಷೇತ್ರ ಹಿರಿಯರಾದ ಸಾಸ್ತಾನ ಗೋಳಿಗರಡಿ ದೈವಸ್ಥಾನದ ಮುಖ್ಯಸ್ಥ ಜಿ.ವಿಠ್ಠಲ್ ಪೂಜಾರಿ ಪಾಂಡೇಶ್ವರ, ಸಮಾಜ ಸೇವಕ ಚಂದ್ರಶೇಖರ್ ಮಯ್ಯ, ಇತ್ತೀಚೆಗೆ ನಿಧನರಾದ ರಂಗಕರ್ಮಿ ಸಂಜೀವ ಕದ್ರಕಟ್ಟು ಅವರ ಪತ್ನಿ ಸೀತಾ ಪೂಜಾರಿ ಅವರಿಗೆ ವಿಶೇಷ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆವಿಜೇತರಿಗೆ ಬಹುಮಾನ ನೀಡಲಾಯಿತು.