

Ustad zakir hussain : ವಿಶ್ವಪ್ರಸಿದ್ಧ ಲೆಜೆಂಡರಿ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ಅವರು ಸ್ಯಾನ್ಫ್ರಾನ್ಸಿಸ್ಕೊದ ಆಸ್ಪತ್ರೆಯಲ್ಲಿ ಭಾನುವಾರ (ಡಿ.15) ವಿಧಿವಶರಾಗಿದ್ದಾರೆ. ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ (idiopathic pulmonary fibrosis) ಕಾಯಿಲೆಯಿಂದ ಕೊನೆಯುಸಿರೆಳೆದಿರುವುದಾಗಿ ಅವರ ಕುಟುಂಬದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಜಾಕಿರ್ ಹುಸೇನ್ ಅವರಿಗೆ 73 ವಯಸ್ಸಾಗಿತ್ತು. ಹುಸೇನ್ ಅವರು ಮೃತಪಟ್ಟಿರುವುದಾಗಿ ಭಾನುವಾರ ರಾತ್ರಿಯೇ ಎಲ್ಲೆಡೆ ಸುದ್ದಿಯಾಗುತ್ತು. ಆದರೆ, ಅವರಿನ್ನೂ ಬದುಕಿದ್ದು, ತೀವ್ರ ನಿಗಾಘಟಕದಲ್ಲಿದ್ದಾರೆ ಎಂಬ ಸುದ್ದಿಯೂ ಕೆಲವೇ ಕ್ಷಣಗಳಲ್ಲಿ ಹೊರಬಿದ್ದಿತು. ಹೀಗಾಗಿ, ಅವರು ಚೇತರಿಸಿಕೊಳ್ಳಲಿ ಎಂದು ಎಲ್ಲೆಡೆ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಆದರೆ, ಸೋಮವಾರ ಬೆಳಗ್ಗೆ ಹುಸೇನ್ ಕುಟುಂಬ ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ. ದಿಗ್ಗಜ ತಬಲಾ ವಾದಕನನ್ನು ಕಳೆದುಕೊಂಡು ಇದೀಗ ಸಂಗೀತ ಲೋಕ ಬಡವಾಗಿದೆ.
ಹುಸೇನ್ ಅವರು ತಮ್ಮ ಪತ್ನಿ ಅಂಟೋನಿಯಾ ಮಿನ್ನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ, ಇಸಾಬೆಲ್ಲಾ ಖುರೇಷಿ ಮತ್ತು ಸಹೋದರರಾದ ತೌಫಿಕ್, ಫಜಲ್ ಖುರೇಷಿ ಮತ್ತು ಸಹೋದರಿ ಖುರ್ಷಿದ್ ಔಲಿಯಾ ಅವರನ್ನು ಅಗಲಿದ್ದಾರೆ.
ಶಿಕ್ಷಕ, ಮಾರ್ಗದರ್ಶಕ ಮತ್ತು ಶಿಕ್ಷಣತಜ್ಞರಾಗಿ ಹುಸೇನ್ ಅವರ ಸೇವೆಯು ಅಸಂಖ್ಯಾತ ಸಂಗೀತಗಾರರ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಮುಂದಿನ ಪೀಳಿಗೆ ಮತ್ತಷ್ಟು ಮುಂದುವರಿಯಲು ಹುಸೇನ್ ಪ್ರೇರೇಪಿಸುತ್ತಾರೆ. ಸಾಂಸ್ಕೃತಿಕ ರಾಯಭಾರಿಯಾಗಿ ಪರಂಪರೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಸಂಗೀತಗಾರರಲ್ಲಿ ಹುಸೇನ್ ಒಬ್ಬರು ಎಂದು ಹೇಳುವ ಮೂಲಕ ಹುಸೇನ್ ಅವರ ನಿಧನದ ಬಗ್ಗೆ ಅವರ ಕುಟುಂಬವು ಸೋಮವಾರ ಬೆಳಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದೇ ಸಮಯದಲ್ಲಿ ಹುಸೇನ್ ಕುಟುಂಬ ಖಾಸಗಿತನ ಗೌರವಿಸುವಂತೆ ಮನವಿ ಮಾಡಿದೆ.
ಅಂದಹಾಗೆ ಜಾಕಿರ್ ಹುಸೇನ್ ಅವರು 1951ರ ಮಾರ್ಚ್ 9ರಂದು ಮುಂಬೈನ ಮಾಹಿಮ್‌ನಲ್ಲಿ ಜನರಿಸಿದರು. ಅವರ ತಂದೆ ಉಸ್ತಾದ್ ಅಲ್ಲಾರಾಖಾ ಕೂಡ ಪ್ರಸಿದ್ಧ ತಬಲಾ ಮಾಸ್ಟರ್. ಹುಸೇನ್ ಅವರಿಗೆ ಚಿಕ್ಕ ವಯಸ್ಸಿನಲ್ಲೇ ತಬಲಾ ನುಡಿಸುವ ಒಲವಿತ್ತು. ಹೀಗಾಗಿಯೇ ತಮ್ಮ 3ನೇ ವಯಸ್ಸಿನಲ್ಲೇ ತಮ್ಮ ತಂದೆಯಿಂದ ಮೃದಂಗವನ್ನು (ಶಾಸ್ತ್ರೀಯ ತಾಳವಾದ್ಯ) ನುಡಿಸಲು ಕಲಿತರು. ಅಲ್ಲದೆ, 12ನೇ ವಯಸ್ಸಿನಲ್ಲಿಯೇ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು.
ರವಿಶಂಕರ್, ಅಲಿ ಅಕ್ಬರ್ ಖಾನ್ ಮತ್ತು ಶಿವಕುಮಾರ್ ಶರ್ಮ ಸೇರಿದಂತೆ ಭಾರತದ ಎಲ್ಲ ದಂತಕಥೆ ಕಲಾವಿದರೊಂದಿಗೆ ಹುಸೇನ್ ಕೆಲಸ ಮಾಡಿದ್ದಾರೆ. ಹೆಚ್ಚುವರಿಯಾಗಿ, ದಿ ಬೀಟಲ್ಸ್, ಯೋ-ಯೋ ಮಾ, ಚಾರ್ಲ್ಸ್ ಲಿಯೋಡ್, ಬೆಲಾ ಫ್ಲೆಕ್, ಎಡ್ಗರ್ ಮೆಯೆರ್, ಮಿಕ್ಕಿ ಹಾರ್ಟ್, ಜಾರ್ಜ್ ಹ್ಯಾರಿಸನ್ ಮತ್ತು ಜಾನ್ ಮೆಕ್‌ಲಾಫ್ಲಿನ್‌ರಂತಹ ಕಲಾವಿದರೊಂದಿಗೆ ಪಾಶ್ಚಿಮಾತ್ಯ ಸಂಗೀತದಲ್ಲಿ ಹುಸೇನ್ ಅವರ ಅದ್ಭುತ ಸಾಧನೆಯು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಇರಿಸಿತು. ಇದರಿಂದ ಅವರಿಗೆ ಜಾಗತಿಕ ಸ್ಥಾನಮಾನವು ಸಿಕ್ಕಿತು. ತಮ್ಮ ವಿಶೇಷ ಪ್ರತಿಭೆಯಿಂದಲೇ ಜಾಗತಿಕ ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡರು.
ಸಂಗೀತ ಲೋಕಕ್ಕೆ ಹುಸೇನ್ ಅವರು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ, ಭಾರತ ಸರ್ಕಾರವು ಅವರಿಗೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಗೌರವವನ್ನು ನೀಡಿದೆ. ಅಲ್ಲದೆ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್‌ನ ಜೀವಮಾನದ ಗೌರವ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಜಾಕಿರ್ ಹುಸೇನ್ ಅವರು ಒಂದೇ ರಾತ್ರಿಯಲ್ಲಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ.
ಇದಿಷ್ಟೇ ಅಲ್ಲದೆ, ಯುನೈಟೆಡ್ ಸ್ಟೇಟ್ಸ್, ಹುಸೇನ್ ಅವರಿಗೆ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಅನ್ನು 1999 ರಲ್ಲಿ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್‌ನಿಂದ ನೀಡಿತು. ಇದು ಸಾಂಪ್ರದಾಯಿಕ ಕಲಾವಿದರಿಗೆ ನೀಡುವ ಅಮೆರಿಕದ ಅತ್ಯುನ್ನತ ಜೀವಮಾನದ ಗೌರವವಾಗಿದೆ. ಸಂಗೀತ ಪ್ರಪಂಚಕ್ಕೆ ಹುಸೇನ್ ಅವರ ಸಾಟಿಯಿಲ್ಲದ ಕೊಡುಗೆಗಾಗಿ 2017ರಲ್ಲಿ SFJazz ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. (ಏಜೆನ್ಸೀಸ್)