

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ಜನಾಂಗೀಯ ಸೂಕ್ಷ್ಮತೆಯ ಟಿಪ್ಪಣಿ ನೀಡುವ ಮೂಲಕ ಇಂಗ್ಲೆಂಡ್ ಮಾಜಿ ಮಹಿಳಾ ಕ್ರಿಕೆಟರ್ ಹಾಗೂ ವೀಕ್ಷಕ ವಿವರಣೆಗಾರ್ತಿ ಇಶಾ ಗುಹಾ ತೀವ್ರ ಟೀಕೆಗಗಳಿಗೆ ಗುರಿಯಾಗಿದ್ದಾರೆ. ಜತೆಗೆ ಇದು 2008ರ "ಮಂಕಿಗೇಟ್' ವಿವಾದವನ್ನು ನೆನಪಿಸಿದೆ.
ಭಾನುವಾರ ಬೆಳಗ್ಗೆ ಬುಮ್ರಾ ಬೇಗನೆ ಎರಡು ವಿಕೆಟ್ಗಳನ್ನು ಕಬಳಿಸಿದ ಬಳಿಕ ಅವರ ಬಗ್ಗೆ ಮೆಚ್ಚುಗೆ ಸೂಚಿಸುವ ಭರದಲ್ಲಿ ಇಶಾ, "ಪ್ರೈಮೇಟ್' (ವಾನರ, ಸಸ್ತನಿ ಪ್ರಾಣಿ) ಎಂದು ಕರೆದರು. ಬುಮ್ರಾ ಬೆಳಗ್ಗೆ 5 ಓವರ್ಗಳಲ್ಲಿ 4 ರನ್ಗಳಿಗೆ 2 ವಿಕೆಟ್ ಕಬಳಿಸಿದ ಬಗ್ಗೆ "ಫಾಕ್ಸ್ ಸ್ಪೋರ್ಟ್ಸ್' ಚಾನಲ್ನ ಕಾಮೆಂಟರಿ ಬಾಕ್ಸ್ನಲ್ಲಿ ಮಾಜಿ ವೇಗಿ ಬ್ರೆಟ್ ಲೀ, ಇಶಾ ಅಭಿಪ್ರಾಯ ಕೇಳಿದರು. ಆಗ ಇಶಾ, "ಬುಮ್ರಾ ಅವರೊಬ್ಬ ಅತ್ಯಂತ ಅಮೂಲ್ಯವಾದ ಫ್ರೈಮೇಟ್' ಎಂದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಇಶಾ ವಿರುದ್ಧ ಜನಾಂಗೀಯ ನಿಂದನೆಯ ಆರೋಪಗಳನ್ನು ಮಾಡಿದರು.