ಬೆಂಗಳೂರು:ಇತರ ರಾಜ್ಯಗಳು ಅನುಸರಿಸುವ ಮಾರ್ಗಗಳು ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತವಾಗಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ 25ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕೆಪಿಎಸ್ಸಿ ಸದೃಢಗೊಳಿಸಲು ಹೆಚ್ಚಿನ ಸಂಪನ್ಮೂಲ, ಸಿಬ್ಬಂದಿ, ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಮಹಿಳೆಯರು, ಯುವಜನರು, ನಿರ್ಗತಿಕ ವರ್ಗಗಳೂ ಸೇರಿದಂತೆ ಎಲ್ಲರನ್ನೂ ಒಳಗೊಂಡಂತೆ ಅವಕಾಶ ನೀಡುವುದು ಸರ್ಕಾರದ ಆಶಯವಾಗಿದೆ. ಸ್ವತಂತ್ರ ಪರೀಕ್ಷಾ ನಿಯಂತ್ರಕರ ಹುದ್ದೆಗಳನ್ನು ಸೃಜಿಸುವ ಮೂಲಕ ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾದ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಜನಕೇಂದ್ರಿತವಾಗಿದ್ದುಕೊಂಡು ಭವಿಷ್ಯದ ಸವಾಲು ಎದುರಿಸುವಂತಹ ಆಡಳಿತ ವೈಖರಿಯನ್ನು ಲೋಕಸೇವಾ ಆಯೋಗ ಅಳವಡಿಸಿಕೊಳ್ಳಬೇಕು. ಉತ್ತಮ ಆಡಳಿತಕ್ಕಾಗಿ ಸರ್ಕಾರಿ ನೌಕರರಿಗೆ ಗುಣಮಟ್ಟದ ಸೇವೆಗೆ ತರಬೇತಿ ನೀಡುವುದು ಅವಶ್ಯವಾಗಿದೆ ಎಂದರು.
ಲೋಕ ಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆ ಎತ್ತಿಹಿಡಿದು, ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾಪ್ರಭುತ್ವದ ಸ್ತಂಭಗಳಾಗಿವೆ. ಸಾರ್ವಜನಿಕ ಸೇವೆಯಲ್ಲಿ ಕರ್ನಾಟಕಕ್ಕೆ ಶ್ರೀಮಂತ ಐತಿಹ್ಯವಿದೆ. 1892ರಲ್ಲಿ ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ದಿವಾನ್ ಕೆ.ಶೇಷಾದ್ರಿ ಅಯ್ಯರ್ ಪ್ರಾರಂಭಿಸಿದರು. ಈ ಪ್ರಾರಂಭಿಕ ಹೆಜ್ಜೆಯು ವಿಶಿಷ್ಟ ಆಡಳಿತಗಾರರ ಪಡೆಯನ್ನು ನೇಮಕಾತಿ ಮಾಡಿಕೊಳ್ಳಲು ಭದ್ರಬುನಾದಿ ಹಾಕಲಾಯಿತು. ಈ ಪರಂಪರೆಯನ್ನು ನಮ್ಮ ರಾಜ್ಯ ಹೆಮ್ಮೆಯಿಂದ ಮುಂದುವರೆಸಿಕೊಂಡು ಬಂದಿದೆ ಎಂದು ಸಿಎಂ ಹೇಳಿದರು.
ಬ್ಯಾಕ್ಲಾಗ್ ಕೇಸ್ಗಳ ಬಗೆಹರಿಸಲು ಕ್ರಮ
ಕೆಪಿಎಸ್ಸಿ ನಿಯಮಗಳ 2021ನ್ನು ಪರಿಚಯಿಸಿದ್ದು, ಇದು ವ್ಯಕ್ತಿತ್ವ ಪರೀಕ್ಷೆಯ ಮೌಲ್ಯಕ್ಕಿಂತ, ಪ್ರಮಾಣೀಕರಿಸಿದ ಪ್ರಕ್ರಿಯೆಗಳಿಗೆ ಒತ್ತು ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆಗಳಂತಹ ಸವಾಲುಗಳನ್ನು ಎದುರಿಸುವುದು ನಮ್ಮ ಪ್ರಮುಖ ಆದ್ಯತೆ. ಪಾರದರ್ಶಕತೆಯನ್ನು ಖಾತ್ರಿಗೊಳಿಸಲು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಪುನಃ ಗಳಿಸಲು ದೃಢವಾದ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅತ್ಯಗತ್ಯ. ಲೋಕ ಸೇವಾ ಆಯೋಗಗಳ ವಿರುದ್ಧ ಇರುವ ಬ್ಯಾಕ್ಲಾಗ್ ಪ್ರಕರಣಗಳನ್ನು ಬಗೆಹರಿಸುವುದು ದತೆಯ ಸುಧಾರಣೆ ಹಾಗೂ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಲು ಮುಖ್ಯವಾಗಿದೆ ಎಂದು ಸಿಎಂ ಹೇಳಿದರು.
ಪ್ರಮುಖ ಸುಧಾರಣೆ:
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ವು 1951ರಲ್ಲಿ ಸಂವಿಧಾನಾತ್ಮಕ ಸಂಸ್ಥೆಯಾಗಿ ಸ್ಥಾಪನೆಯಾಗಿ ನಂತರದಲ್ಲಿ ಸಾಕಷ್ಟು ವಿಕಾಸಗೊಂಡಿದೆ. ದತೆ,ಪಾರದರ್ಶಕತೆಗೆ ಗುರುತಾಗಿದೆ. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನಮ್ಮ ಸರ್ಕಾರ ಕೆಲವು ಪ್ರಮುಖ ಸುಧಾರಣೆಗಳನ್ನು ಜಾರಿಮಾಡಿದೆ.ಗ್ರೂಪ್ “ಸಿ’ ಹುದ್ದೆಗಳಿಗೆ ಸಂದರ್ಶನವನ್ನು ರದ್ದುಗೊಳಿಸುವುದು, “ಬಿ’ ವೃಂದ ಹುದ್ದೆಗಳಿಗೆ ಹಾಗೂ ಗೆಜೆಟೆಡ್ ಪೋಬೇಶನರ್ಸ್ ಪರೀೆಗಳಲ್ಲಿ ಸಂದರ್ಶನದ ಅಂಕ ಕಡಿತಗೊಳಿಸಲಾಗಿದೆ. ನ್ಯಾಯಯುತ ಹಾಗೂ ಪಾರದರ್ಶಕತೆಯನ್ನು ಪೋತ್ಸಾಹಿಸಲು ನೇಮಕಾತಿ ಮಾದರಿಗಳನ್ನು ಸರಳೀಕೃತಗೊಳಿಸಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ದೇಶದ ಅಸ್ಮಿತೆ ಪುನರ್ಸ್ಥಾಪಿಸುವ ಅವಶ್ಯಕತೆ ಇದೆ:ಹೈಕೋರ್ಟ್ ನ್ಯಾ.ಶ್ರೀಶಾನಂದ ಅಭಿಮತ