

ವಾಷಿಂಗ್ಟನ್: ವಿರಳ ವಿದ್ಯಮಾನ ಒಂದರಲ್ಲಿ ವೆನಿಜುವೆಲಾದ ಸುಪ್ರೀಂ ಕೋರ್ಟ್ನ ಚೀಫ್ ಜಸ್ಟೀಸ್ ಬಂಧನಕ್ಕೆ 50 ಲಕ್ಷ ಡಾಲರ್ ಬಹುಮಾನವನ್ನು ಅಮೆರಿಕ ಘೋಷಿಸಿದೆ. ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೊಂಪಿಯೋ ಅವರು ಈ ವಿಷಯವನ್ನು ಘೋಷಿಸಿದ್ದರು. ಇದರ ಬೆನ್ನಿಗೆ ಲ್ಯಾಟಿನ್ ಅಮೆರಿಕನ್ ದೇಶದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್ನ ಚೀಫ್ ಜಸ್ಟೀಸ್ ಮೈಕಲ್ ಜೋಸ್ ಮೊರೆನೋ ಪೆರೆಝ್ ಅವರು ವೈಯಕ್ತಿಕವಾಗಿ ಹಣ ಅಥವಾ ಪ್ರಾಪರ್ಟಿಯನ್ನು ಲಂಚ ರೂಪದಲ್ಲಿ ಸ್ವೀಕರಿಸುತ್ತಿದ್ದಾರೆ. ಇದು ಇತ್ತೀಚಿನ ವರ್ಷದಲ್ಲಿ ವೆನಿಜುವೆಲಾದ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ಗಳ ತೀರ್ಪಿನ ಮೇಲೆ ಪರಿಣಾಮ ಬೀರುತ್ತಿದೆ. ನ್ಯಾಯ ನಿರ್ಣಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೊರೆನೊ ಪೆರೆಝ್ 20 ಕೇಸ್ಗಳಲ್ಲಿ ಲಂಚ ಸ್ವೀಕರಿಸಿದ್ದಾರೆ ಎಂದು ಮೈಕ್ ಪೊಂಪಿಯೋ ಹೇಳಿದ್ದಾರೆ.
ಅಮೆರಿಕವು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ವಿಷಯದಲ್ಲಿ ಬದ್ಧವಾಗಿದೆ. ಭ್ರಷ್ಟಾಚಾರ ಯಾರೇ ಮಾಡಿದರೂ ಅದನ್ನು ಸಹಿಸುವುದಿಲ್ಲ. ಮೊರೆನೊ ಸುಳ್ಳು ಆರೋಪಗಳನ್ನು ಹೊರಿಸುತ್ತ ಕೌಬಾಯ್ ಸ್ಟೈಲ್ನಲ್ಲಿ ರಿವಾರ್ಡ್ ಘೋಷಿಸುತ್ತ ವಿಚಿತ್ರ ರೀತಿಯಲ್ಲಿ ನ್ಯಾಯ ನಿರ್ಣಯ ಮಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ಪೊಂಪಿಯೋ ವಿವರಿಸಿದ್ದಾರೆ.
ಆದರೆ, ಡೊನಾಲ್ಡ್ ಟ್ರಂಪ್ ಸರ್ಕಾರದ ಆರೋಪವನ್ನು ತಳ್ಳಿಹಾಕಿರುವ ವೆನಿಜುವೆಲಾ ಸರ್ಕಾರ, ಟ್ರಂಪ್ ಸರ್ಕಾರ ವೆನಿಜುವೆಲಾದ ಜನರು ಮತ್ತು ಅದರ ಸಂವಿಧಾನಿಕ ಸಂಸ್ಥೆಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆಪಾದಿಸಿದೆ.
ಮೊರೆನೊ ಪೆರೆಝ್ ಅವರನ್ನು ಯುಎಸ್ ಟ್ರೆಷರಿ 2017ರ ಮೇ ತಿಂಗಳಿಂದ ಕಪ್ಪುಪಟ್ಟಿಯಲ್ಲಿ ಇರಿಸಿದೆ. ಪೆರೆಝ್ ಅವರು ವೆನಿಜುವೆಲಾದ ಪ್ರೆಸಿಡೆಂಟ್ ನಿಕೊಲಾಸ್ ಮಡುರೋ ಅವರ ಆಪ್ತರಾಗಿರುವುದೂ ಒಂದು ಕಾರಣ. 2017ರಲ್ಲಿ ವೆನಿಜುವೆಲಾದ ನ್ಯಾಷನಲ್ ಅಸೆಂಬ್ಲಿಯಲ್ಲಿ ವಿಪಕ್ಷವೇ ಆಡಳಿತ ಸೂತ್ರವನ್ನು ಕೈಗೆತ್ತಿಕೊಳ್ಳುವಂತೆ ಆಡಳಿತ ಪಕ್ಷವನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಇದು ಮಡುರೋ ಅವರಿಗೆ ಹಿನ್ನಡೆ ಉಂಟುಮಾಡಿತ್ತು.
ವಿಪಕ್ಷದ ನಡೆಗೆ ಅಮೆರಿಕ ಮತ್ತು 50ಕ್ಕೂ ಹೆಚ್ಚುದೇಶಗಳು ಬೆಂಬಲ ವ್ಯಕ್ತಪಡಿಸಿದ್ದವು. ಅಲ್ಲಿಂದೀಚೆಗೆ ಮಡುರೋ ಮತ್ತು ಅವರ ತಂಡದ ಮೇಲೆ ಅಮೆರಿಕ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತ ಬಂದಿದೆ. (ಏಜೆನ್ಸೀಸ್)