

ನವದೆಹಲಿ: ಅಮೆರಿಕದಲ್ಲಿ ಖಲಿಸ್ತಾನಿಗಳ ನಾಚಿಕೆಗೇಡಿನ ಕೃತ್ಯಗಳು ಬೆಳಕಿಗೆ ಬಂದಿವೆ. ಇಲ್ಲಿ ಖಲಿಸ್ತಾನಿಗಳು ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡಿದ್ದಾರೆ. ದೇವಸ್ಥಾನದ ಗೋಡೆಗಳ ಮೇಲೂ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಭಾರತವು ಇದನ್ನು ಖಂಡಿಸಿದ್ದು, ಅಮೆರಿಕದ ಅಧಿಕಾರಿಗಳಿಂದ ತನಿಖೆ ಮತ್ತು ವಿಧ್ವಂಸಕರ ವಿರುದ್ಧ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದ ನೆವಾರ್ಕ್ ನಗರದಲ್ಲಿ. ಖಲಿಸ್ತಾನಿ ಬೆಂಬಲಿಗರು ಇಲ್ಲಿನ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದು, ಕಪ್ಪು ಎರಚುವ ಮೂಲಕ ಗೋಡೆಗಳ ಮೇಲೆ ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಬರೆಯಲಾಗಿದೆ. ದೇವಸ್ಥಾನದ ಈ ಚಿತ್ರಗಳನ್ನು ಹಿಂದೂ ಅಮೇರಿಕಾ ಫೌಂಡೇಶನ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಶನಿವಾರ ಸ್ವಾಮಿನಾರಾಯಣ ದೇವಸ್ಥಾನದ ಮೇಲಿನ ದಾಳಿಯನ್ನು ಖಂಡಿಸಿದೆ ಮತ್ತು ಘಟನೆಯು ಭಾರತೀಯ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದೆ. ರಾಯಭಾರ ಕಚೇರಿಯು ಪ್ರಕರಣದ ತ್ವರಿತ ತನಿಖೆ ಮತ್ತು ಆರೋಪಿಗಳ ವಿರುದ್ಧ ತಕ್ಷಣದ ಕ್ರಮಕ್ಕೆ ಮನವಿ ಮಾಡಿದೆ.
ಹಿಂದೂ ಅಮೇರಿಕಾ ಫೌಂಡೇಶನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಿತ್ರಗಳಲ್ಲಿ ದೇವಸ್ಥಾನದ ಗೋಡೆಯ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಇದಲ್ಲದೇ ಖಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಹೆಸರನ್ನೂ ಕಪ್ಪು ಶಾಯಿಯಲ್ಲಿ ಬರೆಯಲಾಗಿದೆ. ಖಲಿಸ್ತಾನ್ ಭಯೋತ್ಪಾದಕ ಭಿಂದ್ರನ್‌ವಾಲೆಯ ಹೆಸರನ್ನು ದೇವಸ್ಥಾನಕ್ಕೆ ಹೋಗುವವರಿಗೆ ಆಘಾತವನ್ನುಂಟುಮಾಡಲು ಮತ್ತು ಹಿಂಸಾಚಾರದ ಭಯವನ್ನು ಸೃಷ್ಟಿಸಲು ಬರೆಯಲಾಗಿದ್ದು, ಹಿಂದೂ ಅಮೆರಿಕ ಫೌಂಡೇಶನ್, ದ್ವೇಷದ ಅಪರಾಧದ ಅಡಿಯಲ್ಲಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ. ಈ ಬಗ್ಗೆ ದೇವಸ್ಥಾನಕ್ಕೆ ಸಂಬಂಧಿಸಿದವರು ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ, ಅಮೆರಿಕದಲ್ಲಿ ದೇವಸ್ಥಾನವೊಂದರ ಮೇಲೆ ಈ ರೀತಿ ದಾಳಿ ನಡೆದಿರುವುದು ಇದೇ ಮೊದಲಲ್ಲ. ಅಮೆರಿಕದ ಮೊದಲು, ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾದಲ್ಲೂ ಇಂತಹ ಘಟನೆಗಳು ಕಂಡುಬಂದಿವೆ.
ಕಳೆದ ಕೆಲವು ತಿಂಗಳುಗಳಲ್ಲಿ, ವಿದೇಶಗಳಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡಿರುವ ಘಟನೆಗಳು ನಡೆದಿವೆ. ಕೆಲ ಸಮಯದ ಹಿಂದೆ ಖಲಿಸ್ತಾನಿ ಬೆಂಬಲಿಗರು ಕೆನಡಾದ ಸರ್ರೆಯಲ್ಲಿರುವ ದೇವಾಲಯದ ಗೇಟ್‌ನಲ್ಲಿ ಪೋಸ್ಟರ್‌ಗಳನ್ನು ಹಾಕಿದ್ದರು. ಇದರಲ್ಲಿ ಭಯೋತ್ಪಾದಕ ಹರ್ದೀಪ್ ಸಿಂಗ್ನಿ ಜ್ಜರ್ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಮಾತುಗಳು ಕೇಳಿಬಂದಿದ್ದವು. ಈ ವರ್ಷ ಜೂನ್‌ನಲ್ಲಿ ಕೆನಡಾದ ಸರ್ರೆ ನಗರದ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ನಿಜ್ಜರ್‌ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ನಿಜ್ಜರ್ ಅವರನ್ನು ಕೆನಡಾದ ಪ್ರಜೆ ಎಂದು ಕರೆದಿದ್ದು, ಅವರ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳನ್ನು ಭಾರತ ತಿರಸ್ಕರಿಸಿತ್ತು. ನಿಜ್ಜರ್ ಹತ್ಯೆಯ ನಂತರ, ಕೆನಡಾದ ಹಲವು ಸ್ಥಳಗಳಲ್ಲಿ ಖಲಿಸ್ತಾನಿ ಬೆಂಬಲಿಗರು ರ್ಯಾಲಿಗಳನ್ನು ನಡೆಸಿದರು.