ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್:‌ 'ಇಂಡಿಯಾ ಮೈತ್ರಿಕೂಟ-ಕಾಂಗ್ರೆಸ್​​ ಸರ್ಕಾರ ರಚಿಸಿದರೆ ಇಸ್ಲಾಮಿಕ್ ಕಾನೂನು ಜಾರಿಗೆ ಬರಲಿದೆ'

giriraj
Published on

ಬೆಂಗಳೂರು: ಊಟ ಹಾಗೂ ಬಟ್ಟೆ ಅವರವರ ಇಷ್ಟ. ಯಾರೂ ಅದನ್ನು ವಿರೋಧಿಸಬಾರದು. ಸದ್ಯ ರಾಜ್ಯದಲ್ಲಿ ಜಾರಿಯಲ್ಲಿರುವ ಹಿಬಾಬ್‌ ನಿಷೇಧ ಆದೇಶವನ್ನು ಹಿಂಪಡೆಯಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಯ ಕುರಿತು ಇದೀಗ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ.

ಈ ಹೇಳಿಕೆಯ ಕುರಿತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದು, ಅವರು ಕೇವಲ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುತ್ತಿಲ್ಲ, ರಾಜ್ಯದಲ್ಲಿ ಶರಿಯಾ ಕಾನೂನನ್ನು ಜಾರಿಗೊಳಿಸಲಾಗುತ್ತಿದೆ. ಒಂದು ವೇಳೆ ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಸರ್ಕಾರ ರಚಿಸಿದರೆ, ಇಸ್ಲಾಮಿಕ್ ಕಾನೂನು ಜಾರಿಗೆ ಬರಲಿದೆ ಎಂದರು.

ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕೋಲಾಹಲ ಸೃಷ್ಟಿಸಿದ್ದ ಹಿಜಾಬ್ ವಿವಾದ ಇದೀಗ ಲೋಕಸಭಾ ಚುನಾವಣೆ ಹೊತ್ತಲಿ ಮತ್ತೆ ಮುನ್ನಲೆಗೆ ಬಂದಿದೆ.

ಈ ಕುರಿತು ದೆಹಲಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ಸಿಎಂ ಅವರಿಂದ ಇಂಥ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹಿಜಾಬ್ ನಿಷೇಧ ಹಿಂಪಡೆದುಕೊಳ್ಳುವ ಸಿಎಂ ಹೇಳಿಕೆ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತ್ಯಾತೀತೆಯ ಬಗ್ಗೆ ಪ್ರಶ್ನಿಸುವಂತಿದೆ. ಶಿಕ್ಷಣ ಕೇಂದ್ರ/ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆಗೆ ಅವಕಾಶ ನೀಡಿದರೆ ಯುವ ಜನಾಂಗವನ್ನು ಧಾರ್ಮಿಕವಾಗಿ ವಿಭಜಿಸಲು ಉತ್ತೇಜನೆ ನೀಡಿದಂತಾಗುತ್ತದೆ. ಇದು ಅಂತರ್ಗತ ಕಲಿಕೆಯ ವಾತಾವರಣವನ್ನು ತಡೆಯುವ ಸಾಧ್ಯತೆ ಇರುತ್ತೆ. ವಿಭಜನೆಗೆ ಅವಕಾಶ ನೀಡುವ ಬದಲು ಶಿಕ್ಷಣಕ್ಕೆ ಆದ್ಯತೆ ನೀಡುವುದು ಮುಖ್ಯವಾಗುತ್ತದೆ. ಧಾರ್ಮಿಕ ಆಚರಣೆಗಳ ಪ್ರಭಾವವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣದ ಮೇಲೆ ಕೇಂದ್ರೀಕರಿಸುವ ವಾತಾವರಣವನ್ನು ಬೆಳೆಸುವುದು ನಿರ್ಣಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net