Chabahar port| ಚಬಹಾರ್ ಬಂದರಿನ ಮೇಲಿನ ಅಮೆರಿಕದ ನಿರ್ಬಂಧಗಳಿಂದ ಭಾರತಕ್ಕೆ ಆರು ತಿಂಗಳ ವಿನಾಯಿತಿ ನೀಡಿದ ಅಮೆರಿಕ: ವಿದೇಶಾಂಗ ಸಚಿವಾಲಯ

Chabahar port
Published on

ನವದೆಹಲಿ: ಇರಾನ್‌ನ ಚಾಬಹಾರ್ ಬಂದರಿನ(Chabahar port) ಮೇಲಿನ ಅಮೆರಿಕದ ನಿರ್ಬಂಧಗಳಿಂದ ಭಾರತಕ್ಕೆ ಆರು ತಿಂಗಳ ವಿನಾಯಿತಿ ನೀಡಿದೆ ಎಂದು ವಿದೇಶಾಂಗ ಸಚಿವಾಲಯ (MEA) ಗುರುವಾರ (ಅ.30) ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇರಾನ್‌ನ ಚಾಬಹಾರ್ ಬಂದರಿಗೆ, ಅಮೆರಿಕದ ನಿರ್ಬಂಧಗಳಿಂದ ನಮಗೆ ಆರು ತಿಂಗಳ ಅವಧಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಈ ಕ್ರಮವು ಪಾಕಿಸ್ತಾನವನ್ನು ಬೈಪಾಸ್ ಮಾಡಿ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಪ್ರಮುಖ ವ್ಯಾಪಾರ ಮತ್ತು ಸಂಪರ್ಕ ಮಾರ್ಗವಾಗಿ ಕಾರ್ಯನಿರ್ವಹಿಸುವ ಆಯಕಟ್ಟಿನ ಪ್ರಮುಖ ಬಂದರು ಯೋಜನೆಯಲ್ಲಿ ಭಾರತ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಇರಾನ್‌ನ ಚಾಬಹಾರ್ ಬಂದರು ಯೋಜನೆಯ ಮೇಲಿನ ನಿರ್ಬಂಧಗಳು ಸೆಪ್ಟೆಂಬರ್, 29 ರಂದು ಜಾರಿಗೆ ಬಂದ ಒಂದು ತಿಂಗಳ ನಂತರ ಭಾರತಕ್ಕೆ ತಾತ್ಕಾಲಿಕ ವಿನಾಯಿತಿ ನೀಡುವ ಬಗ್ಗೆ ಇತ್ತೀಚಿನ ಯುಎಸ್​ನಿಂದ ನಿರ್ಧಾರ ಬಂದಿದೆ.

ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ಒತ್ತಡ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ವ್ಯಾಪಕ ಪ್ರಯತ್ನದ ಭಾಗವಾಗಿ ಈ ನಿರ್ಬಂಧಗಳು ಜಾರಿಯಲ್ಲಿದ್ದವು. ಈ ಕ್ರಮವು ಭಾರತದ ಮೇಲೂ ಪರಿಣಾಮ ಬೀರಿದೆ. ಈ ನಿರ್ಬಂಧಗಳು ನಿರ್ದಿಷ್ಟವಾಗಿ ಚಾಬಹಾರ್ ಬಂದರಿನ ಅಭಿವೃದ್ಧಿಯಲ್ಲಿ ಭಾರತದ ಭಾಗವಹಿಸುವಿಕೆಯನ್ನು ಗುರಿಯಾಗಿರಿಸಿಕೊಂಡಿದೆ. ಇರಾನ್ ಮೇಲೆ ವಿಶ್ವಸಂಸ್ಥೆಯ ವ್ಯಾಪಕ ನಿರ್ಬಂಧಗಳನ್ನು ಮತ್ತೆ ಹೇರಿದ ನಂತರ ಈ ಕ್ರಮಗಳು ಜಾರಿಗೆ ಬಂದವು.

2018 ರಲ್ಲಿ, ಟ್ರಂಪ್ ಆಡಳಿತವು ಭಾರತಕ್ಕೆ ಒಂದು ವಿನಾಯಿತಿಯನ್ನು ನೀಡಿತ್ತು. ಇರಾನ್ ಮೇಲೆ ಅಮೆರಿಕದ ವ್ಯಾಪಕ ನಿರ್ಬಂಧಗಳ ಹೊರತಾಗಿಯೂ ಭಾರತೀಯ ಕಂಪನಿಗಳು ಚಬಹಾರ್‌ನಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲು ಅವಕಾಶ ನೀಡುವ ವಿನಾಯಿತಿಯನ್ನು ನೀಡಿತು. ಪ್ರಾದೇಶಿಕ ಚಲನಶೀಲತೆಯಲ್ಲಿ ಬದಲಾವಣೆ ಹಾಗೂ ಅಫ್ಘಾನಿಸ್ತಾನದಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರದ ಪತನ, ವಾಷಿಂಗ್ಟನ್ ಕಳೆದ ತಿಂಗಳು ವಿನಾಯಿತಿಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು.

ರಷ್ಯಾದ ಕಚ್ಚಾ ತೈಲ ಆಮದು

ರಷ್ಯಾದಿಂದ ಭಾರತದ ತೈಲ ಆಮದು ಕುರಿತ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ನಮ್ಮ ನಿರ್ಧಾರಗಳು ಸ್ವಾಭಾವಿಕವಾಗಿ ಜಾಗತಿಕ ತೈಲ ಮಾರುಕಟ್ಟೆಯ ವಿಕಸನಗೊಳ್ಳುತ್ತಿರುವ ಚಲನಶೀಲತೆಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ ಎಂದಿದ್ದಾರೆ. ಅಲ್ಲದೆ, ರಷ್ಯಾದ ತೈಲ ಕಂಪನಿಗಳ ಮೇಲಿನ ಇತ್ತೀಚಿನ ಅಮೆರಿಕದ ನಿರ್ಬಂಧಗಳ ಪರಿಣಾಮಗಳನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಅಮೆರಿಕ ಜೊತೆಗಿನ ಭಾರತದ ಸಂಬಂಧಗಳ ಕುರಿತು ಪ್ರತಿಕ್ರಿಯಿಸಿದ ಜೈಸ್ವಾಲ್, ನಾವು ಅಮೆರಿಕದೊಂದಿಗಿನ ತನ್ನ ಪಾಲುದಾರಿಕೆಯನ್ನು ಗೌರವಿಸುವುದನ್ನು ಮುಂದುವರೆಸಿದ್ದೇವೆ. ಭಾರತ-ಯುಎಸ್ ಸಂಬಂಧವು ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ. ಇದನ್ನು ಮತ್ತಷ್ಟು ಬಲಪಡಿಸಲು ನಾವು ಎರಡೂ ದೇಶಗಳೊಂದಿಗೆ ತೊಡಗಿಸಿಕೊಂಡಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಎಲ್ಲಾ ಆಮದುಗಳ ಮೇಲೆ ಶೇ.50 ರಷ್ಟು ಸುಂಕವನ್ನು ಘೋಷಿಸಿದೆ ಮತ್ತು ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುವುದನ್ನು ಗುರಿಯಾಗಿಟ್ಟುಕೊಂಡು ಹೆಚ್ಚುವರಿ ಶೇ.25 ರಷ್ಟು ದಂಡವನ್ನು ವಿಧಿಸಿದ್ದಾರೆ. ಅಲ್ಲದೆ, ಮಾಸ್ಕೋ ಜೊತೆಗಿನ ನವದೆಹಲಿಯ ತೈಲ ವ್ಯಾಪಾರವು ಪರೋಕ್ಷವಾಗಿ ರಷ್ಯಾದ ಯುಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸಲು ಕೊಡುಗೆ ನೀಡುತ್ತದೆ ಎಂದು ಯುಎಸ್​​​​​ ವಾದಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net