ಡೊನಾಲ್ಡ್ ಟ್ರಂಪ್ ಗುಟುರು ಮತ ಎಣಿಕೆ ಸ್ಥಗಿತಕ್ಕೆ ಆಗ್ರಹ

America Election
Published on

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿರುವ ಮಧ್ಯೆಯೇ, ಮರುಆಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಮಧ್ಯೆ ಚುನಾವಣಾ ಅಕ್ರಮ ಕುರಿತು ಕಾನೂನು ಹೋರಾಟದ ಸವಾಲು- ಜವಾಬು ನಡೆದಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಟ್ರಂಪ್ ಸುಪ್ರೀಂಕೋರ್ಟ್​ಗೆ ಹೋಗುವುದಾಗಿ ಗುಟುರು ಹಾಕಿದ್ದಾರೆ. ಈ ಸವಾಲನ್ನು ಸ್ವೀಕರಿಸಿರುವ ಬಿಡೆನ್, ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ತಿರುಗೇಟು ನೀಡಿದ್ದಾರೆ.

ವಾಷಿಂಗ್ಟನ್: ಅಂಚೆ ಮತಪತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಗೆ ಹೆಚ್ಚು ಮತ ಸಂದಾಯವಾಗಿರುವುದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ರಮದ ಆಪಾದನೆ ಮಾಡಿದ್ದಾರೆ. ನಿಗದಿತ ಅವಧಿಯ ನಂತರವೂ ಅಂಚೆ ಮತಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ದೂರಿದ್ದಾರೆ. ರಿಪಬ್ಲಿಕನ್ ಪಕ್ಷದ ಪರವಾಗಿರುವ ಪೆನ್ಸಿಲ್ವೇನಿಯಾದಲ್ಲೇ ಅಂಚೆ ಮತಪತ್ರದಲ್ಲಿ ಹಿನ್ನಡೆಯಾಗಿರುವುದು ಅವರನ್ನು ಕೆರಳಿಸಿದೆ. ಅಂಚೆ ಮತ ಪತ್ರದ ಎಣಿಕೆ ಮುಗಿಯುವುದಕ್ಕೂ ಮುನ್ನವೇ ಟ್ರಂಪ್ ಗೆಲುವನ್ನು ಘೋಷಿಸಿಕೊಂಡಿದ್ದಾರೆಂಬುದು ಡೆಮಾಕ್ರಟಿಕ್ ಪಕ್ಷದ ಮುಖಂಡ ಟೀಕೆ. ‘ಚುನಾವಣೆ ವಿವಾದಾತ್ಮಕವಾಗಿದ್ದು, ಕಾನೂನಿನ ಮಧ್ಯಪ್ರವೇಶ ಅಗತ್ಯವಿದೆ. ಈ ಪ್ರಕ್ರಿಯೆ ಮುಗಿಯುವವರೆಗೂ ಎಣಿಕೆ ಸ್ಥಗಿತಗೊಳಿಸಬೇಕು ಎಂಬುದು’ ನಮ್ಮ ಮನವಿ ಎಂದು ಟ್ರಂಪ್ ಹೇಳಿದ್ದಾರೆ. ‘ಡೆಮಾಕ್ರಟಿಕ್ ಪಕ್ಷದವರು ಚುನಾವಣೆಯಲ್ಲಿ ಅಕ್ರಮ ನಡೆಸಿದ್ದಾರೆ. ಮತ ಎಣಿಕೆ ವಿವಾದಾತ್ಮಕವಾಗಿದೆ. ನಾವು ಹಲವು ರಾಜ್ಯಗಳಲ್ಲಿ ಗೆದ್ದಿದ್ದೇವೆ. ರಿಪಬ್ಲಿಕನ್ನರು ಸುಂದರ ಗೆಲುವಿನ ಸಂಭ್ರಮಕ್ಕೆ ಕಾಯುತ್ತಿದ್ದಾರೆ. ಆದರೆ, ಫಲಿತಾಂಶ ಅಧಿಕೃತವಾಗಿ ಘೋಷಣೆಯಷ್ಟೆ ಬಾಕಿ ಇರುವಾಗ ಇದ್ದಕ್ಕಿದ್ದಂತೆ ವಂಚನೆಗಳು ಬೆಳಕಿಗೆ ಬರುತ್ತಿವೆ’ ಎಂದು ಶ್ವೇತಭವನದಲ್ಲಿ ಮಂಗಳವಾರ ರಾತ್ರಿ 2.30ಕ್ಕೆ ಮಾಡಿದ ಭಾಷಣದಲ್ಲಿ ಟ್ರಂಪ್ ಆರೋಪಿಸಿದ್ದಾರೆ. ಚುನಾವಣೆಗೂ ಕೆಲವು ತಿಂಗಳು ಮುಂಚೆ ಸುಪ್ರೀಂಕೋರ್ಟ್​ಗೆ ಟ್ರಂಪ್ ಕೆಲವು ಜಡ್ಜ್​ಗಳನ್ನು ನೇಮಕ ಮಾಡಿರುವುದರಿಂದ ಕಾನೂನು ಹೋರಾಟದಲ್ಲಿ ಅವರಿಗೆ ಜಯವಾಗಬಹುದು ಎಂದು ಹೇಳಲಾಗುತ್ತಿದೆ.

‘ಮತ ಎಣಿಕೆ ನಿಲ್ಲುವುದಿಲ್ಲ. ಒಂದೊಂದೇ ರಾಜ್ಯಗಳಿಂದ ಫಲಿತಾಂಶ ಬರುತ್ತಿದೆ. ಇದು ಅಧ್ಯಕ್ಷರಲ್ಲಿ (ಟ್ರಂಪ್) ಹತಾಶೆ ಉಂಟು ಮಾಡುತ್ತಿದೆ. ಅವರು ಕೋರ್ಟ್​ಗೆ ಹೋಗುವುದಾದರೆ ಸಂತೋಷ, ಕಾನೂನಾತ್ಮಕವಾಗಿಯೇ ಮತಗಳು ಋಜುವಾತು ಆಗಲಿದೆ. ನಮ್ಮ ಕಾನೂನು ತಂಡವು ಸಿದ್ಧವಿದೆ’ ಎಂದು ಜೋ ಬಿಡೆನ್​ರ ಪ್ರಚಾರದ ವ್ಯವಸ್ಥಾಪಕ ಜೆನ್ ಒ ಮ್ಯಾಲಿ ಡಿಲನ್ ತಿಳಿಸಿದ್ದಾರೆ.

ಫ್ಲಾರಿಡಾ ಗೆದ್ದವರಿಗೆ ಅಧಿಕಾರ!

ಅಮೆರಿಕದ ಶತಮಾನದ ರಾಜಕೀಯ ಇತಿಹಾಸದಲ್ಲಿ ‘ಸ್ವಿಂಗ್ ರಾಜ್ಯ’ಗಳಲ್ಲಿ ಜಯಗಳಿಸಿದ ರಿಪಬ್ಲಿಕನ್ ನಾಯಕರೇ ಅಧ್ಯಕ್ಷ ಗಾದಿಗೇರಿರುವ ಉದಾಹರಣೆಗಳಿವೆ. ಫ್ಲಾರಿಡಾ ಅಂತಹ ‘ಸ್ವಿಂಗ್ ರಾಜ್ಯ’ಗಳಲ್ಲಿ ಪ್ರಮುಖವಾಗಿದ್ದು, ಸದ್ಯ ಅಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದಾರೆ. ಫ್ಲಾರಿಡಾ ರಾಜಕಾರಣವನ್ನು ಭಾರತಕ್ಕೆ ಹೋಲಿಸುವುದಾದರೆ ಉತ್ತರಪ್ರದೇಶ ರೀತಿಯ ರಾಜಕೀಯವನ್ನು ಹೊಂದಿದೆ. ಫ್ಲಾರಿಡಾದ ಮತದಾರರು ಪ್ರತಿ ಬಾರಿಯೂ ಸರ್ಕಾರವನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಚುನಾವಣೆ ವಿವಾದವಾದರೆ ಮುಂದೇನು?

ಮತದಾನ ಮತ್ತು ಎಣಿಕೆಯಲ್ಲಿ ಅಕ್ರಮದ ಕುರಿತ ದೂರು ದಾಖಲಾದರೆ ಈ ಪ್ರಕರಣಗಳು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್​ಗೆ ಹೋಗುತ್ತವೆ. ಇದು ವಿಚಾರಣೆಗೆ ಸ್ವೀಕೃತವಾದರೆ ಮರು ಎಣಿಕೆಗೆ ಆದೇಶ ನೀಡಬಹುದು. ರಿಪಬ್ಲಿಕನ್ ಪಕ್ಷ ‘ಎಂಟು ಬ್ಯಾಟಲ್ ಗ್ರೌಂಡ್’ ರಾಜ್ಯಗಳಲ್ಲಿ ಈ ತಕರಾರು ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಉಳಿದ ರಾಜ್ಯಗಳಲ್ಲಿ ಸ್ಥಳೀಯವಾಗಿ ದೂರು ಅರ್ಜಿ ದಾಖಲಾಗುವ ಸಂಭವ ಇದೆ. ಮರು ಎಣಿಕೆಗೆ ಕೋರ್ಟ್ ಆದೇಶದ ಹೊರತಾಗಿಯೂ ಡಿ.14ಕ್ಕೆ ಅಧಿಕೃತವಾಗಿ ನಡೆಯುವ ಅಧ್ಯಕ್ಷರ ಚುನಾವಣೆ (ಎಲೆಕ್ಟೋರಲ್ ಕಾಲೇಜುಗಳ ಸದಸ್ಯರಿಂದ ಮತದಾನ)ಮತ್ತು ಅದನ್ನು ರಾಜ್ಯಗಳ ಗವರ್ನರ್​ಗಳು ಪ್ರಮಾಣೀಕರಿಸುವಿಕೆ ಹಾಗೂ ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ಪ್ರಮುಖವಾಗುತ್ತದೆ. ಇಷ್ಟಾಗಿಯೂ ವಿವಾದ ಮುಂದುವರಿದರೆ ಸುಪ್ರೀಂಕೋರ್ಟ್ ಮಧ್ಯಪ್ರವೇಶದಲ್ಲಿ ಪ್ರಕರಣ ಇತ್ಯರ್ಥವಾಗುತ್ತವೆ. ಆದರೆ, ಈ ಎಲ್ಲ ಪ್ರಕ್ರಿಯೆಗಳು ಹೊಸ ಅಧ್ಯಕ್ಷರ ಪದಗ್ರಹಣದೊಳಗೆ (ಜ.20) ಮುಗಿಯಬೇಕು. 2000 ಇಸ್ವಿಯಲ್ಲಿ ಫ್ಲಾರಿಡಾ ರಾಜ್ಯದ ಎಲೆಕ್ಟೋರಲ್ ಚುನಾವಣೆ ವಿವಾದವಾಗಿ ಪರಿಣಮಿಸಿತು. 537 ಮತಗಳ ಅಂತರದಿಂದ ಜಯ ದಾಖಲಿಸಿದ ರಿಪಬ್ಲಿಕನ್ ಪಕ್ಷದ ಜಾರ್ಜ್ ಡಬ್ಲ್ಯೂ ಬುಷ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಅಲ್ ಗೋರ್ ದಾವೆ ಹೂಡಿದ್ದರು. ಇದರಿಂದ ಮತ ಮರುಎಣಿಕೆಗೆ ಆದೇಶಿಸಲಾಗಿತ್ತು.

ಸೋಲುಂಡ ಭಾರತ ಮೂಲದವರು

  • ಶ್ರೀನಿವಾಸ್ ರಾವ್ ಕುಲಕರ್ಣಿ (ಡೆಮಾಕ್ರಟಿಕ್) ಟೆಕ್ಸಾಸ್​ನ 22ನೇ ಜಿಲ್ಲೆ
  • ಮಂಗಾ ಅನಂತತ್ಮುಲಾ (ರಿಪಬ್ಲಿಕನ್ ) ವರ್ಜಿನಿಯಾದ 11ನೇ ಜಿಲ್ಲೆ
  • ನಿಶಾ ಶರ್ಮಾ (ರಿಪಬ್ಲಿಕನ್) ಕ್ಯಾಲಿಫೋರ್ನಿಯಾದ 11ನೇ ಜಿಲ್ಲೆ
  • ರಿಕ್ ಮೆಹ್ತಾ (ರಿಪಬ್ಲಿಕನ್) ನ್ಯೂಜೆರ್ಸಿಯ ರಾಜ್ಯ ಸೆನೆಟ್

11 ರಾಜ್ಯಗಳಲ್ಲಿ ರಾಜ್ಯಪಾಲರ ಆಯ್ಕೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಜತೆಗೆ 11 ರಾಜ್ಯಗಳ ರಾಜ್ಯಪಾಲರ ಚುನಾವಣೆಯೂ ನಡೆದಿದೆ. ಡೆಲವೇರ್, ಇಂಡಿಯಾನಾ, ಮೊಂಟಾನಾ, ಮಿಸೌರಿ, ಉತ್ತರ ಕೆರೊಲಿನಾ, ಉತ್ತರ ಡಕೋಟಾ, ನ್ಯೂ ಹ್ಯಾಂಪ್​ಷೇರ್, ಉತಾಹ್, ವರ್ವೆಂಟ್, ವಾಷಿಂಗ್ಟನ್, ಪಶ್ಚಿಮ ವರ್ಜೀನಿಯಾ ರಾಜ್ಯಗಳಲ್ಲಿ ನೂತನ ರಾಜ್ಯಪಾಲರ ಆಯ್ಕೆ ನಡೆದಿದೆ.

ಸಂಭಾವ್ಯ ಹಿಂಸಾಚಾರದ ಎಚ್ಚರಿಕೆ

ಅಮೆರಿಕ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನವೆಂಬರ್ 4ರಿಂದ 7ರವರೆಗೆ ವಾಷಿಂಗ್ಟನ್ ಡಿಸಿಯಾದ್ಯಂತ ಅಶಾಂತಿ ಸೃಷ್ಟಿಸಲು ಸಂಭಾವ್ಯ ಸಂಚು ನಡೆದಿದೆ ಎಂದು ನ್ಯಾಷನಲ್ ಸೆಕ್ಯೂರಿಟಿ ಇಂಟಗ್ರೇಷನ್ ಸೆಂಟರ್ ಎಚ್ಚರಿಕೆ ನೀಡಿದೆ. ವಾಷಿಂಗ್ಟನ್ ಡಿಸಿಯಲ್ಲಿ ಪ್ರತಿಭಟನೆ ನಡೆಸುವ ಸಲುವಾಗಿ ಜಾಲತಾಣಗಳಲ್ಲಿ ಕೆಲ ಗುಂಪುಗಳು ಕರೆ ನೀಡಿವೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

270 ಎಲೆಕ್ಟೋರಲ್ ಬೆಂಬಲವೇ ಅಂತಿಮ

ಅಧ್ಯಕ್ಷರ ಆಯ್ಕೆ ಜನಪ್ರಿಯ ಮತ (ಪಾಪ್ಯುಲರ್ ವೋಟ್)ದ ಮೂಲಕ ಆಗುವುದಿಲ್ಲ. 538 ಎಲೆಕ್ಟೋರಲ್ ಕಾಲೇಜುಗಳಲ್ಲಿ 270ರ ಬೆಂಬಲ ಪಡೆದವರು ಚುನಾಯಿತರಾಗುತ್ತಾರೆ. 2016ರಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ 30 ಲಕ್ಷಕ್ಕೂ ಹೆಚ್ಚು ಜನಪ್ರಿಯ ಮತಗಳ ಮುನ್ನಡೆ ಪಡೆದಿದ್ದರೂ ಅವರು 232 ಎಲೆಕ್ಟೋರಲ್ ಕಾಲೇಜಿನ ಬೆಂಬಲವನ್ನೆಷ್ಟೆ ಪಡೆದರು.ಆದರೆ, ಟ್ರಂಪ್​ಗೆ ಪಾಪ್ಯುಲರ್ ವೋಟ್ ಕಡಿಮೆ ದಾಖಲಾಗಿದ್ದರೂ 306 ಎಲೆಕ್ಟೋರಲ್ ಕಾಲೇಜುಗಳು ಅವರ ಬೆನ್ನಿಗೆ ಇತ್ತು. ಯಾವುದೇ ಅಭ್ಯರ್ಥಿಗೆ 270 ಎಲೆಕ್ಟೋರಲ್ ಕಾಲೇಜುಗಳ ಬೆಂಬಲ ದೊರೆಯದಿದ್ದರೆ ಸಂವಿಧಾನದ 12ನೇ ತಿದ್ದುಪಡಿ ಅನ್ವಯ ಹೌಸ್ ಆಫ್ ರೆಪ್ರಸೆಂಟಟೀವ್ಸ್ ಸದಸ್ಯರು ಹೊಸ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸತ್ ಚುನಾಯಿಸುತ್ತದೆ.

  • ಡೆಮಾಕ್ರಟಿಕ್ ಪಕ್ಷದ ರಿಚ್ಚಿ ಟೊರೆಸ್ ಸಂಸತ್​ಗೆ ಆಯ್ಕೆಯಾದ ಮೊದಲ ಸಲಿಂಗಿ, ಕಪು್ಪವರ್ಣದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನ್ಯೂಯಾರ್ಕ್​ನ 15ನೇ ಜಿಲ್ಲೆಯಲ್ಲಿ ರಿಚ್ಚಿ ಜಯಗಳಿಸಿದ್ದಾರೆ.
  • ಡೆಮಾಕ್ರಟಿಕ್ ಅಭ್ಯರ್ಥಿ ಸಾರಾ ಮೆಕ್​ಬ್ರೖೆಡ್ ಡೆಲವೇರ್​ನ ರಾಜ್ಯ ಸೆನೆಟ್​ಗೆ ಆಯ್ಕೆಯಾಗುವ ಮೂಲಕ ಆ ಸ್ಥಾನಕ್ಕೇರಿದ ಮೊದಲ ತೃತೀಯ ಲಿಂಗಿ ಆಗಿದ್ದಾರೆ.

ಯಾರೇ ಗೆದ್ರೂ ಭಾರತದ ಸಾಥ್ ಬೇಕೇಬೇಕು!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅಥವಾ ಜೋ ಬಿಡೆನ್ ಯಾರೇ ಗೆದ್ದರೂ ಅಮೆರಿಕಕ್ಕೆ ಇತ್ತೀಚೆಗೆ ಹೆಚ್ಚು ಕಂಟಕವಾಗಿರುವ ಚೀನಾವನ್ನು ಮಣಿಸಲು ಭಾರತದೊಂದಿಗೆ ಕೈಜೋಡಿಸಬೇಕಾಗುತ್ತದೆ. ಭಾರತ ಮತ್ತು ಅಮೆರಿಕ ಎರಡಕ್ಕೂ ಚೀನಾ ಸದ್ಯ ತಲೆನೋವಾಗಿ ಪರಿಣಮಿಸಿದ್ದು, ಭದ್ರತೆ, ಆರ್ಥಿಕತೆ ಮುಂತಾದ ವಿಷಯಗಳಲ್ಲಿ ಚೀನಾದೊಂದಿಗೆ ಭಿನ್ನಾಭಿಪ್ರಾಯಗಳಿವೆ. ಕರೊನಾ ಸಾಂಕ್ರಾಮಿಕತೆ ಕುರಿತು ಚೀನಾ ವಿರುದ್ಧ ಟ್ರಂಪ್ ಬಹಿರಂಗವಾಗಿಯೇ ಟೀಕೆ ಮಾಡಿದ ಬಳಿಕ ಉಭಯ ದೇಶಗಳ ನಡುವಿನ ವೈಮನಸ್ಸು ದುಪ್ಪಟ್ಟಾಗಿದೆ. ಹೀಗಾಗಿ ದಕ್ಷಿಣ ಏಷ್ಯಾ ಭಾಗದಲ್ಲಿ ಚೀನಾವನ್ನು ಮಣಿಸಲು ಟ್ರಂಪ್ ಭಾರತದ ಜತೆ ಕೈಜೋಡಿಸಿದ್ದರು. ಇತ್ತೀಚೆಗೆ ನಡೆದ ಅಮೆರಿಕ-ಭಾರತ 2 + 2 (ರಕ್ಷಣೆ- ವಿದೇಶಾಂಗ ಸಚಿವರ) ಸಭೆಯಲ್ಲೂ ಚೀನಾ ಬೆದರಿಕೆ ಕುರಿತು ಚರ್ಚೆ ನಡೆಸಲಾಗಿತ್ತು. ಬಿಡೆನ್ ನೂತನ ಅಧ್ಯಕ್ಷರಾದರೂ ಭಾರತದೊಂದಿಗೆ ಬಾಂಧವ್ಯ ಬೆಸೆಯುವ ಮೂಲಕ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕಾಗುತ್ತದೆ ಎಂಬುದು ತಜ್ಞರುಅಭಿಪ್ರಾಯ.

ಬಿಡೆನ್​ಗೆ ಶೇ. 69 ಮುಸ್ಲಿಂರ ಮತ

ಅಮೆರಿಕದಲ್ಲಿ ಶೇಕಡ 69ರಷ್ಟು ಮುಸ್ಲಿಮರು ಜೋ ಬಿಡೆನ್​ಗೆ ಮತ ಹಾಕಿದ್ದು, ಶೇ. 17ರಷ್ಟು ಮುಸ್ಲಿಮರು ಡೊನಾಲ್ಡ್ ಟ್ರಂಪ್​ಗೆ ಮತ ಹಾಕಿದ್ದಾರೆ ಎಂದು ಅಮೆರಿಕದ ಮುಸ್ಲಿಂ ಲಿಬರ್ಟಿಸ್ ಆಂಡ್ ಅಡ್ವಕೆಸಿ ಆರ್ಗನೈಜೇಷನ್ ನಡೆಸಿದ ಎಕ್ಸಿಟ್ ಪೋಲ್ ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಮೊದಲ ಬಾರಿ ದಾಖಲೆ ಪ್ರಮಾಣದಲ್ಲಿ 10ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಮತದಾನ ಮಾಡಿದ್ದಾರೆ.

ಅಮೆರಿಕದ ಜನರಿಗೆ ವಂಚನೆ ಆಗಲು ಬಿಡುವುದಿಲ್ಲ. ಕೂಡಲೇ ಎಣಿಕೆಯನ್ನು ಸ್ಥಗಿತಗೊಳಿಸಬೇಕು. ನಿರ್ದಿಷ್ಟ ಸಮಯದಲ್ಲಿ ಬಂದಿರುವಂತಹ ಅಂಚೆ ಮತಪತ್ರಗಳನ್ನು ಮಾತ್ರ ಎಣಿಕೆಗೆ ಪರಿಗಣಿಸಬೇಕು. ಮುಂಜಾನೆ 4ಕ್ಕೆ ದಿಢೀರನೆ ಮತಪತ್ರಗಳು ಬಂದಿದ್ದು ಎಲ್ಲಿಂದ? ಅವಧಿ ಮುಗಿದ ಮೇಲೆ ಮತದಾನಕ್ಕೆ ಅವಕಾಶ ಇಲ್ಲ. ಇಂಥ ಅಕ್ರಮದ ವಿರುದ್ಧ ಸುಪ್ರೀಂಕೋರ್ಟ್​ಗೆ ಹೋಗಲಿದ್ದೇವೆ| ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಾವು ಮುನ್ನಡೆಯಲ್ಲಿದ್ದೇವೆ, ಜಯ ಶತಸ್ಸಿದ್ಧ. ಆದರೆ, ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಅಲ್ಲಿಯವರೆಗೆ ಬೆಂಬಲಿಗರು ಗೆಲ್ಲುವ ವಿಶ್ವಾಸ ಇರಿಸಿಕೊಂಡು ಸಂಯಮ ವಹಿಸಬೇಕು.| ಜೋ ಬಿಡೆನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net