

ಕನ್ನಡದಲ್ಲೂ ಮಿಂಚಿರುವ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಈ ವರ್ಷ ‘ಲೆಜೆಂಡ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದರ ಬೆನ್ನಲ್ಲೆ ಅವರಿಗೆ ತೆಲುಗು ಚಿತ್ರರಂಗದಿಂದಲು ಬುಲಾವ್ ಬಂದಿದ್ದು, ಸದ್ಯ ಎರಡು ಟಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆ.ಎಸ್. ರವೀಂದ್ರ ನಿರ್ದೇಶಿಸುತ್ತಿರುವ ಚಿರಂಜೀವಿ, ರವಿತೇಜ ನಟಿಸುತ್ತಿರುವ ‘ವಾಲ್ಟೇರ್ ವೀರಯ್ಯ’ ಚಿತ್ರದ ವಿಶೇಷ ಹಾಡೊಂದರಲ್ಲಿ ಊರ್ವಶಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯೂ ಅವರು ಕೆಲವು ಚಿತ್ರಗಳಲ್ಲಿ ಸ್ಪೆಷಲ್ ಸಾಂಗ್ಗಳಲ್ಲಿ ಕುಣಿದು ಕುಪ್ಪಳಿಸಿದ್ದರು.
‘ವಾಲ್ಟೇರ್ ವೀರಯ್ಯ’ ಆಕ್ಷನ್ ಚಿತ್ರವಾಗಿದ್ದು, ಚಿರುಗೆ ಶ್ರುತಿ ಹಾಸನ್ ಜೋಡಿಯಾಗಿದ್ದಾರೆ. ಉಳಿದಂತೆ ಕ್ಯಾಥರೀನ್ ಟ್ರೆಸಾ, ಬಾಬಿ ಸಿಂಹ, ವೆನ್ನೆಲಾ ಕಿಶೋರ್ ಪ್ರಮುಖ ತಾರಾಗಣದಲ್ಲಿದ್ದಾರೆ. ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿರು, ಊರ್ವಶಿ ಕಾಂಬಿನೇಷನ್ ಹಾಡಿನ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿ ಅದ್ದೂರಿ ಸೆಟ್ ನಿರ್ವಿುಸಲಾಗುತ್ತಿದೆ. ಈ ಚಿತ್ರದ ಜತೆಗೆ ರಾಮ್ ಪೋತಿನೇನಿ ನಾಯಕನಾಗಿರುವ ಮತ್ತೊಂದು ಚಿತ್ರದಲ್ಲು ಊರ್ವಶಿ ನಟಿಸಲಿದ್ದಾರೆ. ಕೆಲವು ದಿನಗಳಿಂದ ಕ್ರಿಕೆಟಿಗ ರಿಷಬ್ ಪಂತ್ ಜತೆಗಿನ ಲಿಂಕಪ್ನಿಂದ ಹೆಚ್ಚು ಸದ್ದು ಮಾಡಿದ್ದ ಊರ್ವಶಿ, ಈಗ ಮತ್ತೆ ಸಿನಿಮಾಗಳಿಂದ ಸುದ್ದಿ ಮಾಡುತ್ತಿದ್ದಾರೆ.