

ನವದೆಹಲಿ: ಉತ್ತರಪ್ರದೇಶದಲ್ಲಿ ಏಕಕಾಲಕ್ಕೆ 25 ಶಾಲೆಗಳಲ್ಲಿ ಕೆಲಸ ಮಾಡುತ್ತ ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ವೇತನ ಗಳಿಸಿರುವ ವಿಜ್ಞಾನ ಶಿಕ್ಷಕಿಯ ವಂಚನೆ ಪ್ರಕರಣ ದಿನೇದಿನೆ ಹೊಸ ತಿರುವು ಪಡೆಯುತ್ತಿದೆ.
ಸದ್ಯ ಖಾಸ್ಗಂಜ್ ಪೊಲೀಸರು ಒಬ್ಬಳನ್ನು ಬಂಧಿಸಿದ್ದು, ಆಕೆಯ ಹೆಸರು ಪ್ರಿಯಾ ಸಿಂಗ್ ಎಂದಾಗಿದೆ. ಅನಾಮಿಕಾ ಶುಕ್ಲಾ ಹೆಸರಿನಲ್ಲಿ ತಾನು ಕೆಲಸ ಮಾಡುತ್ತಿದ್ದುದಾಗಿ ಆಕೆ ಹೇಳಿಕೊಂಡಿದ್ದಾಳೆ. ಇದರರ್ಥ ನಿಜವಾದ ಅನಾಮಿಕಾ ಶುಕ್ಲಾ ಇನ್ನೂ ಪೊಲೀಸರ ಕೈಗೆ ಸಿಕ್ಕೇ ಇಲ್ಲ ಹಾಗೂ ಈಕೆಯ ಹೆಸರಿನಲ್ಲಿ ಈಕೆಯ ಶೈಕ್ಷಣಿಕ ದಾಖಲೆಗಳನ್ನು ಬಳಸಿ ಇನ್ನೂ ಹಲವರು ಕೆಲಸ ಮಾಡುತ್ತಿದ್ದಾರೆ.
ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಲಾಗುತ್ತಿದೆ. ಪ್ರಿಯಾ ಮಧ್ಯವರ್ತಿಗಳ ಮೂಲಕ 5 ಲಕ್ಷ ರೂ. ಲಂಚ ನೀಡಿ ಈ ಕೆಲಸ ಗಿಟ್ಟಿಸಿಕೊಂಡಿದ್ದಾಗಿ ಹೇಳುತ್ತಿದ್ದಾಳೆ. ಎಲ್ಲೆಡೆ ಇದೇ ಮಧ್ಯವರ್ತಿಗಳು ವಂಚನೆ ನಡೆಸಿರುವ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ದೂರಿನನ್ವಯ ಅನಾಮಿಕಾ ಶುಕ್ಲಾ ವಿರುದ್ಧ ಐದು ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿದೆ. ರಾಯ್ಬರೇಲಿ, ಅಂಬೇಡ್ಕರ್ನಗರ, ಬಾಗ್ಪತ್, ಅಲಿಗಢ, ಸಹರಾನ್ಪುರ್ ಜಿಲ್ಲೆಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ವಾರಣಾಸಿ ಹಾಗೂ ಅಮೇಥಿ ಜಿಲ್ಲೆಗಳಲ್ಲಿ ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.
ಅನಾಮಿಕಾ ಶುಕ್ಲಾ ಲಖನೌದ ಕಸ್ತೂರಬಾ ಬಾಲಿಕಾ ಶಾಲೆಯಲ್ಲಿ 10ನೇ ತರಗತಿ ಹಾಗೂ ಪಾರಸಪುರದ ಬೇಣಿ ಮಾಧವ ಕಾಲೇಜಿನಲ್ಲಿಯೇ ಪಿಯು ಶಿಕ್ಷಣ ಪಡೆದಿದ್ದಾಳೆ. ರಘುಕುಲ ಮಹಿಳಾ ವಿದ್ಯಾಪೀಠದಲ್ಲಿ 2012ರಲ್ಲಿ ಪದವಿ ಪೂರ್ಣಗೊಳಿಸಿದ್ದಾಳೆ. ಬೇರೆ ಜಿಲ್ಲೆಗಳಲ್ಲಿ ಅನಾಮಿಕಾ ವಿರುದ್ಧ ಪ್ರಕರಣಗಳು ದಾಖಲಾಗಬೇಕಿವೆ. ಅಗತ್ಯ ಬಿದ್ದರೆ ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಎಡಿಜಿಪಿ ಪ್ರಶಾಂತಕುಮಾರ್ ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಕಚೇರಿಗೆ ಹಾಜರಾಗುವಂತೆ ಅನಾಮಿಕಾಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಉತ್ತರಿಸದೇ ಸ್ನೇಹಿತರ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಳು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಪ್ರಿಯಾ ಸಿಂಗ್ ಸೆರೆಯಾಗಿದ್ದಾಳೆ. ಮೀರತ್ ಜಿಲ್ಲೆಯ ಶಿಕ್ಷಣ ಅಧಿಕಾರಿಗಳು ಕೂಡ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿದ್ದರು. ಅವರಿಗೆ ವಾಟ್ಸ್ಆ್ಯಪ್ನಲ್ಲಿಯೇ ರಾಜೀನಾಮೆ ಪತ್ರ ರವಾನಿಸಿದ್ದಳು.