

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಸಮುದಾಯ ಆರೋಗ್ಯ ಕೇಂದ್ರಗಳು ಚಿಕಿತ್ಸೆಗೆ ಬರುವ ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಒದಗಿಸುವ ಮೂಲಕ ಜನರ ಹೃದಯ ಗೆಲ್ಲುವಂತಿರಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಕ್ಷಾ ಸಮಿತಿಯವರು ಇಲ್ಲಿನ ಕೊರತೆಗಳನ್ನು ನೀಗಿಸುವಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಆಸ್ಪತ್ರೆ ಹಾಗೂ ಸಮಾಜದ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಆರೋಗ್ಯಕ್ಕೆ ಸಂಬಂಧಿಸಿದಂತೆ ಶಿಬಿರಗಳನ್ನು ಮಾಡಿ ಜನರಿಗೆ ಸೇವೆ ನೀಡಬೇಕು ಎಂದರು.
ಉಪ್ಪಿನಂಗಡಿಗೆ ಡಯಾಲಿಸಿಸ್ ಕೇಂದ್ರಕ್ಕೆ ಮಂಜೂರಾತಿ ದೊರಕಿದ್ದು, ಮುಂದಿನ ದಿನಗಳಲ್ಲಿ ಡಯಾಲಿಸಿಸ್ ಕೇಂದ್ರ ಉಪ್ಪಿನಂಗಡಿ ಸಮುದಾಯ ಕೇಂದ್ರದಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದ ಅಶೋಕ್ ಕುಮಾರ್ ರೈ, ಶಸ್ತ್ರಚಿಕಿತ್ಸಾ ಕೊಠಡಿಯನ್ನು ಮಂಜೂರು ಮಾಡುವ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡಿದ್ದೇನೆ. ಇದಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಹೇಳಿದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ., ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸಿದ್ದಿಕ್ ಕೆಂಪಿ, ಜಯಶೀಲ, ಆನಂದ, ಇಬ್ರಾಹಿಂ ಆಚಿ, ಫಾರೂಕ್ ಜಿಂದಗಿ, ವೈದ್ಯರುಗಳಾದ ಡಾ.ಸ್ಮಿತಾ, ಡಾ.ಮನೋಜ್ ಉಪಸ್ಥಿತರಿದ್ದರು. ಸಿಬ್ಬಂದಿ ರೇಖಾ ಸ್ವಾಗತಿಸಿದರು, ಗೀತಾ ವಂದಿಸಿದರು.
ಜನತೆಗೆ ಉಚಿತವಾಗಿ ಸೇವೆ ಒದಗಿಸುವ ಸಲುವಾಗಿ ಉಪ್ಪಿನಂಗಡಿಯಲ್ಲಿರುವ ಆಂಬುಲೆನ್ಸ್ ಒಂದು ತಿಂಗಳಲ್ಲಿ ಕೇವಲ ಮೂರು ಸಾರಿ ಓಡಿದೆ. ಸರ್ಕಾರ ಉಚಿತವಾಗಿ ಈ ಸೇವೆಯನ್ನು ಜನರಿಗೆ ನೀಡಿದೆ. ಜನರು ತುರ್ತು ಸಂದರ್ಭದಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉಚಿತ ಆಂಬುಲೆನ್ಸ್ ವ್ಯವಸ್ಥೆಯ ಬಗ್ಗೆ ಜನರಿಗೆ ತಿಳಿಸಬೇಕು. ಸಮುದಾಯ ಆರೋಗ್ಯ ಕೇಂದ್ರದ ಬಳಿ ಎರಡು ಆಂಬುಲೆನ್ಸ್ ಇದ್ದು ಇದು ಜನರ ಸೇವೆಗೆಂದು ಸರ್ಕಾರ ನೀಡಿದೆ. ನಾನು ಇಲ್ಲಿಗೆಂದು ಸುಮಾರು 18 ಲಕ್ಷ ರೂ.ವೆಚ್ಚದ ಹೊಸ ಆಂಬುಲೆನ್ಸ್ ಒದಗಿಸಿದ್ದೇನೆ ಅದು ಎಲ್ಲರಿಗೂ ಉಚಿತವಾಗಿಯೇ ಇರುತ್ತದೆ. ಯಾವುದೇ ಆಸ್ಪತ್ರೆಗೆ ತೆರಳುವುದಾದರೂ ಜನ ಇದನ್ನು ಬಳಸಿಕೊಳ್ಳಬೇಕೆಂದು ಶಾಸಕರು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿದ ಕಟ್ಟಡದಲ್ಲಿ ಖಾಸಗಿ ಸ್ವಾಮ್ಯದ ಜನೌಷಧಿ ಕೇಂದ್ರಕ್ಕೆ ಕೊಠಡಿಯನ್ನು ಉಚಿತವಾಗಿ ನೀಡಿದ್ದು ಸರಿಯಲ್ಲ. ಇದು ಸರ್ಕಾರದ ಸೊತ್ತು. ಆರೋಗ್ಯ ಕೇಂದ್ರಕ್ಕೆ ಡಯಾಲಿಸಿಸ್ ಕೇಂದ್ರ ಆರಂಭವಾಗುವ ಕಾರಣಕ್ಕೆ ಜನೌಷಧಿ ಕೇಂದ್ರವನ್ನು ತೆರವು ಮಾಡುವಂತೆ ವೈದ್ಯರಿಗೆ ಶಾಸಕರು ಸೂಚನೆ ನೀಡಿದರು.
ಆಸ್ಪತ್ರೆಗೆ ಬರುವ ರೋಗಿಗಳಿಗೂ ಸೇರಿದಂತೆ ಬಡ ಜನತೆಗೆ ಪ್ರಯೋಜನ ಕಲ್ಪಿಸುವ ಇಂದಿರಾ ಕ್ಯಾಂಟೀನ್ ಉಪ್ಪಿನಂಗಡಿಯಲ್ಲಿ ಪ್ರಾರಂಭ ಮಾಡಿ ಎಂದು ವೈದ್ಯಾಧಿಕಾರಿ ಕೃಷ್ಣಾನಂದ ಶಾಸಕರಲ್ಲಿ ಮನವಿ ಮಾಡಿದರು. ಈಗಾಗಲೇ ವಿಟ್ಲಕ್ಕೆ ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡುವ ಎಂದು ಶಾಸಕರು ತಿಳಿಸಿದರು.