

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ಉಪ್ಪಿ 2' ಚಿತ್ರ ತೆರೆಗೆ ಬಂದು ಎಂಟು ವರ್ಷಗಳ ನಂತರ ಉಪೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ "ಯುಐ'. ವಿಭಿನ್ನ ಶೀರ್ಷಿಕೆ, ವಿಶೇಷ ಪೋಸ್ಟರ್ಗಳ ಮೂಲಕ ಪ್ರತಿ ಹಂತದಲ್ಲೂ ಕುತೂಹಲ ಮೂಡಿಸಿರುವ ಚಿತ್ರವಿದು. ಕಳೆದ ಒಂದು ತಿಂಗಳಿನಿಂದ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದೆ. ಒಂದೆಡೆ ವಿಎ್ಎಕ್ಸ್ ಕೆಲಸಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಉಪೇಂದ್ರ ಡಬ್ಬಿಂಗ್ ಶುರು ಮಾಡಿದ್ದಾರೆ. ಕಳೆದ ಹತ್ತು ದಿನಗಳಿಂದ ಡಬ್ಬಿಂಗ್ ನಡೆಯುತ್ತಿದ್ದು, ಇನ್ನೂ 15 ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಚಿತ್ರದಲ್ಲಿ ಉಪೇಂದ್ರಗೆ "ಏಕ್ಲವ್ಯಾ' ಖ್ಯಾತಿಯ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿ ಫಿಲಂಸ್ನ ಮನೋಹರನ್ ಮತ್ತು ವೀನಸ್ ಎಂಟರ್ಟೇನರ್ಸ್ನ ಕೆಪಿ ಶ್ರೀಕಾಂತ್ ಜಂಟಿಯಾಗಿ ಈ ಮೆಗಾ ಬಜೆಟ್ ಸಿನಿಮಾ ನಿರ್ಮಿಸುತ್ತಿದ್ದು, ಇದೇ ಡಿಸೆಂಬರ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಕನ್ನಡ, ತೆಲುಗಿನಲ್ಲಿ ಉಪ್ಪಿ ರಿಯಲ್ ವಾಯ್ಸ್
"ಯುಐ' ವಿಶೇಷತೆ ಎಂದರೆ ಕನ್ನಡದ ಜತೆ ತೆಲುಗು ಭಾಷೆಯಲ್ಲೂ ಉಪೇಂದ್ರ ಅವರೇ ಡಬ್ಬಿಂಗ್ ಮಾಡಲಿದ್ದಾರೆ. 1997ರಲ್ಲಿ ಉಪೇಂದ್ರೆ ಕನ್ನಡದ "ಓಂ' ಚಿತ್ರವನ್ನು ತೆಲುಗಿನಲ್ಲಿ "ಓಂಕಾರಂ' ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಆ ಚಿತ್ರದ ಪ್ರಾರಂಭದಲ್ಲಿ ಖುದ್ದು ಅವರೇ ನರೇಷನ್ ಮಾಡಿದ್ದರು. ಆ ಬಳಿಕ "ಕನ್ಯಾದಾನಂ', "ಒಕೇ ಮಾಟ', "ರಾ', "ಸನ್ ಆಫ್ ಸತ್ಯಮೂರ್ತಿ' ಸೇರಿ ಕಳೆದ ವರ್ಷ ತೆರೆಕಂಡ "ನಿ' ಚಿತ್ರದಲ್ಲೂ ಉಪ್ಪಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಹೀಗಾಗಿ ತೆಲುಗು ಭಾಷೆಯ ಮೇಲೆ ಹಿಡಿತವಿರುವ ಕಾರಣ, ಅವರೇ ಖುದ್ದು ತೆಲುಗಿನಲ್ಲೂ ಡಬ್ ಮಾಡಲಿದ್ದಾರೆ. "ಯುಐ' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿದೆ. ಸಿನಿಮಾ ಅಷ್ಟೂ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿರುವ ಕಾರಣ ಡಬ್ಬಿಂಗ್ಗೆ ಹೆಚ್ಚು ದಿನ ನೀಡಲಾಗಿದೆ.
ಫಸ್ಟ್ ಲುಕ್, ನೋ ಲಕ್!?
ಟೈಟಲ್, ಕಾನ್ಸೆಪ್ಟ್ ಪೋಸ್ಟರ್ ಬಿಟ್ಟರೆ ಸಿನಿಮಾ ಪ್ರಾರಂಭವಾಗಿ ಒಂದೂವರೆ ವರ್ಷವಾದರೂ ಟೀಸರ್ ಬಿಡುಗಡೆಯಾಗಿಲ್ಲ. ಹೀಗಾಗಿ ಅಭಿಮಾನಿಗಳು ಜಾಲತಾಣದಲ್ಲಿ "ಏನಾದರೂ ಅಪ್ಡೇಟ್ ಕೊಡಿ' ಎಂದು ಚಿತ್ರತಂಡದ ಬೆನ್ನು ಬಿದ್ದಿದ್ದಾರೆ. ಈ ಬಗ್ಗೆ ಕೆ.ಪಿ.ಶ್ರೀಕಾಂತ್ ಮತ್ತು ಮನೋಹರನ್ ನೇರವಾಗಿ ಉಪೇಂದ್ರ ಬಳಿ ತೆರಳಿ ಅವರನ್ನೇ ಪ್ರಶ್ನಿಸಿದ್ದಾರೆ. ಅದಕ್ಕೆ ಉಪೇಂದ್ರ, "ಸ್ಟ್ ಲುಕ್ ಟೀಸರ್ ಬಿಡಲೇಬೇಕಾ? ಪಬ್ಲಿಸಿಟಿ ಯಾಕೆ ಮಾಡಬೇಕು? ಒಂದೇ ಬಾರಿಗೆ ರಿಲೀಸ್ ಡೇಟ್ ಅನೌನ್ಸ್ ಮಾಡಬಹುದಲ್ಲವೇ? ಒಂದು ನಿಮಿಷದ ಟೀಸರ್ನಲ್ಲಿ ಸಿನಿಮಾ ಹೇಗಿದೆ ಅಂತ ತೋರಿಸುವಂತಿದ್ದರೆ ನಾನೇಕೆ ಎರಡು ತಾಸಿನ ಚಿತ್ರ ಮಾಡಬೇಕಿತ್ತು? ಸುಳ್ಳಿಗೆ ಹೈಪ್ ತರಬೇಕು, ಸತ್ಯಕ್ಕೆ ತಾನಾಗಿ ತಾನೇ ಹೈಪ್ ಸಿಗುತ್ತೆ. ಡೋಂಟ್ ವರಿ' ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಎರಡನೇ ಭಾಗ ಕೆಲವು ದಿನಗಳಲ್ಲಿ ರಿಲೀಸ್ ಆಗಲಿದ್ದು, ಆಗ ಸ್ಪಷ್ಟನೆ ದೊರೆಯಲಿದೆಯಂತೆ.