

ಬೆಂಗಳೂರು: ಕನ್ನಡ ಚಲನಚಿತ್ರ ಕಾಮಿರ್ಕರ ಮತ್ತು ತಂತ್ರಜ್ಞರ ಒಕ್ಕೂಟದ ಅಡಿಯಲ್ಲಿ ಬರುವ 15ಕ್ಕೂ ಹೆಚ್ಚು ಸಂಗಳ ಮೂರು ಸಾವಿರಕ್ಕೂ ಹೆಚ್ಚು ಕಾಮಿರ್ಕರ ನೆರವಿಗೆ ಬಂದಿರುವ ಉಪೇಂದ್ರ, ಅವರಿಗೆ ರೇಷನ್ ಕಿಟ್ಗಳನ್ನು ವಿತರಿಸುವುದಾಗಿ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಅದರಂತೆ, ಗುರುವಾರ ಅವರು ನೂರಾರು ಜನರಿಗೆ ರೇಷನ್ ಕಿಟ್ಗಳನ್ನು ವಿತರಿಸಿದ್ದಾರೆ.
ಗುರುವಾರ, ಉಪೇಂದ್ರ ಅವರು ತಮ್ಮ ಕತ್ರಿಗುಪ್ಪೆಯ ಮನೆಯ ಎದುರು ರೇಷನ್ ಕಿಟ್ ವಿತರಣೆಯನ್ನು ಆಯೋಜಿಸಿದ್ದರು. ಒಕ್ಕೂಟದ ಸದಸ್ಯರಾಗಿರುವವರು, ತಮ್ಮ ಐಡಿ ಕಾರ್ಡ್ಗಳನ್ನು ಪ್ರದರ್ಶಿಸಿ ರೇಷನ್ ಕಿಟ್ ಪಡೆಯಬಹುದು ಎಂದು ಬುಧವಾರವೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು.
ಅದರಂತೆ ಒಕ್ಕೂಟದ ನೂರಾರು ಜನರು ಉಪೇಂದ್ರ ಅವರ ಮನೆಯ ಬಳಿ ಧಾವಿಸಿ ರೇಷನ್ ಕಿಟ್ಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಟ ಬಿರಾದಾರ್ ಸೇರಿದಂತೆ ಹಲವರು ಹಾಜರಿದ್ದು, ಕಿಟ್ಗಳನ್ನು ಪಡೆದಿದ್ದಾರೆ.
ಉಪೇಂದ್ರ ಅವರ ಈ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಜತೆಗೆ ಮತ್ತಷ್ಟು ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಉಪ್ಪಿ ಜತೆಗೆ ಕೈಜೋಡಿಸಿದ್ದಾರೆ. ಹಿರಿಯ ನಟಿ ಬಿ. ಸರೋಜಾದೇವಿ ಅವರು ನಾಲ್ಕು ಲಕ್ಷ, ಸಾಧು ಕೋಕಿಲ ಎರಡೂವರೆ ಲಕ್ಷ, ಮಾನ್ಯ ಒಂದು ಲಕ್ಷ, ನಿರ್ದೇಶಕ ಪವನ್ ಒಡೆಯರ್ 20 ಸಾವಿರ, ಶೋಭರಾಜ್ 10 ಸಾವಿರ ರೂಗಳನ್ನು, ಸಂತ್ರಸ್ತರಿಗೆ ಕಿಟ್ ವಿತರಿಸುವುದಕ್ಕೆ ಉಪ್ಪಿ ಫೌಂಡೇಶನ್ ಖಾತೆಗೆ ಸ್ವಯಂಪ್ರೇರಿತರಾಗಿ ವರ್ಗಾವಣೆ ಮಾಡಿದ್ದಾರೆ.