ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ರಾಧೇ ಬಿಡುಗಡೆ …

Radhe - Final
Published on

ಮುಂಬೈ: ಸಲ್ಮಾನ್​ ಖಾನ್​ ಚಿತ್ರಗಳೆಂದರೆ ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಚಿತ್ರಮಂದಿರದವರಿಗೂ ದೊಡ್ಡ ಹಬ್ಬ ಎಂದರೆ ತಪ್ಪಿಲ್ಲ. ಏಕೆಂದರೆ, ಸಲ್ಮಾನ್​ ಅಭಿನಯದ ಚಿತ್ರಗಳು ಇಡೀ ದೇಶದಲ್ಲಿ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಮೊದಲ ದಿನದ ಕಲೆಕ್ಷನ್​ ನೂರು ಕೋಟಿ ದಾಟಿರುತ್ತಿತ್ತು. ಆದರೆ, ರಾಧೇ ವಿಚಾರದಲ್ಲಿ ಅವೆಲ್ಲವೂ ಸುಳ್ಳಾಗಿದೆ.

ರಾಧೇ ಚಿತ್ರವನ್ನು ಈದ್​ ಮಿಲಾದ್​ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ಆರು ತಿಂಗಳುಗಳ ಹಿಂದೆಯೇ ಸಲ್ಮಾನ್​ ಪ್ಲಾನ್​ ಮಾಡಿಕೊಂಡಿದ್ದರು. ಅದರಂತೆ, ಡಿಸೆಂಬರ್​ನಲ್ಲೇ ಈ ಚಿತ್ರವನ್ನು ಮೇ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಕ್ರಮೇಣ ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಕರೊನಾ ಎರಡನೇ ಅಲೆ ಪ್ರಾರಂಭವಾಗಿ ಒಂದೊಂದೇ ರಾಜ್ಯದಲ್ಲಿ ಲಾಕ್​ಡೌನ್​ ಹೇರಲಾಯಿತು. ಇದೀಗ ಇಡೀ ದೇಶದಲ್ಲಿ ತ್ರಿಪುರಾದಲ್ಲಿ ಮಾತ್ರ ಲಾಕ್​ಡೌನ್​ ಇಲ್ಲದಿರುವುದರಿಂದ, ಅಲ್ಲಿನ ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗುತ್ತಿದೆ.

ಹೌದು, ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಅಗರ್ತಾಲದ ಎಸ್​ಎಸ್​ಆರ್​ ರೂಪಸಿ ಮತ್ತು ಬಾಲಕ ಚಿತ್ರಮಂದಿರಗಳಲ್ಲದೆ, ಧರ್ಮನಗರದ ಎಸ್​ಎಸ್​ಆರ್​ ಧರ್ಮನಗರ್​ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾತನಾಡಿರುವ ಎಸ್​ಎಸ್​ಆರ್​ ಸಿನಿಮಾದ ಸಿಇಓ ಆಗಿರುವ ಸತದೀಪ್​ ಸಹಾ, ರಾಧೇ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಿ, ಓಟಿಟಿಯಲ್ಲಿ ಬೇಡ ಎಂದು ಮೊದಲು ಮನವಿ ಮಾಡಿದವನೇ ನಾನು. ನನ್ನ ಮೂರು ಚಿತ್ರಮಂದಿರಗಳಲ್ಲೂ ಚಿತ್ರ ಬಿಡುಗಡೆ ಮಾಡುವುದಾಗಿ ಪ್ರಾಮಿಸ್​ ಮಾಡಿದ್ದೆ. ಅದರಂತೆ ನನ್ನ ಪ್ರಾಮಿಸ್​ ಉಳಿಸಿಕೊಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತ್ರಿಪುರಾ ರಾಜ್ಯದಲ್ಲಿ ಲಾಕ್​ಡೌನ್​ ಇಲ್ಲದಿದ್ದರೂ ನೈಟ್​ ಕರ್ಫ್ಯೂ ಇದೆ. ಹಾಗಾಗಿ, ಆರು ಗಂಟೆಯ ಹೊತ್ತಿಗೆ ಚಿತ್ರಮಂದಿರ ಬಂದ್​ ಮಾಡಬೇಕಿರುವುದರಿಂದ, ಮೂರು ಗಂಟೆಯ ಪ್ರದರ್ಶನವೇ ಕೊನೆಯಾಗಲಿದೆ. ಮೂರು ಚಿತ್ರಮಂದಿರಗಳಿಂದ ಮೂರು ಪ್ರದರ್ಶನ ಎಂದಿಟ್ಟುಕೊಂಡರೂ, ಕೇವಲ 9 ಪ್ರದರ್ಶನಗಳು ಈ ಚಿತ್ರ ಕಾಣಲಿದೆ.

ಬಾಕ್ಸ್​ಆಫೀಸ್​ ವಿಚಾರಕ್ಕೆ ಬಂದರೆ, ತಮ್ಮ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಕಲೆಕ್ಷನ್​ ಮಾಡುವ ಚಿತ್ರ ಎಂದರೆ ಅದು "ರಾಧೇ' ಎಂದು ಸಲ್ಮಾನ್​ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, 10ರಿಂದ 15 ಕೋಟಿ ಕಲೆಕ್ಷನ್​ ಮಾಡುವುದು ಸಂಶಯ ಎಂದು ಹೇಳಿದ್ದರು. ಅದರಂತೆ, ಚಿತ್ರವು ಸಲ್ಮಾನ್​ ಖಾನ್​ ಕೆರಿಯರ್​ನಲ್ಲೇ ಅತೀ ಕಡಿಮೆ ಗಳಿಗೆ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net