ಒಬ್ಬ ಶಿಕ್ಷಕ ಏಕಕಾಲಕ್ಕೆ 25 ಶಾಲೆಗಳಲ್ಲಿ ಬೋಧಿಸಲು ಸಾಧ್ಯವೇ? ಸಾಧ್ಯ ಎನ್ನುತ್ತಿದ್ದಾರೆ ಈ ಶಿಕ್ಷಕಿ...!

Teacher jpg
Published on

ಲಖನೌ: ಒಬ್ಬ ಶಿಕ್ಷಕ ಒಂದು ಶಾಲೆಯಲ್ಲಿ ದಿನಕ್ಕೆ ನಾಲ್ಕರಿಂದ ಐದು ಗಂಟೆ ಅಂದರೆ ನಾಲ್ಕರಿಂದ 5 period ತರಗತಿ ತೆಗೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಅವಧಿಗೆ ಪಾಠ ಮಾಡುವಂತೆ ಹೇಳಿದರೆ ಯಾವುದೇ ಶಿಕ್ಷಕರಿಗೂ ಅದು ಸಾಧ್ಯವಾಗುವುದಿಲ್ಲ. ಇದು ಜಾಗತಿಕ ಸತ್ಯ.

ಆದರೆ, ಇಲ್ಲೊಬ್ಬ ಶಿಕ್ಷಕರು ಏಕಕಾಲಕ್ಕೆ 25 ಶಾಲೆಗಳಲ್ಲಿ ನಿರಂತರವಾಗಿ ಬೋಧಿಸಿ, ಒಂದು ವರ್ಷದ ಅವಧಿಯಲ್ಲಿ 1 ಕೋಟಿ ರೂ.ಗೂ ಹೆಚ್ಚಿನ ವೇತನ ಪಡೆದುಕೊಂಡಿದ್ದಾರೆ! ಗಿನ್ನೆಸ್​ ದಾಖಲೆಗೆ ಅರ್ಹವಾದ ಇಂಥ ಚಮತ್ಕಾರವನ್ನು ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೂಲ ಶಿಕ್ಷಣ ಕಾರ್ಯಕ್ರಮದಡಿ ಉತ್ತರಪ್ರದೇಶದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಶಿಕ್ಷಕಿಯಾಗಿರುವ ಅನಾಮಿಕಾ ಶುಕ್ಲಾ ಇಂಥ ಚಮತ್ಕಾರ ಮಾಡಿ ತೋರಿಸಿದವರಾಗಿದ್ದಾರೆ!

ಕೆಜಿಬಿವಿಯಲ್ಲಿ ಪೂರ್ಣಕಾಲಿಕ ಶಿಕ್ಷಕಿಯಾಗಿರುವ ಅನಾಮಿಕಾ ಶುಕ್ಲಾ ಅಮೇಠಿ, ಅಂಬೇಡ್ಕರ್​ನಗರ, ರಾಯ್​ಬರೇಲಿ, ಪ್ರಯಾಗ್​ರಾಜ್​, ಆಲಿಗಢ ಮತ್ತಿತರ ಜಿಲ್ಲೆಗಳು ಸೇರಿ ಒಟ್ಟು 25 ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ! ಆ ಶಾಲೆಗಳಲ್ಲಿ ಕೂಡ ಇವರು ವೇತನವನ್ನೂ ಪಡೆದುಕೊಳ್ಳುತ್ತಿದ್ದಾರೆ!

ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುತ್ತೇನೆ ಎಂದರೂ ವಿವಿಧ ಜಿಲ್ಲೆಗಳ ಶಾಲೆಗಳಿಗೆ ತೆರಳಿ ಪಾಠ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಅನಾಮಿಕಾ ಶುಕ್ಲಾ ಅವರಿಂದ ಇಂಥ ಚಮತ್ಕಾರ ಸಾಧ್ಯವಾಗಿದ್ದಾದರೂ ಹೇಗೆ?

ಆಗಿದ್ದೇನೆಂದರೆ, ಅನಾಮಿಕಾ ಶುಕ್ಲಾ ಅವರು ಕೆಜಿಬಿವಿ ಶಾಲೆಯೊಂದರಲ್ಲಿ ವಿಜ್ಞಾನ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ನೇಮಕಾತಿ ಸಂದರ್ಭದಲ್ಲಿ ಅವರು ಸಲ್ಲಿಸಿದ್ದ ದಾಖಲೆಗಳು ನಾಲ್ಕು ಜಿಲ್ಲೆಗಳ 25 ಶಾಲೆಗಳಿಗೂ ಸಲ್ಲಿಸಲ್ಪಟ್ಟಿವೆ. ಹಾಗಾಗಿ, ಅವರನ್ನು ಅಲ್ಲೆಲ್ಲ ನೇಮಕಗೊಂಡಿದ್ದಾರೆ. ಅವರ ಹಾಜರಾತಿಯನ್ನೂ ಪರಿಶೀಲಿಸದೆ ಅಧಿಕಾರಿಗಳು ಅನಾಮಿಕಾ ಸಲ್ಲಿಸಿದ್ದ ಬ್ಯಾಂಕ್​ ಖಾತೆಗೆ ಅವರ ವೇತನವನ್ನೂ ನೇರವಾಗಿ ವರ್ಗಾಯಿಸುತ್ತಲೇ ಬಂದಿದ್ದಾರೆ. 25 ಶಾಲೆಗಳಿಂದ ಪ್ರತಿ ಶಾಲೆಗೆ 5 ಲಕ್ಷ ರೂ.ನಂತೆ ಇದುವರೆಗೆ ಅವರ ಬ್ಯಾಂಕ್​ ಖಾತೆಗೆ 1.25 ಕೋಟಿ ರೂ. ಹಣ ಸಂದಾಯವಾಗಿದೆ!

ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಅನಾಮಿಕಾ ಶುಕ್ಲಾ ಅವರ ಚಮತ್ಕಾರದ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಇದು ಉತ್ತರ ಪ್ರದೇಶದ ಶಿಕ್ಷಣ ಸಚಿವ ಡಾ. ಸತೀಸ್​ ದ್ವಿವೇದಿ ಅವರ ಗಮನಕ್ಕೆ ಬರಲು ತಡವಾಗಲಿಲ್ಲ. ತಕ್ಷಣವೇ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಅಷ್ಟರಲ್ಲೇ ಅನಾಮಿಕಾ ಶುಕ್ಲಾ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಅನಾಮಿಕಾ ಶುಕ್ಲಾ ಮೂಲತಃ ಮೈನ್​ಪುರಿ ಜಿಲ್ಲೆಯವರು ಎನ್ನಲಾಗಿದೆ. ಇದೀಗ ಅವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net