ಅವಳು ನಿರಪರಾಧಿ...ಪ್ರಿಯಕರನ ಜತೆ ಪತ್ನಿಯನ್ನು ಮದ್ವೆ ಮಾಡಿಕೊಟ್ಟ ಪ್ರಕರಣಕ್ಕೆ ಎರಡೇ ದಿನದಲ್ಲಿ ಸ್ಫೋಟಕ ತಿರುವು! UP man

UP man
Published on

UP man : ಇತ್ತೀಚೆಗೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನಿಗೆ ಮದುವೆ ಮಾಡಿಕೊಟ್ಟಿದ್ದ. ಈ ಘಟನೆ ದೇಶಾದ್ಯಂತ ಭಾರಿ ಸುದ್ದಿಯಾಯಿತು. ಮೀರತ್‌ನಲ್ಲಿ ಇತ್ತೀಚೆಗೆ ನಡೆದ ಡ್ರಮ್ ಕೊಲೆಯಿಂದ ಭಯಗೊಂಡ ಆತ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರ ಇಬ್ಬರು ಸೇರಿ ತನ್ನನ್ನೂ ಅದೇ ರೀತಿ ಕೊಲ್ಲಬಹುದು ಅನ್ನೋ ಭಯದಿಂದ ಆಕೆಯನ್ನು ಮದುವೆ ಮಾಡಿಕೊಟ್ಟಿದ್ದಾಗಿ ಒಪ್ಪಿಕೊಂಡಿದ್ದ. ಆದರೆ, ಈ ಮದುವೆ ಪ್ರಸಂಗ ಇದೀಗ ದೊಡ್ಡ ತಿರುವು ಪಡೆದುಕೊಂಡಿದೆ.

ಅಂದಹಾಗೆ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಸಂತ ಕಬೀರ್ ನಗರದ ಕತಾರ್ ಜೋತ್ ಗ್ರಾಮದಲ್ಲಿ. ಬಬ್ಲು ಎಂಬಾತ 2017ರಲ್ಲಿ ಗೋರಖ್‌ಪುರದ ರಾಧಿಕಾ ಎಂಬಾಕೆಯನ್ನು ವಿವಾಹವಾದನು. ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದರು. ತಮ್ಮ 8 ವರ್ಷದ ದಾಂಪತ್ಯ ಜೀವನದಲ್ಲಿ ಇಬ್ಬರು ಮಕ್ಕಳು ಹುಟ್ಟಿದರು. ಹಿರಿಯ ಮಗ ಆರ್ಯನ್‌ಗೆ 7 ವರ್ಷ ಮತ್ತು ಕಿರಿಯ ಮಗಳು ಶಿವಾನಿ 2 ವರ್ಷ ವಯಸ್ಸು.

ಜೀವನೋಪಾಯಕ್ಕಾಗಿ ಬಬ್ಲು ಆಗಾಗ ಮನೆಯಿಂದ ಹೊರಗೆ ಇರುತ್ತಿದ್ದ. ಈ ಸಮಯದಲ್ಲಿ, ಆತನ ಪತ್ನಿ ರಾಧಿಕಾ ಅದೇ ಗ್ರಾಮದ ವಿಕಾಸ್ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧವನ್ನು ಬೆಳೆಸಿದಳು. ಅವರ ಸಂಬಂಧ ಬಹಳ ಕಾಲ ನಡೆಯಿತು. ಈ ಸಂಬಂಧ ಗ್ರಾಮದಲ್ಲಿ ಚರ್ಚೆಯ ವಿಷಯವಾಯಿತು. ಬಳಿಕ ಕುಟುಂಬ ಸದಸ್ಯರಿಗೂ ಈ ವಿಷಯ ತಿಳಿದಾಗ ಅವರು ಬಬ್ಲುಗೆ ಮಾಹಿತಿ ನೀಡಿದರು.

ಬಳಿಕ ಬಬ್ಲು ರಾಧಿಕಾ ಜೊತೆ ಈ ವಿಷಯವನ್ನು ಚರ್ಚಿಸಿ, ಆಕೆಯ ಮನವೊಲಿಸಲು ಪ್ರಯತ್ನಿಸಿದನು. ಆದರೆ, ರಾಧಿಕಾ, ತನ್ನ ಗೆಳೆಯನಿಗಾಗಿ ತನ್ನ ಮಕ್ಕಳನ್ನು ಸಹ ಬಿಟ್ಟುಕೊಡಲು ಮುಂದಾದಳು. ತನಗೆ ತನ್ನ ಗೆಳೆಯ ಬೇಕೆಂದು ಒತ್ತಾಯಿಸಿದಳು. ಬಳಿಕ ಒಂದು ನಿರ್ಧಾರಕ್ಕೆ ಬಂದ ಬಬ್ಲು, ಮಕ್ಕಳನ್ನು ನಾನೇ ಬೆಳೆಸುತ್ತೇನೆ ಎಂದು ಹೇಳಿದ. ಅಲ್ಲದೆ, ತಾನೇ ಮುಂದೆ ನಿಂತು ತನ್ನ ಪತ್ನಿ ರಾಧಿಕಾಳನ್ನು ವಿಕಾಸ್​ ಜತೆ ಮದುವೆ ಮಾಡಿಕೊಟ್ಟ. ಮದುವೆ ಸಮಯದಲ್ಲಿ ರಾಧಿಕಾ ಅಳುತ್ತಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್​ ಆಯಿತು.

ಸೇಫ್ಟಿ ಫಸ್ಟ್​ ಎಂದಿದ್ದ ಬಬ್ಲು

ತನ್ನ ಹೆಂಡ್ತಿಯನ್ನ ಆಕೆಯ ಪ್ರಿಯಕರನ ಜತೆ ಮದುವೆ ಮಾಡಿಕೊಡಲು ಕಾರಣ ಏನೆಂಬುದನ್ನು ಬಬ್ಲು ಮಾಧ್ಯಮಗಳ ಬಳಿ ತಿಳಿಸಿದ್ದ. ತನ್ನ ಜೀವ ಉಳಿಸಿಕೊಳ್ಳಲು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದ. ಇತ್ತೀಚೆಗೆ ಮೀರತ್‌ನಲ್ಲಿ ನಡೆದ ಘಟನೆಯಿಂದ ಬಬ್ಲು ಭಯಭೀತರಾಗಿದ್ದರು. ಮೀರತ್​ನಲ್ಲಿ ಪ್ರಿಯಕರ ಮತ್ತು ಪತ್ನಿ ಸೇರಿ ತನ್ನ ಪತಿಯನ್ನ ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿದ್ದರು. ಇದರಿಂದ ಹೆದರಿದ ಬಬ್ಲು ಈ ನಿರ್ಧಾರಕ್ಕೆ ಬಂದಿದ್ದ. ನನಗೆ ಸಂಭವಿಸಬಹುದಾದ ಯಾವುದೇ ಅಪಘಾತಗಳನ್ನು ತಪ್ಪಿಸಲು ನಾನು ಅವರಿಬ್ಬರ ಮದುವೆ ಮಾಡಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ, ಗಂಡಂದಿರು ತಮ್ಮ ಹೆಂಡತಿಯರಿಂದ ಕೊಲೆಯಾಗುತ್ತಿರುವುದನ್ನು ನಾವು ನೋಡಿದ್ದೇನೆ. ಮೀರತ್‌ನಲ್ಲಿ ಏನಾಯಿತು ಎಂಬುದನ್ನು ನೋಡಿದ ನಂತರ, ನಾವಿಬ್ಬರೂ ಶಾಂತಿಯುತವಾಗಿ ಬದುಕಲು ನನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಲು ನಿರ್ಧರಿಸಿದೆ ಎಂದು ಬಬ್ಲು ಹೇಳಿದ್ದ.

ಇಡೀ ಪ್ರಕರಣಕ್ಕೆ ಸ್ಫೋಟಕ ತಿರುವು

ಗೋರಖ್‌ಪುರದಲ್ಲಿರುವ ವಿಕಾಸ್‌ ಮನೆಗೆ ಹೋದ ಕೆಲವೇ ದಿನಗಳಲ್ಲಿ, ರಾಧಿಕಾಳನ್ನು ಅವಳ ಅತ್ತೆ, ಬಬ್ಲು ಬಳಿ ವಾಪಸ್​ ಹೋಗುವಂತೆ ಕೇಳಿಕೊಂಡರು. ತಾಯಿ ಇಲ್ಲದೆ ಆ ಚಿಕ್ಕ ಮಕ್ಕಳು ಬೆಳೆಯುವುದನ್ನು ವಿಕಾಸ್​ ತಾಯಿ ಬಯಸಲಿಲ್ಲ. ವಿಕಾಸ್ ನನ್ನ ಮಗ. ನಾನು ರಾಧಿಕಾಳನ್ನು ಬಬ್ಲು ಮತ್ತು ಅವಳ ಇಬ್ಬರು ಮಕ್ಕಳ ಬಳಿಗೆ ಹಿಂತಿರುಗಲು ಕೇಳಿಕೊಂಡಿದ್ದೇನೆ. ಇಬ್ಬರು ಪುಟ್ಟ ಗಂಡು ಮಕ್ಕಳ ಬಗ್ಗೆ ಕೇಳಿದಾಗ ನನಗೆ ತುಂಬಾ ಬೇಸರವಾಯಿತು ಎಂದು ವಿಕಾಸ್​ ತಾಯಿ ಹೇಳಿದ್ದಾರೆ.

ವಾಪಸ್​ ಬರಲು ರಾಧಿಕಾ ಒಪ್ಪಿಕೊಂಡಿದ್ದು ಮಾತ್ರವಲ್ಲದೆ, ಆಕೆಯನ್ನು ಮತ್ತೆ ಸ್ವೀಕರಿಸಲು ಬಬ್ಲು ಕೂಡ ಒಪ್ಪಿಕೊಂಡನು. ರಾಧಿಕಾ ಮತ್ತು ತನ್ನಿಬ್ಬರು ಮಕ್ಕಳನ್ನು ಪಕ್ಕದಲ್ಲಿಟ್ಟುಕೊಂಡು ಕ್ಯಾಮೆರಾ ಮುಂದೆ ಮಾತನಾಡಿದ ಬಬ್ಲು, ಹೌದು, ಅವಳು ಬೇರೊಬ್ಬರನ್ನು ಮದುವೆಯಾಗಿದ್ದಳು. ಆದರೆ, ಅವಳು ನಿರಪರಾಧಿ. ನಾನು ಅವಳನ್ನು ವಾಪಸ್ ಕರೆದುಕೊಂಡು ಹೋಗುತ್ತಿದ್ದೇನೆ ಮತ್ತು ಇಂದಿನಿಂದ ಅವಳಿಗೆ ಏನೇ ಆದರೂ ಅದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ. ನಾವು ಒಂದು ಕುಟುಂಬದಂತೆಯೇ ಬದುಕುತ್ತೇವೆ ಎಂದು ಹೇಳಿದ್ದಾನೆ.

ಮೀರತ್​ ಪ್ರಕರಣದ ಹಿನ್ನೆಲೆ

20 ದಿನಗಳ ಹಿಂದೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತು. ಸೌರಭ್ ರಜಪೂತ್ (29) ಮತ್ತು ಮುಸ್ಕಾನ್ (27) 2016 ರಲ್ಲಿ ಪ್ರೇಮ ವಿವಾಹವಾದರು. ಸೌರಭ್, ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ. ದಂಪತಿಗೆ 2019ರಲ್ಲಿ ಒಂದು ಹೆಣ್ಣು ಮಗು ಜನಿಸಿತು. ಇದರ ನಡುವೆ ಮುಸ್ಕಾನ್​ಗೆ ಸಾಹಿಲ್ (25) ಜೊತೆ ವಿವಾಹೇತರ ಸಂಬಂಧ ಬೆಳೆಯಿತು. ಸೌರಭ್ ತನ್ನ ಕೆಲಸವನ್ನು ಬಿಟ್ಟು ಬೇಕರಿಯಲ್ಲಿ ಕೆಲಸ ಮಾಡಲು ಲಂಡನ್‌ಗೆ ಹೋಗಿದ್ದ. ಕಳೆದ ತಿಂಗಳು ಫೆ. 24ರಂದು ಪತ್ನಿಯ ಹುಟ್ಟುಹಬ್ಬಕ್ಕೆ ಲಂಡನ್‌ನಿಂದ ಹಿಂತಿರುಗಿದ್ದ. ಈ ತಿಂಗಳ 4ರಂದು ಸೌರಭ್​ನನ್ನು ಮುಸ್ಕಾನ್​ ಮತ್ತು ಸಾಹಿಲ್​ ಸೇರಿ ಕೊಲೆ ಮಾಡಿದ್ದಾರೆ. ಸೌರಭ್ ಕಾಣೆಯಾದ ನಂತರ ಅವನ ಪೋಷಕರು ಪೊಲೀಸರನ್ನು ಸಂಪರ್ಕಿಸಿದಾಗ ಕೊಲೆ ಬೆಳಕಿಗೆ ಬಂದಿದೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಯಾದ 15 ದಿನಗಳಲ್ಲೇ ಗಂಡನನ್ನು ಕೊಲ್ಲಿಸಿದ ಪತ್ನಿ

ಪೊಲೀಸ್ ವರದಿಯ ಪ್ರಕಾರ, ಮಾರ್ಚ್ 19ರಂದು, ಸಹಾರಾ ಪೊಲೀಸ್ ಠಾಣೆಗೆ ಒಂದು ಕರೆ ಬಂತು. ಒಬ್ಬ ವ್ಯಕ್ತಿ ಗಾಯಗೊಂಡು ಹೊಲದಲ್ಲಿ ಬಿದ್ದಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಸ್ಥಳಕ್ಕೆ ತಲುಪಿದ ಪೊಲೀಸರು ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಪೊಲೀಸ್ ತನಿಖೆಯ ಸಮಯದಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಮೃತನ ಪತ್ನಿ ಮತ್ತು ಆಕೆಯ ಗೆಳೆಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಮೃತ ದಿಲೀಪ್ ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ 5ರಂದು ಪ್ರಗತಿ ಎಂಬ ಯುವತಿಯನ್ನು ವಿವಾಹವಾಗಿದ್ದ. ಆದಾಗ್ಯೂ, ಪ್ರಗತಿ ಅದೇ ಗ್ರಾಮದ ಅನುರಾಗ್ ಯಾದವ್ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೆ, ಈ ಮದುವೆಯೂ ಅವಳ ಇಚ್ಛೆಗೆ ವಿರುದ್ಧವಾಗಿ ನಡೆದಿತ್ತು. ದಿಲೀಪ್ ತಮ್ಮ ಪ್ರೀತಿಗೆ ಅಡ್ಡಿಯಾಗಿದ್ದಾನೆ ಎಂದು ನಂಬಿದ ಪತ್ನಿ ಪ್ರಗತಿ, ತನ್ನ ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ತೊಡೆದುಹಾಕಲು ಸಂಚು ರೂಪಿಸಿದಳು. ತನ್ನ ಗಂಡನನ್ನು ಕೊಲ್ಲಲು ಬಬ್ಲು ಯಾದವ್ ಎಂಬ ವ್ಯಕ್ತಿಗೆ 2 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಳು. ಆತ, ದಿಲೀಪ್‌ ಮೇಲೆ ಹಲ್ಲೆ ನಡೆಸಿ, ಗುಂಡಿಕ್ಕಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಸುಪಾತಿ ಹಂತಕ, ಮೃತನ ಪತ್ನಿ ಮತ್ತು ಆಕೆಯ ಗೆಳೆಯನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net