ಹಿಂದು ಸಂಪ್ರದಾಯದಂತೆ ಡಚ್ ಗೆಳತಿಯನ್ನು ಮದುವೆಯಾದ ಉತ್ತರ ಪ್ರದೇಶ ಯುವಕ…

marriage
Published on

ನವದೆಹಲಿ: ಎತ್ತಣ ಕೋಗಿಲೆ ಎತ್ತಣ ಮಾಮರ ಎಂಬಂತೆ ಉತ್ತರ ಪ್ರದೇಶದ ಯುವಕನೋರ್ವ ಡಚ್​ ಯುವತಿಯನ್ನು ಪ್ರೀತಿಸಿ ಭಾರತದಲ್ಲೇ ಹಿಂದು ಸಂಪ್ರದಾಯದಂತೆ ವಿವಾಹವಾಗಿದ್ದಾನೆ. ಫತೇಪುರ್ ಜಿಲ್ಲೆಯ ಹಾರ್ಧಿಕ್​ ವರ್ಮಾ (32) ನೆದರ್ಲ್ಯಾಂಡ್ಸ್ ನಿವಾಸಿ, ತನ್ನ ಗೆಳತಿ ಗೇಬ್ರಿಯೆಲಾ ದುಡಾ (21)ಳನ್ನು ಪಂಚಭೂತಗಳ ಸಾಕ್ಕೈಷಿಯಾಗಿ ಹಿಡಿದಿದ್ದು. ಕುಟುಂಬಸ್ಥರು, ಗ್ರಾಮಸ್ಥರು ಸಾಕ್ಷಿಯಾದರು.

ಪ್ರೇಮಿಗಳು ಬುಧವಾರ (ನ.29) ಪ್ರತಿಜ್ಞೆ ವಿನಿಮಯ ಮಾಡಿಕೊಂಡರು ಮತ್ತು ಹಿಂದು ಧರ್ಮದ ಸಂಪ್ರದಾಯದಂತೆ ಹಸೆಮಣೆ ಏರಿದ ವಧು ಗೇಬ್ರಿಯೆಲಾಗೆ ವರ ಹಾರ್ಧಿಕ್​ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದರು. ಎಲ್ಲಾ ವೈವಾಹಿಕ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ ಇಬ್ಬರೂ ದಂಪತ್ಯಕ್ಕೆ ಕಾಲಿರಿಸಿದರು.

ಫತೇಪುರದ ಹಳ್ಳಿಯೊಂದರಲ್ಲಿ ವಾಸವಾಗಿದ್ದ ಹಾರ್ಧಿಕ್​, ಕೆಲಸದ ನಿಮಿತ್ತ ನೆದರ್‌ಲ್ಯಾಂಡ್‌ಗೆ ತೆರಳಿದ್ದು ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಉದ್ಯೋಗ ಪಡೆದುಕೊಂಡಿದ್ದರು. ಅಲ್ಲಿ ಅವರು ತಮ್ಮ ಸಹೋದ್ಯೋಗಿ ಗೇಬ್ರಿಯೆಲಾ ಅವರನ್ನು ಭೇಟಿಯಾದರು. ಮೊದಲು ಸ್ನೇಹಿತರಾಗಿದ್ದ ಅವರು ಬಳಿಕ ಆಕರ್ಷಿತರಾಗಿ ಹತ್ತಿರವಾದರು. ಅಂತಿಮವಾಗಿ ಹಾರ್ಧಿಕ್​ ಒಂದು ದಿನ ಗೇಬ್ರಿಯೆಲಾಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ಆಕೆಯೂ ಹಾರ್ಧಿಕ್​​ ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಳು. ಅದರ ನಂತರ ಅವರ ಸಂಬಂಧ ಗಟ್ಟಿಯಾಯಿತು.

ಮೂರು ವರ್ಷ ಒಟ್ಟಿಗೆ ವಾಸಿಸಿದ ನಂತರ ಮದುವೆಯಾಗಲು ನಿರ್ಧರಿಸಿದರು. ಹಾರ್ಧಿಕ್​ ಫೋನ್ ಮೂಲಕ ತನ್ನ ಪಾಲಕರಿಗೆ ಗೇಬ್ರಿಯೆಲಾಳನ್ನು ಪ್ರೀತಿಸುತ್ತಿರುವ ವಿಷಯ ತಿಳಿಸಿದ್ದು, ಮದುವೆಗೆ ಆತನ ಕುಟುಂಬದವರು ಒಪ್ಪಿಗೆ ಸೂಚಿಸಿದ್ದರು.

ಅದರಂತೆ ಹಾರ್ಧಿಕ್​ ಕಳೆದ ವಾರ ಗೇಬ್ರಿಯೆಲಾಳೊಂದಿಗೆ ತನ್ನ ಊರಿಗೆ ಮರಳಿದ್ದು, ಅಲ್ಲಿ ಅವರನ್ನು ಅವರ ಕುಟುಂಬವು ಪ್ರೀತಿಯಿಂದ ಸ್ವಾಗತಿಸಿತು. ಬಳಿಕೆ ಮದುವೆ ಸಮಾರಂಭ ಏರ್ಪಡಿಸಿದ್ದು, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಫತೇಪುರದಲ್ಲಿ ಮದುವೆ ನಡೆಯಲು ಅವರ ಪೂರ್ವಜರ ಮನೆಯೇ ಕಾರಣ. ಡಿ.3 ರಂದು ತನ್ನ ಕುಟುಂಬವು ಪ್ರಸ್ತುತ ವಾಸಿಸುತ್ತಿರುವ ಗುಜರಾತ್‌ನ ಗಾಂಧಿನಗರಕ್ಕೆ ಪ್ರಯಾಣಿಸಲಿದೆ ಎಂದು ಹಾರ್ಧಿಕ್​ ಹೇಳಿದರು.ಡಿ.11 ರಂದು ಗಾಂಧಿನಗರದಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗಿದೆ ಎಂದು ಹಾರ್ದಿಕ್ ಹೇಳಿದರು, ಇದರಲ್ಲಿ ಗೇಬ್ರಿಯೆಲಾ ಅವರ ತಂದೆ ಮಾರ್ಸಿನ್ ದುಡಾ, ಅವರ ತಾಯಿ ಬಾರ್ಬರಾ ದುಡಾ ಮತ್ತು ಇತರ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ.

ಭಾರತದಲ್ಲಿನ ಆಚರಣೆಗಳ ನಂತರ ದಂಪತಿ ಡಿ.25 ರಂದು ನೆದರ್ಲ್ಯಾಂಡ್ಸ್​ಗೆ ಹಿಂತಿರುಗುತ್ತಾರೆ. ಅಲ್ಲಿ ಅವರು ಚರ್ಚ್​ನಲ್ಲಿ ಕ್ರಿಶ್ಚಿಯನ್ ವಿವಾಹ ಸಮಾರಂಭವನ್ನು ಸಹ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net