

ಲಖನೌ: ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ, ದುಷ್ಕರ್ಮಿಗಳ ಕಿರುಕುಳ ಕಾರಣದಿಂದಾಗಿ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯ ವಯಸ್ಸು 17. ಶಾಲೆಯನ್ನು ಮುಗಿಸಿ ಮನೆಗೆ ಸೈಕಲ್ನಲ್ಲಿ ಹಿಂದಿರುಗುವಾಗ ಮೂವರು ದುಷ್ಕರ್ಮಿಗಳು ಆಕೆಯ ದುಪಟ್ಟವನ್ನು ಎಳೆದು ಚುಡಾಯಿಸಲು ಪ್ರಯತ್ನಿಸಿದ್ದಾರೆ. ಆದರೆ, ದುಪಟ್ಟ ಎಳೆದಿದ್ದರಿಂದ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದು ಕೂಡಲೇ ಆಕೆಯ ಮೇಲೆ ಬೈಕ್ ಒಂದು ಹರಿದಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ದುಪಟ್ಟ ಎಳೆದ ಕೂಡಲೇ ಸೈಕಲ್ ನಿಯಂತ್ರಣ ಕಳೆದುಕೊಂಡ ಹುಡುಗಿ ಕೆಳಗೆ ಬೀಳುತ್ತಾಳೆ. ಬಿದ್ದ ಕೂಡಲೇ ದುಷ್ಕರ್ಮಿಗಳಿದ್ದ ಬೈಕ್ ಆಕೆಯ ಮೇಲೆ ಹರಿದು ಹೋಗುತ್ತದೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಖಚಿತಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಸಂಜೆ 3.30ರ ಸುಮಾರಿಗೆ ಶಾಲೆಯಿಂದ ವಾಪಸ್ ಬರುವಾಗ ಮೂವರು ಚುಡಾಯಿಸಿದ್ದಾರೆ. ಶಹನವಾಜ್ ಮತ್ತು ಅರ್ಬಾಜ್ ಇಬ್ಬರು ಚುಡಾಯಿಸಲು ಯತ್ನಿಸಿದರೆ, ಮತ್ತೊಬ್ಬ ದುಷ್ಕರ್ಮಿ ಫೈಸಲ್ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಬೈಕ್ ಹರಿಸಿದ್ದಾನೆ ಎಂದು ವಿದ್ಯಾರ್ಥಿನಿಯ ತಂದೆ ದಾಖಲಿಸಿರುವ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದೂರಿನಲ್ಲಿ ಹೆಸರಿಸಲಾದ ಆರೋಪಿಗಳನ್ನು ಬಂಧಿಸಲಾಗಿದೆ. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ರೈ ತಿಳಿಸಿದ್ದಾರೆ. (ಏಜೆನ್ಸೀಸ್)