ಅಪರಿಚಿತರ ಎದುರು ಇರಲಿ ಎಚ್ಚರ: ಆ ಕ್ಷಣ ಅಂಕಣ..

blank

ಅಪರಿಚಿತರ ಎದುರು ಇರಲಿ ಎಚ್ಚರ: ಆ ಕ್ಷಣ ಅಂಕಣ..ಆ ರಾತ್ರಿ ಮಹಾನಗರದ ಇಬ್ಬರು ಕಾನ್ಸ್​ಟೇಬಲ್​ಗಳು ವಿಮಾನ ನಿಲ್ದಾಣದ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಐದಾರು ಕ್ಯಾಬ್ ಡ್ರೈವರ್​ಗಳು ಫುಟ್​ಪಾತ್ ಮೇಲೆ ಕುಳಿತು ಮದ್ಯಪಾನ ಮಾಡುತ್ತಾ ಜೂಜಾಡುತ್ತಿದ್ದುದನ್ನು ಕಂಡರು. ಜೂಜುಗಾರರತ್ತ ಅವರು ಹೋದಾಗ ಪಣಕ್ಕಿಟ್ಟ ಹಣವನ್ನು ಬಿಟ್ಟು ಎಲ್ಲರೂ ಓಡತೊಡಗಿದರು. ಕೈಗೆ ಸಿಕ್ಕ ಇಬ್ಬರನ್ನು ಠಾಣೆಗೆ ಕರೆತರಲಾಯಿತು. ಠಾಣೆಯಲ್ಲಿ ಇಬ್ಬರನ್ನೂ ವಿಚಾರಿಸಿ ಅವರ ಅಂಗಶೋಧನೆ ಮಾಡಿದಾಗ ಕಿಶೋರ್ ಕುಮಾರ್ ಎಂಬ 35 ವರ್ಷ ವಯಸ್ಸಿನ ಚಾಲಕನ ಜೇಬಿನಲ್ಲಿ ಖ್ಯಾತ ಫೈನಾನ್ಸ್ ಕಂಪನಿಯಲ್ಲಿ ಬಂಗಾರದ ಆಭರಣಗಳನ್ನು ಗಿರವಿ ಇಟ್ಟಿದ್ದ ಏಳೆಂಟು ರಸೀದಿಗಳು ಸಿಕ್ಕವು. ಎಲ್ಲ ರಸೀದಿಗಳನ್ನು ಒಟ್ಟು ಮಾಡಿ ನೋಡಿದಾಗ ಅವು ಸುಮಾರು 960 ಗ್ರಾಂ ತೂಕದ ಚಿನ್ನಾಭರಣಗಳನ್ನು ಗಿರವಿ ಇಟ್ಟ ದಾಖಲೆಗಳಾಗಿದ್ದವು. ಅಷ್ಟೊಂದು ಭಾರೀ ಪ್ರಮಾಣದ ಒಡವೆಗಳು ಕ್ಯಾಬ್ ಚಾಲಕನಾದ ಅವನ ಬಳಿ ಹೇಗೆ ಬಂದಿತೆಂದು ಸಂಶಯಗೊಂಡ ಪೊಲೀಸರು ಕಿಶೋರ್​ನನ್ನು ವಿಚಾರಿಸಿದಾಗ ಆತ ಮೌನಕ್ಕೆ ಮೊರೆಹೋದ. ಪೊಲೀಸರ ತಮ್ಮ ಮಾಮೂಲಿ ಶೈಲಿಯಲ್ಲಿ ವಿಚಾರಿಸಿದಾಗ ಆತ ಹೇಳಿದ್ದಿಷ್ಟು: ನಾನು ದೂರದ ಜಿಲ್ಲೆಯಾತ. ಟ್ರಾನ್ಸ್​ಪೋರ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ, ನನ್ನದೇ ವಾಹನವನ್ನು ಹೊಂದಬೇಕೆಂದು ಬಯಸಿದೆ. ಬ್ಯಾಂಕಿನವರು ಜಪ್ತಿ ಮಾಡಿದ್ದ ಒಂದು ಸ್ವಿಫ್ಟ್ ಕಾರು ಮಾರಾಟಕ್ಕಿತ್ತು. ಅವರಿಂದಲೇ ಸಾಲ ಪಡೆದು ಅದನ್ನು ಖರೀದಿಸಿದೆ. ಆನಂತರ ಈ ಮಹಾನಗರಕ್ಕೆ ಬಂದು ಊಬರ್ ಮತ್ತು ಓಲಾ ಕಂಪನಿಗಳ ಕ್ಯಾಬ್ ಚಾಲಕನಾದೆ. ಒಂದು ವರ್ಷದ ಹಿಂದೆ ಒಂದು ದಿನ ನಾನು ನಗರದ ಒಂದು ಬಡಾವಣೆಯಿಂದ ಸುಮಾರು 40 ವರ್ಷದ ಒಬ್ಬ ಹೆಣ್ಣು ಮಗಳನ್ನು ಪಿಕಪ್ ಮಾಡಿದೆ. ಆಕೆಯನ್ನು 25 ಕಿ.ಮೀ ದೂರದಲ್ಲಿದ್ದ ಅವಳ ಕಚೇರಿಗೆ ಬಿಡಬೇಕಾಗಿತ್ತು. ಆಕೆ ಕ್ಯಾಬ್​ನಲ್ಲಿ ಕುಳಿತ ಕೂಡಲೇ ತನ್ನ ಫೋನ್ ತೆಗೆದು ಮನೋಹರ್ ಎನ್ನುವ ತನ್ನ ಗೆಳೆಯನಿಗೆ ಕರೆ ಮಾಡಿ ಅವನೊಡನೆ ಬಹಳ ಸಮಯ ಮಾತನಾಡಿದಳು. ನಾನು ಅವಳ ಸಂಭಾಷಣೆಯನ್ನೇ ತದೇಕಚಿತ್ತದಿಂದ ಕೇಳಿಸಿಕೊಂಡೆ.

ನನ್ನ ಕ್ಯಾಬ್​ನಲ್ಲಿದ್ದವಳ ಹೆಸರು ಸಂಗೀತಾ ಎಂದಾಗಿದ್ದು, ಆಕೆ ಒಂದು ಐಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಳು. ಆಕೆ ಒಂದು ವಾರದ ಹಿಂದೆ ತನ್ನ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಸಮಾರಂಭದಲ್ಲಿ ತನ್ನ ಸಹಪಾಠಿ ಮನೋಹರ್ ಎನ್ನುವವನನ್ನು ಭೇಟಿಯಾಗಿದ್ದಳು. ಮನೋಹರ್ ತನ್ನ ಪತ್ನಿಗೆ ವಿಚ್ಛೇದನ ಕೊಟ್ಟಿದ್ದಾಗಿ ಆ ಭೇಟಿಯಲ್ಲಿ ಸಂಗೀತಾ ಅರಿತಳು. ತನ್ನ ವೈವಾಹಿಕ ಜೀವನ ದುಸ್ತರವಾಗಿದ್ದು ತನ್ನ ನಾದಿನಿ, ಅತ್ತೆ, ಮಾವ ತನಗೆ ಕಿರುಕುಳ ಕೊಡುತ್ತಿರುವರೆಂದು ತಿಳಿಸಿದ ಸಂಗೀತಾ ತನ್ನ ಪತಿಯೂ ತನ್ನೊಡನೆ ಸರಿಯಾಗಿ ವರ್ತಿಸದಿರುವುದರಿಂದ ತಾನು ಆದಷ್ಟು ಬೇಗ ವಿವಾಹ ವಿಚ್ಛೇದನವನ್ನು ಪಡೆದು ಒಂಟಿ ಜೀವನ ನಡೆಸಲು ಉತ್ಸುಕಳಾಗಿದ್ದೇನೆಂದು ತನ್ನ ಗೆಳೆಯನಿಗೆ ತಿಳಿಸಿದಳು. ನೀನು ನಿನ್ನ ಪತ್ನಿಗೆ ಇತ್ತೀಚೆಗೆ ವಿಚ್ಛೇಧನ ಕೊಟ್ಟಿರುವ ಕಾರಣ ಡೈವೋರ್ಸಿನ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿತ್ತು ಸಹಾಯ ಮಾಡುವೆಯಾ ಎಂದು ಅವನನ್ನು ಕೇಳಿ ತನಗೆ ಒಬ್ಬ ವಕೀಲನನ್ನು ಗೊತ್ತು ಮಾಡಿಕೊಡಲು ವಿನಂತಿಸಿದಳು. ಆ ವ್ಯಕ್ತಿ ಏನು ಉತ್ತರಿಸಿದನೋ ಗೊತ್ತಿಲ್ಲ. ಆದರೆ ಆತ ಅವಳಿಗೆ ಸಾಂತ್ವನ ನೀಡಿ ಸಹಾಯಮಾಡುವುದಾಗಿ ಹೇಳಿದನೆಂದು ಕಾಣುತ್ತದೆ. ತಾವಿಬ್ಬರೂ ಬೇಗನೇ ಮುಖತಃ ಭೇಟಿಯಾಗುವುದಾಗಿ ಹೇಳಿ ಸಂಭಾಷಣೆಯನ್ನು ಮುಗಿಸಿದಳು.

ಅಷ್ಟರಲ್ಲಿ ಆಕೆಯ ನಿಲ್ದಾಣ ಬಂದಿತು. ನಾನು ಅವಳನ್ನುದ್ದೇಶಿಸಿ ನನ್ನ ಮನೆ ಅವಳ ಮನೆಯ ಸಮೀಪದಲ್ಲಿಯೇ ಇರುವ ಕಾರಣ ಅವಳಿಗೆ ಯಾವಾಗ ಕ್ಯಾಬ್ ಬೇಕಾದರೂ ನನ್ನನ್ನೇ ನೇರವಾಗಿ ಕರೆಯಲು ಹೇಳಿದೆ. ನಾನು ಕ್ಯಾಬ್ ಕಂಪನಿಗಳಿಗಿಂತ ಕಡಿಮೆ ಬೆಲೆಯಲ್ಲಿ ಅವಳನ್ನು ಕರೆದುಕೊಂಡು ಹೋಗುತ್ತೇನೆ ಎಂದೆ. ಆಕೆ ಒಪ್ಪಿದಳು. ನಾವಿಬ್ಬರೂ ಪರಸ್ಪರ ಫೋನ್ ನಂಬರನ್ನು ಹಂಚಿಕೊಂಡೆವು. ಮುಂದಿನ ಒಂದು ತಿಂಗಳು ಅವಳು ನನಗೇ ನೇರವಾಗಿ ಕಾಲ್ ಮಾಡುತ್ತಿದ್ದು ನಾನು ಆಕೆ ಹೇಳಿದ ಜಾಗಕ್ಕೆ ಪಿಕಪ್- ಡ್ರಾಪ್ ಮಾಡಿ ಬರುತ್ತಿದ್ದೆ. ಆಕೆ ಶ್ರೀಮಂತ ಮಹಿಳೆಯೆಂದು ನನಗೆ ಗೊತ್ತಾಯಿತು.

ಏತನ್ಮಧ್ಯೆ ನನ್ನ ಆರ್ಥಿಕ ಪರಿಸ್ಥಿತಿ ತೀರಾ ಬಿಗಡಾಯಿಸಿತು. ನಾನು ಹೇಗಾದರೂ ಹಣವನ್ನು ಹೊಂದಿಸಲು ಹೆಣಗುತ್ತಿದ್ದೆ. ಆಗ ನನಗೆ ಸಂಗೀತಾಳ ಹಣವನ್ನು ಲಪಟಾಯಿಸಬೇಕೆಂಬ ಆಲೋಚನೆ ಬಂದಿತು. ನನ್ನ ಪ್ಲಾನಿನಂತೆ ನಾನೊಂದು ಹೊಸ ಸಿಮ್ ಖರೀದಿಸಿ ಅದರ ಮೂಲಕ ಸಂಗೀತಾಳಿಗೆ ಕರೆ ಮಾಡಿದೆ. ನಾನೇ ಅವಳ ಸ್ನೇಹಿತ ಮನೋಹರ್ ಎಂದು ಪರಿಚಯಿಸಿಕೊಂಡು ಅವನಂತೆಯೇ ಮಾತನಾಡಿದೆ. ಇದು ನನ್ನ ಹೊಸ ಸೆಲ್ ನಂಬರ್ ಎಂದೆ. ಕೆಲದಿನಗಳ ಹಿಂದೆ ವಿವಾಹ ವಿಚ್ಛೇದನದ ಬಗ್ಗೆ ನೀನು ಕೋರಿರುವ ಸಹಾಯದ ಬಗ್ಗೆ ನಾನು ನನ್ನ ವಕೀಲರೊಡನೆ ಮಾತನಾಡಿದ್ದೇನೆ. ನಾವಿಬ್ಬರೂ ಒಂದೆರಡು ವಾರಗಳ ನಂತರ ಅವರ ಕಚೇರಿಗೆ ಹೋಗಿ ಅವರ ಸಲಹೆ ಸೂಚನೆಗಳನ್ನು ಪಡೆಯೋಣವೆಂದೆ. ನಾನೇ ಅವಳ ಗೆಳೆಯ ಮನೋಹರ್ ಎಂಬ ಕಲ್ಪನೆಯಲ್ಲಿದ್ದ ಸಂಗೀತಾ ಒಂದು ವಾರದ ನಂತರ ನನ್ನನ್ನು ಸಂರ್ಪಸುವುದಾಗಿ ಹೇಳಿದಳು.

ಎರಡು ದಿನಗಳ ನಂತರ ನಾನು ಅದೇ ನಂಬರಿನಿಂದ ಮನೋಹರನೆಂದು ಅವಳಿಗೆ ಕರೆ ಮಾಡಿದೆ. ನಾನೊಂದು ದೊಡ್ಡ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆಂದು ತಿಳಿಸಿದೆ. ನನಗೆ ಜರೂರಾಗಿ 20 ಲಕ್ಷ ಬೇಕಾಗಿರುವುದಾಗಿ ಹೇಳಿದೆ. ಆದಷ್ಟು ಬೇಗ ಬಡ್ಡಿ ಸಮೇತ ಹಿಂದಿರುಗಿಸುವೆ ಎಂದೆ. ಆಕೆ ಒಪ್ಪಿ ಮಾರನೆಯ ದಿನವೇ ತನ್ನ ಮನೆಗೆ ಬರಹೇಳಿದಳು. ಮಾರನೆಯ ದಿನ ನಾನವಳಿಗೆ ಮತ್ತೆ ಕರೆ ಮಾಡಿ ನಾನು ಖುದ್ದಾಗಿ ಬರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ನನ್ನ ಚಾಲಕನನ್ನು ಕಳುಹಿಸುತ್ತೇನೆಂದು ತಿಳಿಸಿ ಅವನ ಕೈಗೆ ಹಣ ಕೊಡಲು ಸೂಚಿಸಿದೆ. ಆಕೆ ಒಪ್ಪಿದಳು. ನಾನು ನನ್ನ ಗೆಳೆಯನೊಬ್ಬನಿಗೆ ಅವಳ ಮನೆಗೆ ಹೋಗಿ ಹಣ ತೆಗೆದುಕೊಂಡು ಬರಲು ಸೂಚಿಸಿದೆ. ಆತ ಹಣವನ್ನು ತೆಗೆದುಕೊಂಡು ಬಂದ.

ಇದಾದ ನಂತರ ನಾನು ಪದೇಪದೆ ಅವಳಿಗೆ ಹಣ ಕೇಳತೊಡಗಿದೆ. ಆಕೆಯೂ ತನ್ನಲ್ಲಿ ಇದ್ದಷ್ಟು ಹಣವನ್ನು ನಾನು ಕಳಿಸುತ್ತಿದ್ದ ಗೆಳೆಯನಿಗೆ ಕೊಡುತ್ತಿದ್ದಳು. ಒಟ್ಟು 45 ಲಕ ್ಷೂ ಸಾಲ ಕೊಟ್ಟ ನಂತರ ಇನ್ನು ನನ್ನ ಬಳಿ ಹಣವಿಲ್ಲ ಎಂದಳು. ಆಗ ನಾನು ಕಟ್ಟಕಡೆಯ ಕಂತಾಗಿ 5 ಲಕ್ಷ ರೂಗಳನ್ನು ಕೊಡಲು ಕೋರಿದೆ. ಒಪ್ಪಿದಳು. ಅವಳಿಂದ ಹಣವನ್ನು ಪಡೆಯಲು ಆ ಸಮಯದಲ್ಲಿ ನನ್ನ ಗೆಳೆಯ ಲಭ್ಯವಿರದಿದ್ದ ಕಾರಣ ಹಣ ತರಲು ನಾನೇ ಅವಳ ಮನೆಗೆ ಹೋದೆ.

ನಾನು ಅವಳ ಬಳಿಗೆ ಹೋಗಿ ಹಣ ಕೇಳಿದ ಕೂಡಲೇ ಆಕೆಗೆ ಆಶ್ಚರ್ಯವಾಯಿತು. ನೀನೇಕೆ ಇಲ್ಲಿಗೆ ಬಂದೆ? ನಿನಗೂ ಮನೋಹರನಿಗೂ ಏನು ಸಂಬಂಧ? ಎಂದು ಕೇಳಿ ಮನೋಹರ್​ನ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದಳು. ನಾನು ಸೂಕ್ತ ಉತ್ತರ ಕೊಡದಿದ್ದಾಗ ಆಕೆ ಮನೋಹರನಿಗೆ ಫೋನ್ ಮಾಡಲು ಹೊರಟಳು. ಆಗ ನಾನು ನಿಜವನ್ನು ಹೇಳಲೇಬೇಕಾಯಿತು. ಮನೋಹರ್ ಎಂದು ಅವಳೊಡನೆ ಅಲ್ಲಿಯವರೆಗೆ ಫೋನಿನಲ್ಲಿ ಮಾತನಾಡುತ್ತಿದ್ದವನು ನಾನೇ ಎಂದೆ. ಕೋಪಗೊಂಡ ಅವಳು ಕೂಡಲೇ ತನ್ನ ಆಭರಣಗಳನ್ನು ಮರಳಿಸದಿದ್ದರೆ ನನ್ನ ಮೇಲೆ ಪೊಲೀಸ್ ಕಂಪ್ಲೆಂಟ್ ಕೊಡುತ್ತೇನೆಂದಳು. ನಾನು ವಿಚಲಿತನಾಗದೆ ನೀವು ಪೊಲೀಸರ ಬಳಿಗೆ ಹೋದರೆ ನಾನು ನಿಮ್ಮ ಪತಿಯ ಬಳಿಗೆ ಹೋಗಿ ನೀವು ಮನೋಹರ್ ಜೊತೆ ದೈಹಿಕ ಸಂಪರ್ಕವನ್ನು ಹೊಂದಿದ್ದು ನಿಮ್ಮ ಪತಿಗೆ ವಿವಾಹ ವಿಚ್ಛೇದನವನ್ನು ಕೊಡಲು ಹೊರಟಿರುವುದಾಗಿ ತಿಳಿಸುತ್ತೇನೆ, ಯೋಚನೆ ಮಾಡಿ ಎಂದು ಧಮಕಿ ಹಾಕಿದೆ.

ಇದನ್ನು ಕೇಳಿದೊಡನೆ ಸಂಗೀತಾ ಗಾಬರಿಗೊಂಡಳು. ಅದೇನಾಯಿತೋ ಏನೋ ಬೆವರತೊಡಗಿದಳು. ಥರಥರ ನಡುಗತೊಡಗಿದಳು. ಕೆಲಕಾಲದ ನಂತರ ನಾನು ಕೋರಿದಂತೆ 5 ಲಕ್ಷ ರೂ. ಕೊಡುತ್ತೇನೆ ಎಂದಳು. ಆಕೆ ಹೆದರಿದ್ದನ್ನು ಗಮನಿಸಿದ ನಾನು ಮುಂದಿನ ದಿನಗಳಲ್ಲಿ ಸಂಗೀತಾಳಿಂದ ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟೆ. ಅವಳು ತನ್ನ ಬಳಿ ಹಣವಿಲ್ಲ ಎಂದಳು. ಹಣವಿಲ್ಲದಿದ್ದರೆ ಪರವಾಗಿಲ್ಲ ನಿಮ್ಮ ಆಭರಣವನ್ನು ಕೊಡಿ, ಅಡವಿಟ್ಟು ಹಣ ಪಡೆಯುತ್ತೇನೆ ಎಂದೆ. ಆಕೆ ಕಾಲಕ್ರಮೇಣ ತನ್ನ 8 ಆಭರಣಗಳನ್ನು ನನಗೆ ಕೊಟ್ಟಳು. ಅವೆಲ್ಲವನ್ನೂ ಫೈನಾನ್ಸಿನಲ್ಲಿ ಅಡವಿಟ್ಟು ಹಣವನ್ನು ತೆಗೆದುಕೊಂಡಿದ್ದೇನೆ. ನನ್ನ ಜೇಬಿನಲ್ಲಿರುವುದು ಅವೇ ಆಭರಣದ ಚೀಟಿಗಳು.

ಕಿಶೋರ್​ಕುಮಾರ್​ನ ಚಾಲಾಕಿತನ ಕಂಡು ಬೆರಗಾದ ಪೊಲೀಸರು ಅವನಿಂದ ಸಂಗೀತಾಳ ವಿಳಾಸವನ್ನು ಪಡೆದು ಅವಳನ್ನು ಸಂರ್ಪಸಿದರು. ತೀರಾ ಹೆದರಿದ್ದ ಆಕೆ ಪೊಲೀಸರೊಡನೆ ಮಾತನಾಡಲು ತಯಾರೇ ಇರಲಿಲ್ಲ. ನಾನು ಈ ಬಗ್ಗೆ ನಿಮಗೆ ದೂರಿತ್ತರೆ ನನ್ನ ಮದುವೆ ತತ್​ಕ್ಷಣ ಮುರಿದು ಬೀಳುವುದು ಖಚಿತ ಎಂದಳು. ಅವಳ ಮನವೊಲಿಸಿ ನಡೆದದ್ದನ್ನು ಅವಳಿಂದ ಹೇಳಿಸಲು ಪೊಲೀಸರಿಗೆ ಸಾಕುಸಾಕಾಯಿತು. ಕಡೆಗೂ ಆಕೆ ತನ್ನ ಹೇಳಿಕೆಯನ್ನು ನೀಡಿದಳು. ಅದರ ಮೇರೆಗೆ ಸುಲಿಗೆಯ ಪ್ರಕರಣವನ್ನು ಪೊಲೀಸರು ದಾಖಲಿಸಿ ಕಿಶೋರನನ್ನು ಬಂಧಿಸಿ ಆತ ಅಡವಿಟ್ಟಿದ್ದ ಎಲ್ಲ ಆಭರಣಗಳು ಮತ್ತು 2 ಲಕ್ಷ ರೂ. ನಗದನ್ನು ವಶಪಡಿಸಿಕೊಂಡರು.

ಕಿಶೋರನ ಕಿರುಕುಳ ತಾಳಲಾರದೆ ತಾನು ಆತ್ಮಹತ್ಯೆ ಮಾಡಿಕೊಳ್ಳಲೂ ಪ್ರಯತ್ನಿಸಿದ್ದಾಗಿ ಸಂಗೀತಾ ಹೇಳಿದಾಗ ಪೊಲೀಸರು ಅವಳಿಗೆ ಕೌನ್ಸೆಲಿಂಗ್ ಮಾಡಿಸಿದ್ದಲ್ಲದೆ ಅವಳ ಗಂಡನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಂಡ ಹೆಂಡಿರಿಬ್ಬರಿಗೂ ಕೌನ್ಸಿಲಿಂಗ್ ಮಾಡಿಸಿದರು. ಇದರ ಫಲವಾಗಿ ಪತಿಪತ್ನಿಯರು ತಮ್ಮ ವೈಮನಸ್ಸುಗಳನ್ನು ಮರೆತು ಅನ್ಯೋನ್ಯವಾಗಿ ಬಾಳಲು ತೀರ್ವನಿಸಿದರು. ಈ ಪ್ರಕರಣದಲ್ಲಿ ಪೊಲೀಸರ ಕ್ರಮದಿಂದ ಒಬ್ಬ ವ್ಯಕ್ತಿಯ ಜೀವ ಉಳಿದಿದ್ದಲ್ಲದೇ ಅವಳ ವಿವಾಹವೂ ಉಳಿಯಿತು.

ಈಗ ಕಿಶೋರ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕೋರ್ಟ್ ವಿಚಾರಣೆ ಬಾಕಿಯಿದೆ. ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ, ವಂಚನಂ ಚಾಪಮಾನಂ ಚ ಮತಿಮಾನ್ನ ಪ್ರಕಾಶಯೇತ್ ಎನ್ನುತ್ತದೆ ಸಂಸ್ಕೃತದ ಸುಭಾಷಿತ. ಇದರರ್ಥ ಬುದ್ಧಿವಂತನಾದವನು ತನಗಾದ ಆರ್ಥಿಕ ನಷ್ಟ, ಮನಸ್ತಾಪ, ಕೌಟುಂಬಿಕ ಸಮಸ್ಯೆಗಳು, ತನಗಾದ ವಂಚನೆ, ಅವಮಾನ ಮುಂತಾದವನ್ನು ಸಾರ್ವಜನಿಕವಾಗಿ ಹೇಳಕೂಡದು ಎಂದು. ತನ್ನ ವೈವಾಹಿಕ ಸಮಸ್ಯೆಯನ್ನು ಅಪರಿಚಿತನ ಎದುರು ಪ್ರಕಟಮಾಡಿದ್ದೇ ಸಂಗೀತಾಳ ತೊಂದರೆಗೆ ಕಾರಣವಾಯಿತಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

blank

ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!

ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…