ಕಚ್ಚಿದಾಗ ಯಾವ ಹಾವು ಎಷ್ಟು ವಿಷ ಬಿಡುಗಡೆ ಮಾಡುತ್ತೆ? ಯಾವುದು ಡೇಂಜರಸ್​? ಇಲ್ಲಿದೆ ಅಚ್ಚರಿ ಮಾಹಿತಿ... Unknown Facts

Unknown Facts
Published on

Unknown Facts : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.

ಸಾಮಾನ್ಯವಾಗಿ ವಿಷಕಾರಿ ಹಾವು ಮನುಷ್ಯನನ್ನು ಕಚ್ಚಿದಾಗ ಅದರ ಬಾಯಿಯ ಮೂಲಕ ವಿಷವನ್ನು ಬಿಡುಗಡೆ ಮಾಡುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಎಷ್ಟು ಪ್ರಮಾಣದಲ್ಲಿ ವಿಷ ಬಿಡುಗಡೆಯಾಗುತ್ತದೆ ಎಂಬುದು ಬಹುತೇರಿಗೆ ತಿಳಿದಿರುವುದಿಲ್ಲ. ಈ ಕುರಿತ ಒಂದು ಆಸಕ್ತಿದಾಯ ಮಾಹಿತಿ ಇಲ್ಲಿದೆ.

ಜನರಲ್ಲಿನ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಮಧ್ಯಪ್ರದೇಶದ ಖಾರ್ಗೋನ್ ಮೂಲದ ಉರಗ ರಕ್ಷಕ ಮಹದೇವ್ ಪಟೇಲ್ ಅವರು ಹಾವುಗಳಲ್ಲಿನ ವಿಷದ ಉತ್ಪಾದನೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಹಾವುಗಳಿಂದ ಉತ್ಪತ್ತಿಯಾಗುವ ವಿಷದ ಪ್ರಮಾಣವು ಆಯಾ ಜಾತಿಯ ಹಾವಿಗೆ ಅನುಗುಣವಾಗಿ ಬದಲಾಗುತ್ತದೆ ಮತ್ತು ದಿನವಿಡೀ ಏರಿಳಿತಗೊಳ್ಳುತ್ತದೆ ಎಂದು ಪಟೇಲ್​ ವಿವರಿಸಿದ್ದಾರೆ.

ಹಾವಿನ ತಲೆಯಲ್ಲಿರುವ ವಿಶೇಷ ಗ್ರಂಥಿಗಳಲ್ಲಿ ವಿಷ ಉತ್ಪತಿಯಾಗುತ್ತದೆ. ಇದು ತುಂಬಾ ಸಂಕೀರ್ಣವಾಗಿದೆ. ಈ ಮಿಶ್ರಣವು ಕೇವಲ ಒಂದು ವಸ್ತುವಲ್ಲ. ಇದು ವಿವಿಧ ಪ್ರೋಟೀನ್​ಗಳು, ಕಿಣ್ವಗಳು ಮತ್ತು ಜೀವಾಣುಗಳ ಸಂಯೋಜನೆಯಾಗಿದೆ. ಪ್ರತಿಯೊಂದು ಕೂಡ ತನ್ನ ಬೇಟೆಯನ್ನು ನಿಶ್ಚಲಗೊಳಿಸುವಲ್ಲಿ ನಿರ್ದಿಷ್ಟ ಪಾತ್ರವನ್ನು ವಹಿಸುತ್ತದೆ. ಕಚ್ಚುವಿಕೆಯ ಸಮಯದಲ್ಲಿ ಹಾವು ಉತ್ಪಾದಿಸುವ ವಿಷದ ನಿಖರವಾದ ಪ್ರಮಾಣವು ಹಾವಿನ ಜಾತಿಗಳು, ಹಾವಿನ ಗಾತ್ರ ಮತ್ತು ಅದರ ಇತಿಹಾಸ ಸೇರಿದಂತೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪಟೇಲ್​ ಹೇಳಿದರು.

ಹಾವುಗಳಿಗೆ ಅನಿಯಮಿತ ವಿಷವಿದೆ ಎಂದು ಕೆಲವರು ತಪ್ಪಾಗಿ ನಂಬುತ್ತಾರೆ. ವಾಸ್ತವವಾಗಿ, ವಿಷದ ಉತ್ಪಾದನೆಯು ಜೈವಿಕ ಪ್ರಕ್ರಿಯೆಯಾಗಿದೆ. ಇದು ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಒಮ್ಮೆ ವಿಷವನ್ನು ಬಳಸಿದ ನಂತರ ಹಾವುಗಳು ತಮ್ಮ ವಿಷವನ್ನು ಪುನಃ ತುಂಬಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದು ಮಹದೇವ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

ನಾಗರಹಾವು: ನಾಗರಹಾವಿನಂತಹ ವಿಷಪೂರಿತ ಹಾವುಗಳು ಒಂದು ದಿನದಲ್ಲಿ ಸರಾಸರಿ 100-200 ಮಿಲಿಗ್ರಾಂ ವಿಷವನ್ನು ಉತ್ಪಾದಿಸಬಲ್ಲವು.

ಮಂಡಲ ಹಾವು (ವೈಪರ್​) : ವೈಪರಿಡೆ ಕುಟುಂಬದ ಹಾವುಗಳು ದಿನಕ್ಕೆ 50 ರಿಂದ 100 ಮಿಲಿಗ್ರಾಂ ವಿಷವನ್ನು ಉತ್ಪತ್ತಿ ಮಾಡುತ್ತವೆ.

ಕ್ರೈಟ್ (ಕಟ್ಟು ಹಾವು) : ಕ್ರೈಟ್ ಹಾವುಗಳು ದಿನಕ್ಕೆ 10 ರಿಂದ 15 ಮಿಲಿಗ್ರಾಂ ವಿಷವನ್ನು ಉತ್ಪತ್ತಿ ಮಾಡುತ್ತವೆ.

ಹಾವು ಮನುಷ್ಯ ಅಥವಾ ಬೇಟೆಯನ್ನು ಕಚ್ಚಿದಾಗ, ಅದು ವಿಷವನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆಯಾದ ವಿಷದ ಪ್ರಮಾಣವು ಹಾವಿನ ಜಾತಿಗಳು, ಗಾತ್ರ ಮತ್ತು ಕಡಿತದ ತೀವ್ರತೆ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ನಾಗರಹಾವು: ನಾಗರಹಾವು ಪ್ರತಿ ಕಡಿತಕ್ಕೆ 50 ರಿಂದ 100 ಮಿಲಿಗ್ರಾಂ ವಿಷವನ್ನು ಬಿಡುಗಡೆ ಮಾಡುತ್ತದೆ. ಈ ವಿಷವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಇದು ಮಾರಣಾಂತಿಕವಾಗಬಹುದು.

ಮಂಡಲ ಹಾವು : ಈ ಹಾವು ಪ್ರತಿ ಕಡಿತಕ್ಕೆ 20 ರಿಂದ 50 ಮಿಲಿಗ್ರಾಂ ವಿಷವನ್ನು ಬಿಡುಗಡೆ ಮಾಡುತ್ತವೆ. ಈ ವಿಷವು ರಕ್ತ ಪರಿಚಲನೆ ಮತ್ತು ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ತೀವ್ರವಾದ ಊತ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ಕ್ರೈಟ್: ಕಟ್ಟು ಹಾವು ಅಥವಾ ಕ್ರೈಟ್​ ಪ್ರತಿ ಕಡಿತಕ್ಕೆ 5 ರಿಂದ 10 ಮಿಲಿಗ್ರಾಂ ವಿಷವನ್ನು ಬಿಡುಗಡೆ ಮಾಡುತ್ತೆ. ಈ ವಿಷವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ತುಂಬಾ ಅಪಾಯಕಾರಿ.

ಹಾವಿನ ವಿಷದ ಪ್ರಮಾಣ, ಅದರ ಪರಿಣಾಮವು ಜಾತಿಯ ಮೇಲೆ ಮತ್ತು ಕಚ್ಚುವಿಕೆಯ ನಿರ್ದಿಷ್ಟ ಸಂದರ್ಭಗಳನ್ನು ಅವಲಂಬಿಸಿರುತ್ತದೆ. ಯಾವುದೇ ಹಾವು ಕಡಿತದ ಸಂದರ್ಭದಲ್ಲಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮುಖ್ಯ. ಆಧುನಿಕ ಆಂಟಿವೆನಮ್ ಅಥವಾ ಪ್ರತಿವಿಷ ಚಿಕಿತ್ಸೆಯು ಸಾಮಾನ್ಯವಾಗಿ ಹೆಚ್ಚಿನ ಹಾವು ಕಡಿತದ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿದೆ. ಆದಾಗ್ಯೂ, ಉತ್ತಮ ಫಲಿತಾಂಶಕ್ಕಾಗಿ ತಕ್ಷಣದ ಚಿಕಿತ್ಸೆಯ ಅಗತ್ಯವಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net