

Unknown Facts : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಹಾವುಗಳು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.
ವಿಷಕಾರಿ ಹಾವು ಎಂದಾಗಲೇ ನಮ್ಮ ತಲೆಯಲ್ಲಿ ಕಾಳಿಂಗ ಸರ್ಪ ಮತ್ತು ನಾಗರಹಾವು ಚಿತ್ರಣ ಮೊದಲು ಬರುತ್ತದೆ. ಆದರೆ, ಇವುಗಳಿಗಿಂತಲೂ ಅಪಾಯಕಾರಿ ಹಾವು ಒಂದಿದೆ. ಅದೇ ಸ್ಕೇಲ್ಡ್ ವೈಪರ್ ಅಥವಾ ಸುರುಳಿಯ ಮಂಡಲ ಹಾವು. ಇದು ವೈಪರ್ ಕುಟುಂಬಕ್ಕೆ ಸೇರಿದೆ. ಇದನ್ನು ಎಚಿಸ್ ಕ್ಯಾರಿನಾಟಸ್ ಎಂತಲೂ ಕರೆಯುತ್ತಾರೆ. ಈ ಹಾವು ನೋಡಲು ತುಂಬಾ ಸುಂದರವಾಗಿರುತ್ತದೆ. ಆದರೆ, ಭಾರಿ ಡೇಂಜರಸ್.
ಈ ಹಾವು ವಿಶೇಷ ಧ್ವನಿಯನ್ನು ಮಾಡುತ್ತದೆ. ಇವು ಹೆಚ್ಚಾಗಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಕಂಡುಬರುತ್ತವೆ. ಕೇರಳದಲ್ಲಿ ಕಣ್ಣೂರು, ಕಾಸರಗೋಡು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕೆಂಪು ಕಲ್ಲಿನ ಪ್ರದೇಶಗಳು ಮತ್ತು ಪಾಳುಭೂಮಿಗಳಲ್ಲಿ ವಾಸಿಸುತ್ತವೆ. ಈ ಹಾವಿನ ಕಡಿತವು 20 ಪ್ರತಿಶತ ಮರಣ ಪ್ರಮಾಣವನ್ನು ಹೊಂದಿದೆ.
ಇವು ಒಂದು ಬಾರಿ ಕಚ್ಚಿದರೆ 12 ಮಿಲಿಗ್ರಾಂಗಳಷ್ಟು ವಿಷವನ್ನು ದೇಹದಿಂದ ಹೊರಹಾಕುತ್ತದೆ. ಇವು ಹೆಚ್ಚಾಗಿ ರಾತ್ರಿಯ ವೇಳೆ ಬೇಟೆಯಾಡಲು ಬಯಸುತ್ತವೆ. ಈ ಹಾವುಗಳ ತಲೆಗಳು ತ್ರಿಕೋನ ಆಕಾರದಲ್ಲಿರುತ್ತವೆ. ದೇಹವು ಕಂದು, ಬಿಳಿ ಮತ್ತು ಕಪ್ಪು ಬಣ್ಣದಲ್ಲಿದ್ದು, ರಾತ್ರಿಯಲ್ಲಿ ಸುಲಭವಾಗಿ ಕಣ್ಣಿಗೆ ಕಾಣುವುದಿಲ್ಲ. ಈ ಹಾವುಗಳು ಸಾಮಾನ್ಯವಾಗಿ ಎಳೆಯ ಪಕ್ಷಿಗಳು, ಹಲ್ಲಿಗಳು ಮತ್ತು ಕಪ್ಪೆಗಳನ್ನು ಬೇಟೆಯಾಡುತ್ತವೆ. ಕೃಷಿ ಪ್ರದೇಶಗಳಿಗೆ ಬೇಟೆಯಾಡಲು ಬಂದಾಗ ಮನುಷ್ಯರು ಎದುರಾದರೆ ಅವರನ್ನು ಸಹ ಕಚ್ಚುತ್ತವೆ.
ಈ ಹಾವು ಬಲವಾದ ವಿಷವನ್ನು ಹೊಂದಿವೆ. ಈ ಹಾವಿನ ವಿಷ ನಾಗರಹಾವುಗಿಂತ ಐದು ಪಟ್ಟು ಹೆಚ್ಚಿದೆ. ಇದರ ವಿಷವು ನೇರವಾಗಿ ಮನುಷ್ಯನ ರಕ್ತದ ಮೇಲೆ ಪರಿಣಾಮ ಬೀರುತ್ತದೆ. ತ್ವರಿತವಾಗಿ ಚಿಕಿತ್ಸೆ ಪಡೆಯದಿದ್ದರೆ, ಮೂತ್ರಪಿಂಡದ ಮೇಲೆ ಪರಿಣಾಮ ಬೀರಿ ಸಾವಿಗೆ ಕಾರಣವಾಗಬಹುದು. ಆದರೆ, ಈ ಹಾವುಗಳ ಕಡಿತಕ್ಕೆ ಆ್ಯಂಟಿವೆನಮ್ ಅಂದರೆ ಪ್ರತಿವಿಷ ಲಭ್ಯವಿರುವುದು ಸಮಾಧಾನಕರ ಸಂಗತಿ.
ವಿಶ್ವದಲ್ಲೇ ಅತ್ಯಂತ ವಿಷಕಾರಿ ಹಾವು ಎಂದರೆ, ಇನ್ಲ್ಯಾಂಡ್ ತೈಪಾನ್. ಇದು ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಹಾವು ಇಷ್ಟೊಂದು ಡೇಂಜರಸ್ ಏಕೆಂದರೆ, ಒಂದು ಬಾರಿ ಕಚ್ಚಿದರೆ, 110 ಮಿಲಿಗ್ರಾಂ ವಿಷ ಹೊರ ಬರುತ್ತದೆ. ಬ್ರಿಸ್ಟೋಲ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಇನ್ಲ್ಯಾಂಡ್ ತೈಪಾನ್ ಒಮ್ಮೆ ಕಡಿದರೆ, ಬರೋಬ್ಬರಿ 100 ಮಂದಿ ಅಥವಾ 2.5 ಮಿಲಿಯನ್ ಇಲಿಗಳು ಸಾಯುವಷ್ಟು ಶಕ್ತಿ ಅದರ ವಿಷದಲ್ಲಿದೆ.
ಇನ್ನು ಎರಡನೇ ಸ್ಥಾನದಲ್ಲಿ ಬ್ಲ್ಯಾಕ್ ಮುಂಬಾ ಹಾವು ಇದೆ. ಈ ಹಾವು ಉಪ-ಸಹಾರನ್ ಪ್ರದೇಶದಲ್ಲಿ ವಾಸಿಸುತ್ತವೆ. ತಮ್ಮ ಗಾಢ ಬಣ್ಣದಿಂದ ಈ ಹೆಸರನ್ನು ಪಡೆದಿವೆ. ಇವು ಸಾಮಾನ್ಯವಾಗಿ ಮನುಷ್ಯರ ಹತ್ತಿರ ಬರಲು ಇಷ್ಟಪಡುವುದಿಲ್ಲ. ಆದರೆ, ತಮಗೇನಾದರೂ ಬೆದರಿಕೆ ಎದುರಾದರೆ ದಾಳಿ ಮಾಡುತ್ತವೆ. ಈ ಹಾವುಗಳಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ 12 ಕಿಲೋಮೀಟರ್ ವರೆಗೆ ಓಡಬಲ್ಲವು.
ಮೂರನೇ ಸ್ಥಾನದಲ್ಲಿರುವ ಬೂಮ್ಸ್ಲ್ಯಾಂಗ್ ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಒಂದು ಹಾವು. ಇದು 13 ಅಡಿ (4 ಮೀಟರ್) ವರೆಗೆ ಬೆಳೆಯುತ್ತದೆ. ಇದರ ವಿಷವು ಪ್ರಬಲವಾದ ನ್ಯೂರೋಟಾಕ್ಸಿನ್ ಅನ್ನು ಹೊಂದಿರುತ್ತದೆ ಮತ್ತು ಕೇವಲ ಒಂದೆರಡು ಹನಿಗಳು ಮನುಷ್ಯನನ್ನು ಕೊಲ್ಲಬಹುದು. ನಾಲ್ಕನೇ ಸ್ಥಾನದಲ್ಲಿರುವ ಬ್ಲೂ ಮಲಯನ್ ಕೋರಲ್ ಸ್ನೇಕ್, ಪಾರ್ಶ್ವವಾಯು ಮತ್ತು ಸಾವಿಗೆ ಕಾರಣವಾಗುವ ಹೆಚ್ಚಿನ ನ್ಯೂರೋಟಾಕ್ಸಿಕ್ ವಿಷವನ್ನು ಹೊಂದಿದೆ. ಇನ್ನು ಐದನೇ ಸ್ಥಾನದಲ್ಲಿ ಮೇಲೆ ಹೇಳಿದಂತೆ ಸ್ಕೇಲ್ಡ್ ವೈಪರ್ ಹಾವು ಇದೆ. (ಏಜೆನ್ಸೀಸ್)