

ಕುಕನೂರು: ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡುವ ಮೂಲಕ ಕೂಲಿಕಾರರಿಗೆ ಕೈ ತುಂಬ ಕೆಲಸ ನೀಡಿ, ಗುಳೆ ಹೋಗುವುದನ್ನು ತಪ್ಪಿಸಿದೆ.
ತಾಲೂಕಿನಲ್ಲಿ ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲಗಳನ್ನು ವೃದ್ಧಿಸಲು ಸಹಕಾರಿಯಾಗಿದೆ. ತಾಲೂಕಿನಲ್ಲಿರುವ 15 ಗ್ರಾಮ ಪಂಚಾಯಿತಿಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕೂಲಿಕಾರರಿಗೆ ಯಾವುದೇ ಕೆಲಸವಿಲ್ಲ ಎನ್ನದೇ ನಿತ್ಯ ಕೆಲಸ ನೀಡುವ ಸಾಕಷ್ಟು ವಿನೂತನ ಕಾಮಗಾರಿ ಕೈಗೊಂಡಿದ್ದಾರೆ. 45 ದಿನಗಳಲ್ಲಿ 1,02,144 ಮಾನವ ದಿನಗಳನ್ನು ಸೃಜನೆ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸ ಬಯಸುವ ಬಡ ಕೂಲಿಕಾರರಿಗೆ, ಅಕುಶಲ ಕೂಲಿ ಕೆಲಸ ಒದಗಿಸಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ನೀಡಿ ತಾಲೂಕಿನ ಅಭಿವೃದ್ಧಿಗೆ ನರೇಗಾ ಯೋಜನೆ ಕಾರಣವಾಗಿದೆ. ವೈಯಕ್ತಿಕ ಕಾಮಗಾರಿಗಳಾದ ಜಮೀನುಗಳಿಗೆ ಬದು ನಿರ್ಮಾಣ, ಕೃಷಿ ಹೊಂಡ, ದನದ ದೊಡ್ಡಿ, ಮೇಕೆ ಶೆಡ್ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿ ನಡೆದಿವೆ. ಗ್ರಾಪಂ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳಿಂದ ಕೆಲಸ ಒದಗಿಸಲಾಗಿದೆ.
ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸಕ್ಕಾಗಿ ನಗರ, ಪಟ್ಟಣಗಳಿಗೆ ಗುಳೆ ತಪ್ಪಿಸಿ, ಗ್ರಾಮದಲ್ಲಿಯೇ ಕೆಲಸ ನೀಡಿ, ಸಾಮಾಜಿಕ ಸಾಮರಸ್ಯವನ್ನು ಕಾಪಾಡುವುದರ ಜತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬಲ ತುಂಬಿದೆ. ತಾಲೂಕಿನಲ್ಲಿ ಅಮೃತ ಸರೋವರ, ಶಾಲಾ ಅಭಿವೃದ್ಧಿ ಕಾಮಗಾರಿ, ಗ್ರಾಮೀಣ ಉದ್ಯಾನದಂತಹ ಹಲವಾರು ಕಾಮಗಾರಿಗಳನ್ನು ಮಾಡಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ಸ್ಕಾಚ್ ಪ್ರಶಸ್ತಿ ಜಿಲ್ಲೆಗೆ ಲಭಿಸಿದೆ.
ಕೂಲಿಕಾರರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಕೆಲಸ ನೀಡಿ, ಕೆಲಸ ಮುಕ್ತಾಯವಾದ 8 ದಿನದೊಳಗೆ ಕೂಲಿ ಪಾವತಿ ಮಾಡಲಾಗುತ್ತಿದೆ. ಅಲ್ಲದೇ, ಪ್ರತಿ ಕಾಮಗಾರಿ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಮಾಡಿ ಕೂಲಿಕಾರರ ಯೋಗಕ್ಷೇಮವನ್ನು ಸಹ ಗ್ರಾಮ ಪಂಚಾಯತಿಯಿಂದ ಮಾಡಲಾಗುತ್ತಿದೆ. ಇದರಿಂದಾಗಿ ಕೇವಲ 45 ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವಲ್ಲಿ ತಾಲೂಕಿನ ಗ್ರಾಮ ಪಂಚಾಯತಿಗಳು ಸಾಕ್ಷಿಯಾಗಿವೆ.
ಪ್ರಸಕ್ತ ವರ್ಷದ ಬೇಸಿಗೆ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಹೆಚ್ಚಿನ ಕೆಲಸ ನೀಡುವ ಮೂಲಕ 45 ದಿನಗಳ ಅವಧಿಯಲ್ಲಿ 15 ಗ್ರಾಪಂಗಳಲ್ಲಿ 1 ಲಕ್ಷ ಕ್ಕೂ ಅಧಿಕ ಮಾನವ ದಿನಗಳನ್ನು ಸೃಜನ ಮಾಡಲಾಗಿದೆ. ಅಲ್ಲದೆ, ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳು ವೃದ್ಧಿಯಾಗಿವೆ.ರಾಮಣ್ಣ ದೊಡ್ಮನಿ, ತಾಪಂ ಇಒ, ಕುಕನೂರು