ಪೂರ್ಣಗೊಳ್ಳದ ಅಮೃತ್ ಯೋಜನೆ : ಬೀರಂತಬೈಲಿನ ನಾಗರಿಕರಿಗೆ ತಪ್ಪದ ಸಂಕಷ್ಟ : ಪ್ರತಿಭಟನೆಗೆ ಸಜ್ಜು

New Project (21)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕಾಸರಗೋಡು ನಗರಸಭೆ 33ನೇ ವಾರ್ಡ್ ಬೀರಂತಬೈಲಿನಲ್ಲಿ ಅಮೃತ್ 2.0 ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಸಲು ತೆಗೆದಿರುವ ಹೊಂಡದಿಂದ ಈ ಪ್ರದೇಶದ ರಸ್ತೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

ನೀರಿನ ಪೈಪ್ ಅಳವಡಿಸಲು ರಸ್ತೆ ಅಂಚಿಗೆ ಹೊಂಡ ಅಗೆದು ಪೈಪು ಅಳವಡಿಸಿದ್ದರೂ ಇದನ್ನು ಸರಿಯಾಗಿ ಮುಚ್ಚದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರ ಪಾಲಿಗೆ ಬೀರಂತಬೈಲು ರಸ್ತೆ ಮರಣಗುಂಡಿಯಾಗುತ್ತಿದೆ. ಹಲವು ದ್ವಿಚಕ್ರ ವಾಹನಗಳು ರಸ್ತೆ ಅಂಚಿನ ಹೊಂಡಕ್ಕೆ ಬಿದ್ದು ಅಪಘಾತ ಸಂಭವಿಸಿವೆ. ಈ ಹಾದಿಯಾಗಿ ಆಟೋ ರಿಕ್ಷಾ ಚಾಲಕರು ಬಾಡಿಗೆ ತೆರಳಲೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ.

ಪಾದಚಾರಿಗಳಿಗೂ ನಡೆದಾಡಲಾಗದ ಸ್ಥಿತಿಯಿದೆ. ಹಲವು ಮಂದಿ ಪಾದಚಾರಿಗಳು ಹೊಂಡಕ್ಕೆ ಬಿದ್ದು ಗಾಯಗಳುಂಟಾಗಿವೆ. ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ನೀರಿನ ಪೈಪು ಅಳವಡಿಸುವ ನೆಪದಲ್ಲಿ ಸಂಪೂರ್ಣ ಹಾಳುಗೆಡಹಲಾಗಿದೆ. ವಿಪರ್ಯಾಸವೆಂದರೆ ಒಂದು ವರ್ಷದ ಹಿಂದೆ ಆರಂಭಿಸಿರುವ ಅಮೃತ್ ಕುಡಿಯುವ ನೀರು ವಿತರಣೆಗಾಗಿ ಪೈಪು ಅಳವಡಿಸುವ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಅಧಿಕಾರಿಗಳು ವಾರ್ಡಿನ ಜನತೆಯೊಂದಿಗೆ ಚೆಲ್ಲಾಟವಾಡುವುದನ್ನು ಕೊನೆಗೊಳಿಸುವಂತೆ ಸ್ಥಳೀಯ ಜನತೆ ಆಗ್ರಹಿಸಿದ್ದಾರೆ. ರಸ್ತೆ ದುರಸ್ತಿಪಡಿಸಲು ಮುಂದಾಗದಿರುವುದನ್ನು ಪ್ರತಿಭಟಿಸಲು ನಾಗರಿಕರು ಸಜ್ಜಾಗಿದ್ದಾರೆ.

ಪೈಪು ಅಳವಡಿಕೆ ಕಾಮಗಾರಿ ಪೂರ್ತಿಗೊಳಿಸುವುದರ ಜತೆಗೆ ಹಾನಿಗೀಡಾದ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸಂಬಂಧಪಟ್ಟವರನ್ನು ಆಗ್ರಹಿಸಲಾಗಿದೆ. ಕಾಮಗಾರಿ ಆರಂಭಿಸಿ ಒಂದುವರೆ ವರ್ಷ ಕಳೆದರೂ ಕೆಲಸ ಪೂರ್ತಿಗೊಳಿಸದಿರುವ ಬಗ್ಗೆ ಜಿಲ್ಲಾಧಿಕಾರಿಗೂ ದೂರು ಸಲ್ಲಿಸಲಾಗಿದೆ. ವೀಣಾ ಅರುಣ್ ಶೆಟ್ಟಿ, ಕಾಸರಗೋಡು ನಗರಸಭೆ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net