

ನವದೆಹಲಿ: ಐಪಿಎಲ್‌ಗಾಗಿ ಈಗಾಗಲೆ ಯುಎಇಯಲ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಜತೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದು, ಅರ್ಜುನ್ ತೆಂಡುಲ್ಕರ್ ಐಪಿಎಲ್ 13ನೇ ಆವೃತ್ತಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿಯುವರೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.
ಅರ್ಜುನ್ ತೆಂಡುಲ್ಕರ್ ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರಾದ ಟ್ರೆಂಟ್ ಬೌಲ್ಟ್, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್‌ಸನ್ ಮುಂತಾದವರ ಜತೆಗೆ ಈಜುಕೊಳದಲ್ಲಿ ನಿಂತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ. ಜತೆಗೆ ‘ರೆಸ್ಟ್ ಡೇಸ್ ಆರ್ ದಿ ಬೆಸ್ಟ್’ ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ಚಿತ್ರವನ್ನು ವೈರಲ್ ಮಾಡಿರುವ ಕ್ರಿಕೆಟ್ ಪ್ರೇಮಿಗಳು, ಅರ್ಜುನ್ ಐಪಿಎಲ್‌ಗೆ ಪದಾರ್ಪಣೆ ಮಾಡುವರೇ ಎಂದು ಸಂಭ್ರಮವನ್ನೂ ವ್ಯಕ್ತಪಡಿಸಿದ್ದಾರೆ.
ಎಡಗೈ ಮಧ್ಯಮ ವೇಗಿಯಾಗಿರುವ 20 ವರ್ಷದ ಅರ್ಜುನ್ ತೆಂಡುಲ್ಕರ್, ಕಳೆದ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಹೀಗಾಗಿ ಅವರು ಈ ವರ್ಷ ಅವರು ಐಪಿಎಲ್‌ನಲ್ಲಿ ಆಡಲು ಅವಕಾಶವಿಲ್ಲ. ನಿಜವೇನೆಂದರೆ ಅರ್ಜುನ್ ತೆಂಡುಲ್ಕರ್ ನೆಟ್ ಬೌಲರ್ ಆಗಿ ಮುಂಬೈ ಇಂಡಿಯನ್ಸ್ ತಂಡದ ಜತೆಗೆ ಯುಎಇಗೆ ತೆರಳಿದ್ದಾರೆ. ಈ ವಾಸ್ತವಾಂಶ ಗೊತ್ತಿರದ ಕ್ರಿಕೆಟ್ ಪ್ರೇಮಿಗಳು ಅರ್ಜುನ್ ಐಪಿಎಲ್‌ನಲ್ಲಿ ಆಡುವ ಗಾಳಿಸುದ್ದಿಯನ್ನು ಹರಡಿದ್ದಾರೆ.
ಇದನ್ನೂ ಓದಿ: ಈ 6 ಕ್ರಿಕೆಟ್ ತಾರೆಯರು ಇಂಜಿನಿಯರ್ ಕೂಡ ಆಗಿದ್ದಾರೆ!
2018ರಲ್ಲಿ ಭಾರತ ತಂಡದ ಪರ 19 ವಯೋಮಿತಿ ಕ್ರಿಕೆಟ್ ಪಂದ್ಯ ಆಡಿದ್ದ ಅರ್ಜುನ್ ಮುಂಬೈ ಇಂಡಿಯನ್ಸ್ ತಂಡದ ಜತೆಗೆ ಗುರುತಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಪ್ಪ ಸಚಿನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕರಾಗಿದ್ದಾಗ ಪಂದ್ಯಗಳನ್ನು ನೋಡಲು ಬರುತ್ತಿದ್ದ ಅರ್ಜುನ್, ಕಳೆದ ಕೆಲ ವರ್ಷಗಳಿಂದ ಮುಂಬೈನಲ್ಲಿ ತಂಡಕ್ಕೆ ಅಭ್ಯಾಸದ ವೇಳೆ ನೆಟ್ ಬೌಲರ್ ಆಗಿ ನೆರವಾಗುತ್ತ ಬಂದಿದ್ದಾರೆ.
ಇದೀಗ ಯುಎಇಗೆ ಮುಂಬೈ ತಂಡ ಕರೆದೊಯ್ದಿರುವ ಕೆಲ ನೆಟ್ ಬೌಲರ್‌ಗಳಲ್ಲಿ ಅರ್ಜುನ್ ಕೂಡ ಒಬ್ಬರಾಗಿದ್ದಾರೆ. ಸಚಿನ್ ತೆಂಡುಲ್ಕರ್ ಸದ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಐಕಾನ್ ಮತ್ತು ಮೆಂಟರ್ ಆಗಿದ್ದರೂ, ಈ ಬಾರಿ ಅವರೂ ಯುಎಇಗೆ ತೆರಳುವರೇ ಎಂಬುದು ಇನ್ನೂ ಖಚಿತಪಟ್ಟಿಲ್ಲ. ಅರ್ಜುನ್ ಈ ಹಿಂದೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ನೆಟ್ ಬೌಲರ್ ಆಗಿ ನೆರವಾಗುವ ಮೂಲಕವೂ ಗಮನ ಸೆಳೆದಿದ್ದರು.