ಈ 6 ಕ್ರಿಕೆಟ್ ತಾರೆಯರು ಇಂಜಿನಿಯರ್ ಕೂಡ ಆಗಿದ್ದಾರೆ!

sir mv cricket
Published on

ಬೆಂಗಳೂರು: ಕ್ರಿಕೆಟ್ ಲೋಕದಲ್ಲಿ ಮಿಂಚಿರುವ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಉನ್ನತ ವಿದ್ಯಾಭ್ಯಾಸ ಪಡೆದವರಲ್ಲ. ಆದರೆ ಕೆಲ ಕ್ರಿಕೆಟಿಗರು ಶಿಕ್ಷಣ ಮತ್ತು ಕ್ರಿಕೆಟ್ ಎರಡರಲ್ಲೂ ಉನ್ನತ ಸಾಧನೆ ತೋರಿದ್ದಾರೆ. ಅದರಲ್ಲೂ ಕೆಲ ಕ್ರಿಕೆಟಿಗರು ಕ್ರೀಡೆಯ ಜತೆಜತೆಯಲ್ಲೇ ಉನ್ನತ ವ್ಯಾಸಂಗವನ್ನೂ ಮಾಡಿ ಇಂಜಿನಿಯರ್‌ಗಳಾಗಿದ್ದಾರೆ. ಹೆಮ್ಮೆಯ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಮಂಗಳವಾರ ಇಂಜಿನಿಯರ್ಸ್‌ ದಿನವನ್ನು ಸಂಭ್ರಮಿಸಲಾಗುತ್ತಿದ್ದು, ಕ್ರಿಕೆಟ್‌ನಲ್ಲೂ ಮಿಂಚಿದ 6 ಇಂಜಿನಿಯರ್‌ಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ.

ಆರ್. ಅಶ್ವಿನ್

ಆಫ್​ ಸ್ಪಿನ್ ಬೌಲರ್ ಆಗಿ ಟೀಮ್ ಇಂಡಿಯಾ ಪರ ಮಿಂಚುತ್ತಿರುವ ಆರ್. ಅಶ್ವಿನ್, ಚೆನ್ನೈನ ಎಸ್‌ಎಸ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಅಶ್ವಿನ್ ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲು ಸಜ್ಜಾಗುತ್ತಿದ್ದಾರೆ.

ಎಸ್. ವೆಂಕಟರಾಘವನ್

1970ರ ದಶಕದಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ ಅಸವೆನಿಸಿದ್ದ ಎಸ್. ವೆಂಕಟರಾಘವನ್, 57 ಟೆಸ್ಟ್‌ಗಳಲ್ಲಿ 156 ವಿಕೆಟ್ ಕಬಳಿಸಿದ್ದರು. ಅವರು ಕ್ವಾಲಿಫೈಡ್ ಇಂಜಿನಿಯರ್ ಕೂಡ ಆಗಿದ್ದರು. ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಬಳಿಕ ವೆಂಕಟರಾಘವನ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ಇಎಎಸ್ ಪ್ರಸನ್ನ

ಕರ್ನಾಟಕದ ಸ್ಪಿನ್ ಮಾಂತ್ರಿಕ ಇಎಎಸ್ ಪ್ರಸನ್ನ 1970ರ ದಶಕದ ಸ್ಪಿನ್ ದಿಗ್ಗಜರಲ್ಲೊಬ್ಬರು. ಭಾರತ ಮಾತ್ರವಲ್ಲದೆ ವಿದೇಶದ ಸ್ಪೀಡ್ ಪಿಚ್‌ಗಳಲ್ಲೂ ಯಶಸ್ಸು ಕಂಡಿದ್ದು ಇವರ ವಿಶೇಷತೆ. 20 ಟೆಸ್ಟ್‌ಗಳಲ್ಲೇ 100 ವಿಕೆಟ್ ಪೂರೈಸಿದ್ದರು. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್​ ಇಂಜಿನಿಯರಿಂಗ್‌ನಲ್ಲಿ ಪ್ರಸನ್ನ ಇಂಜಿನಿಯರ್ ಪದವಿ ಪಡೆದಿದ್ದರು.

ಕೆ. ಶ್ರೀಕಾಂತ್

ಭಾರತೀಯ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಹೊಸ ಭಾಷ್ಯ ಬರೆದುಕೊಟ್ಟಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಇಂಜಿನಿಯರ್ ಆಗಿದ್ದರು. ಚೆನ್ನೈನ ಕಾಲೇಜಿನಲ್ಲಿ ಅವರು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮಾಡಿದ್ದರು. ಭಾರತ ಪರ 43 ಟೆಸ್ಟ್ ಮತ್ತು 146 ಏಕದಿನ ಪಂದ್ಯವಾಡಿರುವ ಶ್ರೀಕಾಂತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಜಾವಗಲ್ ಶ್ರೀನಾಥ್

ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿದ ಕನ್ನಡಿಗ ಜಾವಗಲ್ ಶ್ರೀನಾಥ್ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇನ್‌ಸ್ಟ್ರುಮೆಂಟೇಷನ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ಮೊದಲ ವೇಗಿ ಎನಿಸಿರುವ ಶ್ರೀನಾಥ್ ನಿವೃತ್ತಿಯ ಬಳಿಕ ಕೆಲಕಾಲ ಕ್ರಿಕೆಟ್ ಆಡಳಿತ ನಡೆಸಿ ಈಗ ಐಸಿಸಿ ಮ್ಯಾಚ್ ರೆಫ್ರಿಯಾಗಿದ್ದಾರೆ.

ಅನಿಲ್ ಕುಂಬ್ಳೆ

ಸ್ಪಿನ್ ದಿಗ್ಗಜ ಮತ್ತು ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900ಕ್ಕೂ ಅಧಿಕ ವಿಕೆಟ್ ಕಬಳಿಸಿರುವ ಕನ್ನಡಿಗ ಅನಿಲ್ ಕುಂಬ್ಳೆ ಕೂಡ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯ ಇಂಜಿನಿಯರಿಂಗ್ ಕಾಲೇಜಿನಲ್ಲಿ (ಆರ್‌ವಿಸಿಇ) ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮಾಡಿರುವ ಕುಂಬ್ಳೆ, ಸದ್ಯ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net