More

  ಸುರಂಗದಿಂದ ಮುಕ್ತಿಗೆ ಕ್ಷಣಗಣನೆ; ಶ್ರಮಜೀವಿಗಳಿಗೆ ಶೀಘ್ರ ಹೊರ ಜಗತ್ತಿನ ಬೆಳಕು

  ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್​ಯಾರಾದಲ್ಲಿ ಸಂಭವಿಸಿದ ಸುರಂಗ ದುರಂತದಲ್ಲಿ ಸಿಲುಕಿರುವ ಎಲ್ಲ 41 ಕಾರ್ವಿುಕರನ್ನು ಸುರಕ್ಷಿತವಾಗಿ ಹೊರತರುವ ಕಾರ್ಯಾಚರಣೆ ಗುರುವಾರ ಸಂಜೆ ಅಥವಾ ಶುಕ್ರವಾರ ಬೆಳಗ್ಗೆಯೊಳಗೆ ಯಶಸ್ವಿಯಾಗಿ ಪೂರ್ಣಗೊಳ್ಳುವ ಆಶಾವಾದವನ್ನು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್​ಡಿಆರ್​ಎಫ್) ಗುರುವಾರ ವ್ಯಕ್ತಪಡಿಸಿದೆ. ಒಳಗೆ ಸಿಲುಕಿರುವ ಕಾರ್ವಿುಕರು ಸುರಕ್ಷಿತವಾಗಿ ಹೊರಬರಲು ವಿವಿಧ ಸಂಸ್ಥೆಗಳು ನಡೆಸುತ್ತಿರುವ ಪ್ರಯತ್ನಗಳು ತಡರಾತ್ರಿ ಪೂರ್ಣಗೊಳ್ಳಬಹುದು ಎಂದು ದುರಂತ ಸ್ಥಳಕ್ಕೆ ಗುರುವಾರ ಆಗಮಿಸಿದ ಎನ್​ಡಿಆರ್​ಎಫ್ ಮಹಾ ನಿರ್ದೇಶಕ ಅತುಲ್ ಕರ್ವಾಲ್ ಹೇಳಿದ್ದಾರೆ.

  12 ದಿನದಿಂದ ಸಿಕ್ಕಿಹಾಕಿಕೊಂಡಿರುವ ಕಾರ್ವಿುಕರನ್ನು ರಕ್ಷಿಸುವ ಕಾರ್ಯಾಚರಣೆ ಅಂತಿಮ ಹಂತ ಮುಟ್ಟಿದ್ದು ಈ ಶ್ರಮಜೀವಿಗಳು ಹೊರ ಜಗತ್ತಿನ ಬೆಳಕು ನೋಡಲು ಇನ್ನೂ ಕೆಲವು ಗಂಟೆ ಬೇಕಾಗಬಹುದು. ನವೆಂಬರ್ 12ರಂದು ನಿರ್ಮಾಣ ಹಂತದ ಸುರಂಗ ಕುಸಿದು ದುರಂತ ಸಂಭವಿಸಿದೆ. ಅಂದಿನಿಂದಲೂ 41 ಕಾರ್ವಿುಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಹೆಚ್ಚು ಶಕ್ತಿಶಾಲಿ ಡ್ರಿಲ್ಲಿಂಗ್ ಯಂತ್ರ (ಆಗರ್ ಮೆಷಿನ್) ಪುನಃ ಕೆಲಸ ಆರಂಭಿಸಿದೆ. 6 ಮೀಟರ್​ನ ಇನ್ನೂ 2ರಿಂದ 3 ಪೈಪ್​ಗಳನ್ನು ಒಳಗೆ ಕಳಿಸಲಾಗುತ್ತದೆ. ಯಾವುದೇ ಅಡ್ಡಿ ಎದುರಾಗದಿದ್ದರೆ ಕಾರ್ಯಾಚರಣೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಕರ್ವಾಲ್ ಹೇಳಿದ್ದಾರೆ. 1 ಗಂಟೆಯಲ್ಲಿ 3 ಮೀಟರ್ ಕೊರೆಯುವ ಸಾಮರ್ಥ್ಯದ ಈ ಯಂತ್ರಕ್ಕೆ ಲೋಹವೊಂದು ಅಡ್ಡ ಬಂದು ತೊಂದರೆಯಾಗಿತ್ತು.

  ಗಾಲಿ ಸ್ಟ್ರೆಚರ್​ನಲ್ಲಿ ತರಲು ಯೋಜನೆ: ರಕ್ಷಣಾ ಕಾರ್ಯಕರ್ತರು ಒಳಗಿರುವ ಕಾರ್ವಿುಕರನ್ನು ಸಮೀಪಿಸಿದ ಮೇಲೆ ಒಬ್ಬೊಬ್ಬರೇ ಕಾರ್ವಿುಕರನ್ನು ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಹೊರ ಕರೆತರಲು ಎನ್​ಡಿಆರ್​ಎಫ್ ಯೋಜನೆ ರೂಪಿಸಿದೆ.

  ಬೆಳಗ್ಗೆ ಗುಡ್ ನ್ಯೂಸ್: ಆಗರ್ ಮೆಷಿನ್ ಯಾವುದೇ ಅಡ್ಡಿಯಿಲ್ಲದೆ ಯಥಾ ಪ್ರಕಾರ ಕೆಲಸ ಮುಂದುವರಿಸಿದರೆ ನಾಳೆ (ಶುಕ್ರವಾರ) ಹಗಲು ವೇಳೆಯಲ್ಲಿ ಗುಡ್ ನ್ಯೂಸ್ ಸಿಗಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಸದಸ್ಯ ಲೆ.ಜ. ಸೈಯದ್ ಅತಾ ಹಸ್ನೇನ್ ಹೇಳಿದ್ದಾರೆ.

  ರೈಲ್ವೆ ನೆರವು: ಕಾರ್ವಿುಕರನ್ನು ಸುರಕ್ಷಿತ ವಾಗಿ ಹೊರ ಕರೆತರುವ ಕಾರ್ಯಾಚರಣೆಗೆ ಬೇಕಾಗುವ ಬೃಹತ್ ಯಂತ್ರಗಳನ್ನು ಸಾಗಿಸಲು ಭಾರತೀಯ ರೈಲ್ವೆ ವಿಶೇಷ ರೈಲನ್ನು ಓಡಿಸುತ್ತಿದೆ. ಡ್ರಿಲ್ಲಿಂಗ್ ಯಂತ್ರಗಳನ್ನು ಹೊತ್ತ ನಾನ್-ಸ್ಟಾಪ್ ವಿಶೇಷ ರೈಲು ಒಡಿಶಾದ ಸಂಬಲ್ಪುರ್ ಜಂಕ್ಷನ್​ನಿಂದ ಹೊರಟಿದ್ದು ಗುರುವಾರ ಸಂಜೆ ಹೊತ್ತಿಗೆ ಋಷಿಕೇಶ ರೈಲ್ವೆ ನಿಲ್ದಾಣ ತಲುಪಲಿದೆ.

  ಕಾರ್ಯಾಚರಣೆ ಯುದ್ಧದಂತೆ: ‘ಸುರಂಗದಲ್ಲಿ ಸಿಲುಕಿರುವ ಕಾರ್ವಿುಕರ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯು ಒಂದು ಯುದ್ಧವಿದ್ದಂತೆ. ಅದಕ್ಕಾಗಿ ಯಾರೂ ಯಾವುದೇ ಸಮಯಮಿತಿಯನ್ನು ಕಲ್ಪಿಸಿಕೊಳ್ಳಬಾರದು’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಮಯಮಿತಿಯನ್ನು ನಿಗದಿಪಡಿಸುವುದರಿಂದ ರಕ್ಷಣಾ ಕಾರ್ಯಕರ್ತರ ಮೇಲೆ ಒತ್ತಡ ಉಂಟಾಗುತ್ತದೆ ಎಂದವರು ಹೇಳಿದ್ದಾರೆ.

  ಕಾರ್ವಿುಕರೊಂದಿಗೆ ಸಿಎಂ ಮಾತು: ಗುರುವಾರ ಸುರಂಗಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಒಳಗಡೆ ಸಿಲುಕಿರುವ 41 ನಿರ್ಮಾಣ ಕಾರ್ವಿುಕರನ್ನು ಮಾತನಾಡಿಸಿದರು. ‘ರಕ್ಷಣಾ ಕಾರ್ಯಕರ್ತರು ನಿಮ್ಮ ಹತ್ತಿರ ಬರುತ್ತಿದ್ದಾರೆ’ ಎಂದು ಕಾರ್ವಿುಕರಿಗೆ ಹೇಳಿ ಧೈರ್ಯ ತುಂಬಿದರು. ಸಹ-ಕಾರ್ವಿುಕರ ಸ್ಥಿತಿಗತಿ ಬಗ್ಗೆ ಗಬ್ಬರ್ ಸಿಂಗ್ ನೇಗಿ ಮತ್ತು ಸಬಾ ಅಹಮದ್ ಎಂಬಿಬ್ಬರು ಶ್ರಮಿಕರ ಬಳಿ ವಿಚಾರಿಸಿದ ಸಿಎಂ, ಈ ಇಬ್ಬರು ಕಾರ್ವಿುಕರ ನೈತಿಕ ಸ್ಥೈರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

  ಪ್ರಿಯಾಂಕಾ ಪ್ರಾರ್ಥನೆ: ಕಾರ್ವಿುಕರು ಸುರಕ್ಷಿತವಾಗಿ ಬರಲೆಂದು ಗುರುವಾರ ಪ್ರಾರ್ಥಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಅವರಿಗೆ ಗರಿಷ್ಠ ಪರಿಹಾರ ಹಾಗೂ ನೆರವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಾರ್ವಿುಕರನ್ನು ಉಳಿಸುವ ಕಾರ್ಯಾಚರಣೆ ಯಶಸ್ಸಿನ ಹೊಸ್ತಿಲಲ್ಲಿದೆ ಎಂಬ ಸುದ್ದಿಯಿದೆ. ಪ್ರತಿಯೊಬ್ಬರೂ ಶೀಘ್ರವೇ ಸುರಕ್ಷಿತವಾಗಿ ಹೊರಬರುವ ಆಶಾವಾದವಿದೆ ಎಂದು ಎಕ್ಸ್ ಪೋಸ್ಟ್​ನಲ್ಲಿ ಪ್ರಿಯಾಂಕಾ ಹೇಳಿದ್ದಾರೆ.

  ಕೇಂದ್ರ ಮಂತ್ರಿ ಸುರಂಗ ಪ್ರವೇಶ: ಕೇಂದ್ರ ಸಚಿವ ವಿ.ಕೆ. ಸಿಂಗ್, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವ ಸುರಂಗವನ್ನು ಗುರುವಾರ ಪ್ರವೇಶಿಸಿದ್ದಾರೆ. ಅವರೊಂದಿಗೆ ಕೆಲವು ಹಿರಿಯ ಅಧಿಕಾರಿಗಳೂ ಇದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts