

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 2019ರಲ್ಲಿ ಆರಂಭವಾದಂದಿನಿಂದ ಸತತವಾಗಿ ಅಭಿವೃದ್ಧಿ ಪಥದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 42 ಲಕ್ಷ ರೂ.ಲಾಭ ಗಳಿಸಿದೆ. ಉಜಿರೆಯಲ್ಲಿ ಸಂಘ ಹೊಂದಿರುವ 15 ಕೋಟಿ ರೂ.ಮೌಲ್ಯದ ಆಸ್ತಿಯಲ್ಲಿ 10 ಕೋಟಿ ರೂ.ವೆಚ್ಚದ ಸುಸಜ್ಜಿತ ಸಭಾಭವನ ನಿರ್ಮಾಣ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಹೇಳಿದರು.
ಶನಿವಾರ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ 2111 ಸದಸ್ಯರನ್ನು ಮತ್ತು 1.82 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 19 ಕೋಟಿ ರೂ. ವಿವಿಧ ಸಾಲಗಳನ್ನು ನೀಡಿದ್ದು, 21 ಕೋಟಿ ರೂ. ಠೇವಣಾತಿ ಹೊಂದಿರುತ್ತಿದೆ. ಮುಂದಿನ ಮಹಾಸಭೆಯೊಳಗೆ ಒಟ್ಟು ನಾಲ್ಕು ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಸಂಘವನ್ನು ರಾಜ್ಯಮಟ್ಟಕ್ಕೆ ವಿಸ್ತರಿಲಾಗುವುದು ಎಂದರು.
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಮಾತನಾಡಿ, ಸಂಘಟನೆ ಮತ್ತು ಬ್ಯಾಂಕ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಘದ ಅಭಿವೃದ್ಧಿಗೆ ಸಮುದಾಯದ ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ವಾಚಿಸಿದರು. ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕರಾದ ಎನ್.ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ.ಜಯಂತ ಗೌಡ ಗುರಿಪಳ್ಳ, ಸುಂದರ ಗೌಡ ಪುಡ್ಕೆತ್ತು, ಬಿ.ಕೃಷ್ಣಪ್ಪ ಗೌಡ ಬೇಂಗಳ, ಜಯಂತ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಹಾನಿಬೆಟ್ಟು, ಕೆ.ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ, ಚೇತನಾ ಉಪಸ್ಥಿತರಿದ್ದರು. ನಿರ್ದೇಶಕರಾದ ಧರ್ಮರಾಜ ಗೌಡ ಅಡ್ಕಾಡಿ ವಂದಿಸಿದರು. ನಿತಿನ್ ಗೌಡ ಸುರುಳಿ ನಿರೂಪಿಸಿದರು.
ಪಿಯುಸಿಯಲ್ಲಿ ಶೇ.90ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಕೆ.ಎಸ್.ಹಿಮಕರ ಗೌಡ ಕೂಡಿಗೆ, ಕವನಾ ಚಾರ್ಮಾಡಿ, ಪ್ರಜ್ವಲ್ ಅರಳಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ಹಷರ್ ಎಂ.ಎಚ್.ಮರಕಡ, ಗೌತಮಿ ಡಿ.ಬಡೆಕೊಟ್ಟು, ಸಂಜನಾ ಗಾಂಜಾಲು ಅವರನ್ನು ಗೌರವಿಸಲಾಯಿತು.