

ಪುತ್ತೂರು: ಗುಜರಾತಿನ ಸ್ಟಾಚ್ಯೂ ಆಫ್ ಯೂನಿಟಿ ಪ್ರದೇಶಾಭಿವೃದ್ಧಿ ಇಲಾಖೆ, ಸಾಪ್ತಿ, ಭೂವಿಜ್ಞಾನ ಮತ್ತು ಗಣಿ ಇಲಾಖೆ ಮತ್ತು ಇತರರ ಸಹಯೋಗದಲ್ಲಿ ಜು.೨೦ ರಿಂದ ಆ.೮ರವರೆಗೆ ನಡೆದ ರಾಷ್ಟ್ರಮಟ್ಟದ ೭ನೇ ಶಿಲ್ಪೋತ್ಸವ ಸರಣಿ ಕಾರ್ಯಾಗಾರದಲ್ಲಿ ರಾಷ್ಟ್ರಮಟ್ಟದ ವಿವಿಧ ರಾಜ್ಯಗಳಿಂದ ಹೆಸರಾಂತ ಶಿಲ್ಪಿಗಳ ಜತೆಗೆ ದ.ಕ. ಜಿಲ್ಲೆಯ ಕಡಬ ತಾಲೂಕು ಆಲಂಕಾರಿನ ನಿವಾಸಿ ಶಿವಸುಬ್ರಹ್ಮಣ್ಯ ಕರ್ನಾಟಕವನ್ನು ಪ್ರತಿನಿಽಸಿದ್ದಾರೆ.
ಕಾರ್ಯಾಗಾರದಲ್ಲಿ ಅಖಂಡ ಭಾರತದ ಸ್ವರೂಪವನ್ನು ಪ್ರತಿನಿಽಸುವ ’ಸರ್ದಾರ್ ಕಾ ಭಾರತ್’ ಎಂಬ ೧೫ ಅಡಿ ಎತ್ತರದ ಅಮೃತ ಶಿಲಾ ಪ್ರತಿಮೆಯನ್ನು ನಿರ್ಮಿಸಿದ್ದು, ಇದು ಎಡ ಮತ್ತು ಬಲ ದಿಕ್ಕಿನಿಂದ ನೋಡಿದಾಗ ಸರ್ದಾರ್ ವಲ್ಲಭ ಭಾಯ್ ಪಟೇಲರ ನಿಲುವಿನಂತೆ ಕಾಣುವುದಲ್ಲದೆ ಮುಂಭಾಗ ಮತ್ತು ಹಿಂಭಾಗದಿಂದ ಅಖಂಡ ಭಾರತದ ಸ್ವರೂಪವನ್ನು ಹೊಂದಿದೆ. ಈ ಮೂರ್ತಿಯು ಶಿವಸುಬ್ರಹ್ಮಣ್ಯ ಅವರ ಎರಡನೇ ಆವೃತ್ತಿಯ ಕಲಾಕೃತಿಯಾಗಿದ್ದು, ಮೊದಲ ಆವೃತ್ತಿಯಲ್ಲಿ ನಿರ್ಮಿತವಾದ ಕಲಾಕೃತಿ ಗುಜರಾತಿನ ಗಾಂಽನಗರದ ರಾಜಭವನದಲ್ಲಿ ಸ್ಥಾಪಿತವಾಗಿದೆ.
ಇವರು ಮಂಗಳೂರಿನ ಮಹಾಲಸಾ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಪದವಿ ಶಿಕ್ಷಣವನ್ನು ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶಿಲ್ಪಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಶಿಲ್ಪಕಲಾ ಕಾರ್ಯಾಗಾರ, ಪ್ರದರ್ಶನಗಳಲ್ಲಿ ಭಾಗವಹಿಸಿರುವ ಇವರು ಪ್ರಸ್ತುತ ಗುಜರಾತಿನ ಅಂಬಾಜಿಯಲ್ಲಿರುವ Stone Artisan Park Training Institute ನಲ್ಲಿ ಹಿರಿಯ ಶಿಲ್ಪಕಲಾ ಅಧ್ಯಾಪಕರಾಗಿ ಆಧುನಿಕ ಸಿ.ಎನ್.ಸಿ. ತಂತ್ರಜ್ಞಾನದ ಮೂಲಕ ಶಿಲಾ-ಶಿಲ್ಪಕಲಾಕೃತಿಗಳ ತಯಾರಿಕೆಯ ವಿಧಾನದಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಕಾಸರಗೋಡು ಸಮೀಪದ ನೆಕ್ರಾಜೆ ಗ್ರಾಮದ ಆಲಂಕೋಡ್ಲು ಕೆ. ವೆಂಕಟಕೃಷ್ಣ ಭಟ್ ಮತ್ತು ಶಶಿಪ್ರಭಾ ದಂಪತಿಯ ಪುತ್ರ.