

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಜುಗರಕ್ಕೆ ಒಳಗಾಗುವಂತೆ ಅವರದೇ ಪಕ್ಷದ ಇನ್ನೊಬ್ಬ ನಾಯಕರು ನಡೆದುಕೊಂಡ ಪ್ರಸಂಗವೊಂದು ನಡೆದಿದೆ. ಸಿದ್ದರಾಮಯ್ಯ ಅವರಿಗೆ ಇರಿಸುಮುರಿಸಾಗುವ ರೀತಿಯಲ್ಲಿ ಕಾಂಗ್ರೆಸ್ ನಾಯಕ ಉಗ್ರಪ್ಪ ಮಾತನಾಡಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶದ ಸಲುವಾಗಿ ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ಪ್ರಸಂಗ ನಡೆದಿದೆ. ಪೂರ್ವಭಾವಿ ಸಭೆಗೆ ನೀವು ಕರೆಯದಿದ್ದರೂ ಬಂದಿದ್ದೀರಿ ಎಂದು ಉಗ್ರಪ್ಪ ಬಹಿರಂಗವಾಗಿ ಹೇಳಿದ್ದು ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾಗುವಂಥ ಪರಿಸ್ಥಿತಿ ಸೃಷ್ಟಿಸಿತ್ತು.
'ಸಿದ್ದರಾಮಯ್ಯನವರೇ ನಿಮಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ, ಆದರೂ ಯಾಕೆ ಬಂದ್ರಿ?' ಎಂದು ಉಗ್ರಪ್ಪ ಕೇಳಿದರು. 'ಏ ಉಗ್ರಪ್ಪ, ನಾನು ಬರೋ ಹಂಗೆ ಇರಲಿಲ್ಲ, ಪರಮೇಶ್ವರ್ ಫೋನ್ ಮಾಡಿ ಕರೆದ್ರು, ಅದಕ್ಕೇ ಬಂದಿದೀನಿ. ನಿಂಗೆ ಈ ಥರ ಮಾತಾಡಿಲ್ಲ ಅಂದ್ರೆ ತಿಂದಿದ್ದು ಅರಗಲ್ವಾ?' ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಉಗ್ರಪ್ಪ ನಕ್ಕು ಸುಮ್ಮನಾದರು.