ನನಗೆ ಮಸಿ ಬೆಳೆಯಲು ಯತ್ನ; ಪ್ರತಿಪಕ್ಷದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ugrappa
Published on

ಬೆಂಗಳೂರು: ನನಗೆ ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತದೆ ಎಂದು ನಾನೂ ನೋಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಬದುಕು, ಹೋರಾಟವನ್ನು ಕಟ್ಟಿಕೊಟ್ಟಿರುವ ‘ಸಮರ್ಥ ಜನ ನಾಯಕ ವಿ.ಎಸ್.ಉಗ್ರಪ್ಪ’ ಕೃತಿ ಜನಾರ್ಪಣೆ ಮಾಡಿ ಅವರು ಮಾತನಾಡಿದ್ದು, ಮುಡಾ ಪ್ರಕರಣ ತೀವ್ರ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಈ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.

ಉಗ್ರಪ್ಪ ಮತ್ತು ನಾನು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಂಡವರಲ್ಲ. ಇದೇ ಕಾರಣಕ್ಕೆ ನನಗೆ ಮಸಿ ಬಳಿಯಲು ಹೊರಟಿದ್ದಾರೆ ಎಂದ ಅವರು ನಾನು ಬಳ್ಳಾರಿ ಪಾದಯಾತ್ರೆ ಮಾಡುವುದಕ್ಕೂ ಮೊದಲೇ ಉಗ್ರಪ್ಪ ಗಣಿ ಹಗರಣ ಮತ್ತು ರೆಡ್ಡಿ ಬ್ರದರ್ಸ್ ವಿಚಾರದ ಬಗ್ಗೆ ಸತ್ಯ ಶೋಧನಾ ವರದಿ ನೀಡಿದ್ದರು. ಈ ವರದಿ ಬಳ್ಳಾರಿ ಪಾದಯಾತ್ರೆಗೆ ನಾನು ತೋಳು ತಟ್ಟುವಂತಾಯಿತು. ಪಾದಯಾತ್ರೆ ಯಶಸ್ವಿಗೆ ಉಗ್ರಪ್ಪ ಅವರ ಪಾತ್ರ ಕೂಡ ಪ್ರಮುಖವಾದದ್ದು ಎಂದು ಬಣ್ಣಿಸಿದರು.

ಉಗ್ರಪ್ಪ ಬಹಳ ನಿಷ್ಠುರವಾದಿ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ವಿಚಾರದಲ್ಲಿ ಯಾರ ಜೊತೆಗೂ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗೆಯೇ, ಸಂವಿಧಾನದ ಆಚೆಗೆ ಯೋಚಿಸುವವರಲ್ಲ. ವಕೀಲರಾಗಿ ಹಲವಾರು ವರ್ಷ ಸಂವಿಧಾನದ ಪಾಠ ಮಾಡಿ ಈಗ ಸಂವಿಧಾನ ನಾಲಗೆ ತುದಿಯಲ್ಲೇ ಇದೆ. ತಪ್ಪುಗಳನ್ನು ಹುಡುಕುವುದರಲ್ಲಿ ಉಗ್ರಪ್ಪರು ನಿಸ್ಸೀಮರು ಎಂದು ಮೆಚ್ಚುಗೆ ಸೂಚಿಸಿದರು.

ಉಗ್ರಪ್ಪ ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ಸಿಗಬೇಕಿತ್ತು. ಸಿಕ್ಕಿಲ್ಲ ಎನ್ನುವ ಬೇಸರ ನನಗೂ ಇದೆ. ಮುಂದೆ ಅವಕಾಶ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಗಣಿ ಹೋರಾಟಕ್ಕೆ ಪ್ರೇರಕ

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಉಗ್ರಪ್ಪ ವಿದ್ಯಾರ್ಥಿ ದೆಸೆಯಿಂದಲೇ ನಾಯಕರಾಗಿದ್ದರು. ಉಗ್ರಪ್ಪ ಪಕ್ಷಕ್ಕೆ ಕ್ಲಿಷ್ಟ ಸಂದರ್ಭದಲ್ಲಿ ಪಿನ್ ಪಾಯಿಂಟ್ ಸಲಹೆ ಕೊಟ್ಟಿದ್ದರು. ಗಣಿ ವಿಚಾರದಲ್ಲಿ ಬಹಳ ಚನ್ನಾಗಿ ತನಿಖೆ ಮಾಡಿ ವರದಿ ಕೊಟ್ಟರು. ಗಣಿಗಾರಿಕೆ ವಿರುದ್ಧ ನಮ್ಮ ದೊಡ್ಡ ಹೋರಾಟಕ್ಕೆ ಪ್ರೇರೇಪಣೆ ಆಗಿದ್ದರು. ಪಕ್ಷದ ಯಶಸ್ಸಿನ ಕತೆಗಳ ಜತೆ ಉಗ್ರಪ್ಪ ನಿಂತಿದ್ದಾರೆ ಎಂದು ಹೇಳಿದರು.

ಅನ್ಯಾಯ ಕಂಡಾಗ ‘ಉಗ್ರ’ ಪ್ರತಿಭಟನೆ

ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಅನ್ಯಾಯ ಕಂಡಾಗ ಉಗ್ರವಾಗಿ ಪ್ರತಿರೋಧಿಸುವ ಗುಣವನ್ನು ಉಗ್ರಪ್ಪ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಂಡು ಬಂದಿದ್ದಾರೆ. ಪ್ರಜಾಸತ್ತಾತ್ಮಕ ಕೆಲಸ ಮಾಡುತ್ತ ಬಂದಿದ್ದಾರೆ. ಆಳ ಜ್ಞಾನವುಳ್ಳವರು. ರೈತರು, ಮಹಿಳೆಯರು, ಹಿಂದುಳಿದವರು ಯಾರಿಗೇ ಅನ್ಯಾಯವಾದರೂ ವಿರೋಧಿಸುವ ಗುಣ ಅವರಲ್ಲಿದೆ. ಸಮಯಸಾಧಕ ರಾಜಕಾರಣದ ಎದುರು ಸೈದ್ಧಾಂತಿಕ ರಾಜಕಾರಣ ಕಟ್ಟಬೇಕು. ಸೌಹಾರ್ದತೆ, ಸಮಾನತೆ ಉಳಿಯಲು ದುಡಿಯುವವರೇ ನಿಜವದ ಸೈದ್ಧಾಂತಿಕ ರಾಜಕಾರಣಿಗಳು. ಶಕ್ತಿ ರಾಜಕಾರಣದ ಮಧ್ಯೆ ತನ್ನ ಮೂಲತತ್ವ ಉಳಿಸಿಕೊಳ್ಳುವವರು ಪ್ರಜಾಪ್ರಭುತ್ವ ಕೊಡುಗೆ ಕೊಡುತ್ತಾರೆ. ಅವರ ಸಾಲಿಗೆ ಉಗ್ರಪ್ಪ ಸೇರುತ್ತಾರೆ ಎಂದು ಪ್ರಶಂಸಿಸಿದರು.

ಉಗ್ರಪ್ಪಗೆ ರಾಜಕೀಯ ಅವಕಾಶ ಸಿಗಬೇಕು

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ನಾವಿಬ್ಬರೂ ಐವತ್ತು ವರ್ಷ ಒಂದೇ ದೋಣಿಯಲ್ಲಿ ಸಾಗಿ ಬಂದಿದ್ದೇವೆ. ಉಗ್ರಪ್ಪ ಸಮರ್ಥ ನಾಯಕರು ಅವರಿಗೆ ರಾಜಕೀಯದಲ್ಲಿ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಸಿಎಂ, ಡಿಸಿಎಂ ಮನಸ್ಸು ಮಾಡಬೇಕು ಎಂದರು.

ತಾತ್ವಿಕ ನೆಲೆ

ನ್ಯಾಯಮೂರ್ತಿ ನಾಗಮೋಹನ ದಾಸ್ ಮಾತನಾಡಿ, ಯಾವ ಕ್ರಾಂತಿಯೂ ತರಲಾಗದ ಬದಲಾವಣೆಯನ್ನು ಪುಸ್ತಕ ತಂದಿವೆ. ಪುಸ್ತಕ ಬೆಳಕಿನ ದೀಪವಾಗಿ ಮುಂದಿನ ಜನಾಂಗ ಮುನ್ನಡೆಸಲಿ. ಅನೇಕ ಗಂಭೀರ ವಿಚಾರಗಳ ಬಗ್ಗೆ ಬೆಳಕು ಈ ಪುಸ್ತಕ ಚೆಲ್ಲುತ್ತದೆ.ಉಗ್ರಪ್ಪ ಅವರು ವಿಧಾನ ಮಂಡಲ, ಸಂಸತ್ತಿನ ಒಳಗೆ ಹೊರಗೆ ಮಾಡಿದ ಭಾಷಣ, ಹೋರಾಟದ ಹಿಂದೆ ತಾತ್ವಿಕ ನೆಲೆಯಿದೆ. ಸಂವಿಧಾನದ ಮೂಲತತ್ವ, ಬಹುತ್ವ ಕಲ್ಯಾಣರಾಜ್ಯ, ಸಮಾನತೆ ಆಶಯ ಅದರ ಹಿಂದಿದೆ ಎಂದು ಹೇಳಿದರು.

ಶಾಸಕ ಟಿ.ಬಿ.ಜಯಚಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಶ್ರೀ ಆತ್ಮಾನಂದ ಸ್ವಾಮೀಜಿ, ರಾಮಲಿಂಗೇಶ್ವರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಹಿಂದೆ ಬಹು ದೊಡ್ಡ ಪಿತೂರಿ ನಡೆಯುತ್ತಿದೆ. ನೀವು ದೃತಿಗೆಡಬೇಡಿ. ಪಿತೂರಿ ಮಾಡುವವರ ಉದ್ದೇಶ ಬೇರೆಯಿದೆ. ನಿಮ್ಮ ಹಿಂದಿರುವ ಶಕ್ತಿ ಉಡುಗಿಸುವ ಹುನ್ನಾರವಿದೆ. ನೀವು ನಿಜವಾಗಿಯೂ ಕಲ್ಲು ಬಂಡೆ. ಕಲ್ಲುಬಂಡೆ(ಡಿ.ಕೆ.ಶಿವಕುಮಾರ್)ನಿಮ್ಮ ಹಿಂದಿದೆ. ಧೈರ್ಯವಾಗಿರಿ. ನಿಮ್ಮನ್ನು ಚುಡಾಯಿಸುತ್ತಾರೆ. ನಿಮ್ಮ ರಾಜೀನಾಮೆ ಕೇಳಲು ಇವರಿಗೆ ಏನು ಹಕ್ಕಿದೆ? ನೀವೇನೂ ತಪ್ಪು ಮಾಡಿಲ್ಲ. ನೀವು ಬಡವರ ಪಾಲಿನ ದೇವರು. ಲೇವಡಿ ಮಾಡುವುದನ್ನು ಎಷ್ಟು ದಿನ ಸಹಿಸಿಕೊಳ್ಳಲು ಆಗುತ್ತದೆ. ನಮಗೂ ಒಂದು ತಾಳ್ಮೆ ಇದೆ.

>ಪಿ.ಜಿ.ಆರ್.ಸಿಂಧ್ಯ, ಮಾಜಿ ಸಚಿವ.

ಕೋಟ್:

ಭ್ರಷ್ಟಾಚಾರ, ಜಾತಿವಾದ ನನ್ನ ಶತ್ರುಗಳು. ಭ್ರಷ್ಟರ ಜತೆ ರಾಜೀ ಮಾಡಿಕೊಳ್ಳುವುದಿಲ್ಲ. ನಾನು ಸಿದ್ಧಗಂಗಾ ಮಠದಲ್ಲಿ ಓದದೇ ಇದ್ದರೆ, ವಕೀಲನಾಗದೇ ಇದ್ದರೆ ಬಹುಶ: ನಾನೊಬ್ಬ ನಕ್ಸಲೈಟ್ ಆಗುತ್ತಿದ್ದೆ. ದೇಶ, ರಾಜ್ಯ ರಾಜಕಾರಣದಲ್ಲಿ ಮೌಲ್ಯಾಧಾರಿತ ರಾಜಕಾರಣ ಅವಶ್ಯಕತೆ ಇದೆ. ಬದ್ಧತೆ ಇರುವವರನ್ನು ಬೆಳೆಸಬೇಕು. ವಿಶ್ವ ಮಾನವತ್ವ ಸಾರುವ ನಾಯಕರನ್ನು ಸೃಷ್ಟಿ ಮಾಡಬೇಕಿದೆ.

>ವಿ.ಎಸ್.ಉಗ್ರಪ್ಪ, ಮಾಜಿ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net