ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ನೇಮೋತ್ಸವ

nema
ಉದ್ಯಾವರ ಮಾಡದಲ್ಲಿ ಶ್ರೀಅರಸು ಮಂಜೀಷ್ಣಾರ್ ಅಣ್ಣ-ತಮ್ಮ ದೈವಗಳ ನೇಮ ಜರುಗಿತು.
Published on

ಮಂಜೇಶ್ವರ: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಅಣ್ಣ-ತಮ್ಮ ದೈವಗಳ ಕ್ಷೇತ್ರದಲ್ಲಿ 5 ದಿನಗಳ ಜಾತ್ರೆ ಸಾಂಪ್ರದಾಯಿಕ ಶ್ರದ್ಧಾ-ಭಕ್ತಿಗಳೊಂದಿಗೆ ಸಮಾಪ್ತಿಗೊಂಡಿತು. ಮಂಗಳವಾರ ಧ್ವಜಾವರೋಹಣ ನಡೆಯಿತು.

ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ನಡೆಯುತ್ತಿರುವ ಉದ್ಯಾವರ ಶ್ರೀ ಅರಸು ದೈವಗಳ ವರ್ಷಾವಧಿ ಉತ್ಸವಕ್ಕೆ ಈ ಸಲ ಎಲ್ಲ ವರ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದು ವಿಶೇಷವಾಗಿತ್ತು. ಸಂಪ್ರದಾಯದಂತೆ ಕಟ್ಟೆಯ ಒಂದು ಭಾಗದಲ್ಲಿ ಹಿಂದುಗಳು, ಇನ್ನೊಂದು ಭಾಗದಲ್ಲಿ ಮುಸಲ್ಮಾನರು ಕುಳಿತು ಉತ್ಸವ ವೀಕ್ಷಿಸಿದರು.

ಎರಡು ದಿನಗಳಲ್ಲಿ ನಡೆದ ಬಂಡಿ ಉತ್ಸವ ವೀಕ್ಷಿಸಲು ಜನ ಸಾಗರವೇ ಹರಿದು ಬಂದಿತ್ತು. ನೂತನ ಷಟ್ಪಥ ರಸ್ತೆ ಆರಂಭಗೊಂಡ ಬಳಿಕ ಭಕ್ತಾಭಿಮಾನಿಗಳು ಕಿಲೋ ಮೀಟರುಗಳ ತನಕ ನಡೆದು ಬಂದ ದೃಶ್ಯ ಕಂಡು ಬಂತು.

ಪ್ರತಿ ವರ್ಷ ಮಳೆಯ ಕಾರಣ ಭಕ್ತರು ಚದುರಿ ಹೋಗುತ್ತಿದ್ದರೂ, ಈ ಬಾರಿ ಮಳೆ ಸುರಿಯದ ಕಾರಣ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡು ಬಂದಿತ್ತು. ಅಣ್ಣ-ತಮ್ಮ ದೈವಗಳ ನೇಮದ ಬಳಿಕ ಕೊನೆಯ ಬಂಡಿ ಉತ್ಸವ ನಡೆದು ಸುಡುಮದ್ದು ಪ್ರದರ್ಶನ ನಡೆಯಿತು.

ಕುಂಜತ್ತೂರು ಅಂಡರ್‌ಪಾಸಿನಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಕಠಿಣವಾದಾಗ ಉತ್ಸವದ ಎಲ್ಲ ದಿನಗಳಲ್ಲೂ ಸ್ಥಳೀಯ ಸಮಾಜ ಸೇವಕರಾದ ಅಕ್ಬರ್ ಹಾಗೂ ಸಮದ್ ಅವರ ನೇತೃತ್ವದಲ್ಲಿ ವಾಹನ ಸಂಚಾರ ಸುಗಮಗೊಳಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net