

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅಧ್ಯಾತ್ಮದ ಒಲವು ಹೊಂದಿ ಭಕ್ತಿ ಪಥದಲ್ಲಿ ಮುನ್ನಡೆದಾಗ ವ್ಯಸನಗಳು ಬಾಧಿಸುವುದಿಲ್ಲ. ಆಧ್ಯಾತ್ಮಿಕ ಚಿಂತನೆಗಳಿಂದ ಅತ್ಯುತ್ತಮ ವ್ಯಕ್ತಿತ್ವ ಸಾಧಿಸಬಹುದು. ದುಶ್ಚಟಗಳನ್ನು ತ್ಯಜಿಸಿ ಸಂಸಾರದೊಂದಿಗೆ ನೆಮ್ಮದಿಯಿಂದ ಬಾಳಿ ಬದುಕಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆ ಲಾಯಿಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 223ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.
ಯಾವುದೇ ಅಭ್ಯಾಸ ಆಕಸ್ಮಿಕವಾಗಿ, ಅನವಶ್ಯಕವಾಗಿ ಪ್ರಾರಂಭವಾಗುತ್ತದೆ. ಬದುಕು ಹಾಳು ಮಾಡಿಕೊಳ್ಳಬೇಕೆಂಬ ಭಾವನೆಯಿಂದ ಯಾರು ದುಶ್ಚಟ ಕಲಿಯುವುದಿಲ್ಲ. ಬದಲಿಗೆ ಸುಖ, ಸಂತೋಷ, ಧೈರ್ಯ ಸಾಧಿಸಬಹುದೆಂಬ ಭ್ರಮೆಯಿಂದ ಚಟಕ್ಕೆ ಬಲಿ ಬೀಳುತ್ತಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ಅಹಂಕಾರವೇ ವ್ಯಸನಕ್ಕೆ ಪ್ರಮುಖ ಕಾರಣ. ವ್ಯಸನವು ಎಲ್ಲವನ್ನೂ ನಿರ್ನಾಮ ಮಾಡುತ್ತದೆ ಎಂದರು.
ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿಗಳಾದ ದೇವಿಪ್ರಸಾದ್ ಸುವರ್ಣ, ಚಿತ್ತರಂಜನ್, ಆರೋಗ್ಯ ಸಹಾಯಕರಾದ ನೇತ್ರಾವತಿ, ರಂಜನಾ ಸಣ್ಣಕ್ಕಿ ಸಹಕರಿಸಿದರು.
ಮುಂದಿನ ವಿಶೇಷ ಶಿಬಿರ ಮೇ 20ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.
8 ದಿನದ ಶಿಬಿರದಲ್ಲಿ 76 ಶಿಬಿರಾರ್ಥಿಗಳು ಭಾಗವಹಿಸಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ.ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ಮನೋವೈದ್ಯಕೀಯ ಚಿಕಿತ್ಸೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಯೋಗ ಮತ್ತು ದೈಹಿಕ ಚಟುವಟಿಕೆಗಳು, ಸಲಹಾ ಕಾರ್ಯಕ್ರಮ, ಸಾಂಸ್ಕೃತಿಕ, ಉಪಯುಕ್ತ ವಿಡಿಯೋ ಪ್ರದರ್ಶನ, ವಿಷಯಾಧಾರಿತ ಪ್ರವಚನ, ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಆತ್ಮಾವಲೋಕನ, ಕುಟುಂಬದ ದಿನ ಮುಂತಾದ ಕಾರ್ಯಕ್ರಮಗಳ ಮೂಲಕ ಮನಃಪರಿವರ್ತನೆಗೆ ಆದ್ಯತೆ ನೀಡಲಾಯಿತು.