

ಉಡುಪಿ: ಜಿಲ್ಲೆಯಲ್ಲಿ ಕರೊನಾ ಹಾವಳಿ ಮುಂದುವರಿದ್ದು, ಉಡುಪಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಗೆ ಕರೊನಾ ಪಾಸಿಟಿವ್ ದೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಎರಡು ದಿನ ಸೀಲ್ ಡೌನ್ ಮಾಡಲಾಗಿದೆ ಎಂದು ಕೋರ್ಟ್ ಮೂಲಗಳು ತಿಳಿಸಿವೆ.
ನ್ಯಾಯಾಧೀಶರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಮಂಗಳವಾರ ಮತ್ತು ಬುಧವಾರ ಎರಡು ದಿನ ಸ್ಯಾನಿಟೈಸ್ ಕಾರ್ಯ ನಡೆಯಲಿದೆ. ಗುರುವಾರದಿಂದ ಎಂದಿನಂತೆ ಎಲ್ಲಾ ವಿಭಾಗದ ನ್ಯಾಯಾಲಯ ಕಲಾಪಗಳು ಜರುಗಲಿವೆ.
ಮೃತ ಯುವಕನಿಗೆ ಸೋಂಕು: ಕಿಡ್ನಿ ತೊಂದರೆಗಾಗಿ ಕಳೆದ 15 ದಿನಗಳಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕೇರಳದ ಕಣ್ಣೂರು ಜಿಲ್ಲೆಯ 35 ವರ್ಷದ ಸಮೀರ್ ಎಂಬ ಯುವಕ ನಿನ್ನೆ ರಾತ್ರಿ ಮೃತಪಟ್ಟಿದ್ದು, ಆತನಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿದುಬಂದಿದೆ. ಯುವಕ ಸೋಮವಾರ ರಾತ್ರಿ ಮೃತಪಟ್ಟಿದ್ದು, ಬಳಿಕ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.