

ಉದಯಪುರ: ಪಾತಕಿಗಳಿಂದ ಹತ್ಯೆಯಾದ ಟೈಲರ್ ಕನ್ಹಯ್ಯ ಲಾಲ್ ಅವರ ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.
ರಾಜಸ್ಥಾನ ಸಂಪುಟ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದ್ದು, ಕನ್ಹಯ್ಯ ಏಕೈಕ ಆಧಾರವಾಗಿದ್ದರಿಂದ ಮಕ್ಕಳಿಗೆ ನೌಕರಿ ನೀಡಲು ಸರ್ಕಾರ ಮುಂದಾಗಿದೆ.
ಕನ್ಹಯ್ಯಲಾಲ್ ಅವರ ಇಬ್ಬರು ಪುತ್ರರಾದ ಯಶ್ ತೇಲಿ ಮತ್ತು ತರುಣ್ ತೇಲಿ ಅವರನ್ನು ಸರ್ಕಾರಿ ಸೇವೆಗೆ ನೇಮಕ ಮಾಡಿಕೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಮೃತ ಕನ್ಹಯ್ಯ ಲಾಲ್ ಅವರ ಕುಟುಂಬದ ಜೀವನೋಪಾಯಕ್ಕೆ ಬೇರೆ ಯಾವುದೇ ಮೂಲವಿಲ್ಲ. ಅವರ ಅವಲಂಬಿತರಿಗೆ ಕೆಲಸ ನೀಡಿದರೆ ಅವರ ಜೀವನ ಸುಗಮವಾಗಿ ನಡೆಯಲಿದೆ. ಕುಟುಂಬಕ್ಕೆ ಆರ್ಥಿಕ ಮತ್ತು ಮಾನಸಿಕ ಸಹಾಯ ಸಿಗಲಿದೆ ಗೆಹ್ಲೋಟ್ ಹೇಳಿದ್ದಾರೆ.
ಜೂನ್ 28ರಂದು ಕನ್ಹಯ್ಯ ಲಾಲ್ ಅವರನ್ನು ಭೀಕರವಾಗಿ ಇರಿದು ಕೊಲೆ ಮಾಡಲಾಗಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. (ಏಜೆನ್ಸೀಸ್)