ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ನವದುರ್ಗೆಯರ ಸಹಿತ ಶಾರದಾ ಮಾತೆ ವಿಗ್ರಹಗಳ ಜಲಸ್ತಂಭನದೊಂದಿಗೆ 10 ದಿನಗಳಿಂದ ನಡೆದ ಉಡುಪಿ ಉಚ್ಚಿಲ ದಸರಾ ಉತ್ಸವ ಶನಿವಾರ ಸಮಾಪನಗೊಂಡಿತು.
ಚಂಡಿಕಾಯಾಗ, ವಿಸರ್ಜನಾ ಶೋಭಾಯಾತ್ರೆ ಪ್ರಯುಕ್ತ ಬೆಳಗ್ಗಿನಿಂದಲೇ ಸಹಸ್ರಾರು ಮಂದಿ ಕ್ಷೇತ್ರಕ್ಕೆ ಆಗಮಿಸಿದ್ದು, ಭಕ್ತರ ಅನುಕೂಲಕ್ಕಾಗಿ ಬೆಳಗ್ಗೆ 10.30ಕ್ಕೆ ಪಲ್ಲ ಪೂಜೆ ನೆರವೇರಿಸಿ, 11 ಗಂಟೆಯಿಂದಲೇ ಮಹಾ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ಹಾಗೂ ಶಾರದಾ ಮಾತೆಗೆ ಮಹಾ ಮಂಗಳಾರತಿ ನಡೆಯಿತು. ಕ್ಷೇತ್ರದ ಪ್ರಧಾನ ತಂತ್ರಿ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಮಹಾಲಕ್ಷ್ಮೆ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಮಹಾಚಂಡಿಕಾಯಾಗ ನಡೆದು ಸಹಸ್ರ ಸಂಖ್ಯೆಯಲ್ಲಿ ನಾರಿಕೇಳ, ನವಧಾನ್ಯ, ರವಕೆ ಕಣ, ರೇಷ್ಮೆ ಸೀರೆ, ಫಲವಸ್ತುಗಳನ್ನು ಸಮರ್ಪಿಸಿ, ಪೂರ್ಣಾಹುತಿ ನೆರವೇರಿಸಲಾಯಿತು.
ಉಚ್ಚಿಲ ದಸರಾ ರೂವಾರಿ ಜಿ.ಶಂಕರ್, ಶಾಲಿನಿ ಜಿ.ಶಂಕರ್ ಮತ್ತು ಕುಟುಂಬಸ್ಥರು, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಶಾಸಕಾರದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪ್ರಸಾದ್‌ರಾಜ್ ಕಾಂಚನ್, ಪ್ರಮುಖರಾದ ಮೋಹನ್ ಸುವರ್ಣ, ಶರಣ್ ಕುಮಾರ್ ಮಟ್ಟು, ರತ್ನಾಕರ ಸಾಲ್ಯಾನ್, ಗುಂಡು ಅಮೀನ್, ಗಿರಿಧರ ಸುವರ್ಣ, ವಾಸುದೇವ ಸಾಲ್ಯಾನ್, ಸುಗುಣಾ ಕರ್ಕೇರ, ಉಷಾರಾಣಿ, ದೇವಳ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ, ಮಹಾಜನ ಸಂಘದ ಪದಾಧಿಕಾರಿಗಳು, ಕ್ಷೇತ್ರಾಡಳಿತ ಸಮಿತಿ ಸದಸ್ಯರು, ಮಹಿಳಾ ಸಂಘ, ನಾಲ್ಕು ಪಟ್ಣ ಮೊಗವೀರ ಸಭಾ, ಮಹಿಳಾ ಸಭಾ, ಉಚ್ಚಿಲ ದಸರಾ ಉತ್ಸವ ಸಮಿತಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಮೆರುಗು ತಂದ ಶೋಭಾಯಾತ್ರೆ
ಶ್ರೀಕ್ಷೇತ್ರ ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ನವದುರ್ಗೆಯರ ಸಹಿತ ಶಾರದಾ ವಿಗ್ರಹಗಳ ಶೋಭಾಯಾತ್ರೆ ನಡೆಯಿತು. ಅತ್ಯಾಕರ್ಷಕವಾಗಿ ಟ್ಯಾಬ್ಲೋ, ಭಜನಾ ತಂಡಗಳೊಂದಿಗೆ ಸಾಗಿ ಹೆದ್ದಾರಿಯುದ್ದಕ್ಕೂ ಶೋಭಾಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಕಣ್ತುಂಬಿಕೊಂಡರು. ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೆ ದೇವಸ್ಥಾನದಿಂದ 3 ಗಂಟೆಗೆ ಧಾರ್ಮಿಕ ವಿಧಿವಿಧಾನಗಳ ಬಳಿಕ 4 ಗಂಟೆಗೆ ದೇವಳದ ಗೋಪುರದ ಮುಂಭಾಗದಲ್ಲಿ ಅಂಬಾರಿಹೊತ್ತ ಆನೆಯ ಟ್ಯಾಬ್ಲೋಗೆ ಗಣ್ಯರು ಪುಷ್ಪಾರ್ಚನೆ ನಡೆಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲ, ಎರ್ಮಾಳು ಜನಾರ್ದನ ದೇವಸ್ಥಾನ, ಎರ್ಮಾಳು ಬಡಾ, ಉಚ್ಚಿಲ ಪೇಟೆ, ಮೂಳೂರು, ಕೊಪ್ಪಲಂಗಡಿಯ ಮೂಲಕ ಸಾಗಿದ ಶೋಭಾಯಾತ್ರೆಯಲ್ಲಿ 45 ಟ್ಯಾಬ್ಲೋ, ಭಜನಾ ತಂಡಗಳು, ವಾದ್ಯ ಮೇಳಗಳು ಉಚ್ಚಿಲ ದಸರಾ ವೈಭವಕ್ಕೆ ಮೆರುಗು ತಂದಿತು. ಬಳಿಕ ಸಾಮೂಹಿಕ ಮಂಗಳಾರತಿ, ಸಮುದ್ರ ಪೂಜೆ ಸಲ್ಲಿಸಲಾಯಿತು.
ಶಾರದೆ ಮತ್ತು ನವದುರ್ಗೆಯರನ್ನು ಹೊತ್ತ ಟ್ಯಾಬ್ಲೋಗಳ ಸಹಿತವಾಗಿ ದೇವಸ್ಥಾನದ ಬಿರುದಾವಳಿ, ಸ್ಯಾಕ್ಸೋಪೋನ್, ನಾಗಸ್ವರ, ಕೊಂಬು ಕಹಳೆ, ವಾದ್ಯಬ್ಯಾಂಡ್, ನಾಸಿಕ್ ಬ್ಯಾಂಡ್, ಚೆಂಡೆ, ಕೊಡೆ, ತಟ್ಟಿರಾಯ, ಕಥಕ್ಕಳಿ, ಥೈಯ್ಯಂ, ಮಹಿಳೆಯರ ಭಜನಾ ತಂಡ, ಕುಣಿತ ಭಜನಾ ತಂಡಗಳು, ಅಯೋಧ್ಯೆ ರಾಮ ಮಂದಿರ, ಉಚ್ಚಿಲ ಮಹಾಲಕ್ಷ್ಮೆ ದೇವರು, ಗಜಾಸುರ, ಹಂಸವಾಹಿನಿ ಮಹಾಲಕ್ಷ್ಮೆ, ರಾಧಾಕೃಷ್ಣ ವಿಲಾಸ, ಮಹಿಷಾಸುರ ಸಹಿತ ನವದುರ್ಗೆಯರು, ಬೃಹತ್ ಗೊಂಬೆಗಳು, ಹುಲಿ ಪ್ರದರ್ಶನ, ಮಹಿಳಾ ಬಳಗ, ಮಾಧವ ಮಂಗಳ ಗುರುಗಳ ಟ್ಯಾಬ್ಲೋ, ಸದಿಯ ಸಾಹುಕಾರ ಟ್ಯಾಬ್ಲೋ, ಹುಲಿ ವೇಷ ಟ್ಯಾಬ್ಲೋ, ಇಸ್ಕಾನ್ ಭಜನೆ, ಮಲ್ಪೆ ಭಜನಾ ಟ್ಯಾಬ್ಲೋ, ಪರ್ಸೀನ್ ಬೋಟ್ ಟ್ಯಾಬ್ಲೋ, ಡಿಜಿ ವಾಹನಗಳು ಮೆರವಣಿಗೆಗೆ ರಂಗು ತಂದಿತು.
ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ನೀರು ಸರಬರಾಜು ವಾಹನ, ಶುಚಿತ್ವ ವಾಹನ, ಕುಡಿಯುವ ನೀರಿನ ವಾಹನ ಮತ್ತು ಮೆಟಲೈಟ್ ವಾಹನಗಳು, ಸಾಮಾಜಿಕ ಜವಾಬ್ದಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಸಂದೇಶ ನೀಡುವ ಟ್ಯಾಬ್ಲೋಗಳು ಕೂಡ ಮೆರವಣಿಗೆಗೆ ಸಾಥ್ ನೀಡಿತು.
ದೇಶ ವಿದೇಶದ ಭಕ್ತರ ಭೇಟಿ
ಐತಿಹಾಸಿಕ ಉಡುಪಿ ಉಚ್ಚಿಲ ದಸರಾ ಮಹೋತ್ಸವ ದೇಶ ವಿದೇಶಗಳ ಭಕ್ತಾದಿಗಳನ್ನು ಅಕರ್ಷಿಸಿತು. ದಸರಾ ವೈಭವವನ್ನು ಕಣ್ತುಂಬಿಸಿಕೊಳ್ಳಲು ಅವಿಭಜಿತ ದ.ಕ. ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿದೆಡೆಗಳಿಂದ ಮತ್ತು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಉಚ್ಚಿಲ ದೇವಳಕ್ಕೆ ಭೇಟಿ ನೀಡಿದರು. ಭಾರತ ಪ್ರವಾಸ ಕೈಗೊಳ್ಳುತ್ತಿರುವ ನೂರಾರು ವಿದೇಶೀ ಪ್ರಜೆಗಳು ರಾಷ್ಟ್ರೀಯ ಹೆದ್ದಾರಿ ಸಂಚರಿಸುವಾಗ ಉಚ್ಚಿಲದ ವೈಭವ ಕಂಡು ಶ್ರೀ ದೇವಳಕ್ಕೆ ಭೇಟಿ ನೀಡಿ ಸಂಭ್ರಮಿಸಿದರು. ರಜೆಯ ಹಿನ್ನಲೆ ಪ್ರವಾಸಿಗರ ವಾಹನಗಳು ಉಚ್ಚಿಲ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿದರು.
ಹೆಚ್ಚಿದ ವಾಹನ ದಟ್ಟಣೆ
ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲೇ ನಡೆಯುತ್ತಿರುವ ಉಚ್ಚಿಲ ದಸರಾ ವೀಕ್ಷಿಸಲು ಲಕ್ಷಾಂತರ ಮಂದಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು ಹೆದ್ದಾರಿಯುದ್ದಕ್ಕೂ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಎರ್ಮಾಳು-ಉಚ್ಚಿಲ-ಮೂಳೂರು ನಡುವೆ ವಾಹನ ಸಂಚಾರದ ಒತ್ತಡ ನಿಯಂತ್ರಿಸಲು ಪಡುಬಿದ್ರಿ ಠಾಣಾಕಾರಿ ಪ್ರಸನ್ನ ಕುಮಾರ್ ಎಂ.ಎಸ್. ನೇತೃತ್ವದಲ್ಲಿ ಪೊಲೀಸರು ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದರು. ಪೊಲೀಸರೊಂದಿಗೆ ಸ್ವಯಂಸೇವಕರ ಶ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಡ್ರೋನ್‌ಮೂಲಕ ಪುಷ್ಪಾರ್ಚನೆ
ಅಂಬಾರಿ ಹೊತ್ತ ಅಂಬಾರಿಯ ಟ್ಯಾಬ್ಲೋ, ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಕ್ಕೆ ಶಿವಮೊಗ್ಗದ ಡ್ರೋನ್ ಶಿವ ಅವರಿಂದ ಡ್ರೋನ್ ಮೂಲಕ ಪುಷ್ಪಾರ್ಚನೆ ಸೇರಿದ ಭಕ್ತರಲ್ಲಿ ಕಣ್ಮನೆ ಸೆಳೆಯಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆಗೆ ತುಂತುರು ಮಳೆ ಸುರಿಯಿತು. ಶೋಭಾಯಾತ್ರೆ ಆರಂಭಗೊಳ್ಳುತಿದ್ದಂತೆಯೇ ಮಳೆ ಬಿರಿಸುಗೊಂಡಿತು. ವೇಷ ಧಾರಿಗಳು ಸಹಿತ ಟ್ಯಾಬ್ಲೋಗಳಿಗೆ ತೊಂದರೆ ಉಂಟಾಯಿತು.
ಬ್ರಾಹ್ಮೀ ದೇವಳಕ್ಕೆ ಹತ್ತು ಸಾವಿರ ಭಕ್ತರ ಆಗಮನ
ಕಮಲಶಿಲೆ: ಇಲ್ಲಿನ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದಕ್ಕೆ ಶನಿವಾರ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ನವರಾತ್ರಿ ಪ್ರಯುಕ್ತ ನಿತ್ಯವೂ ವಿಶೇಷ ಪೂಜೆ, ತ್ರಿಕಾಲ ಬಲಿಯುತ್ಸವ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಶನಿವಾರ ಭಕ್ತರ ದಂಡೇ ದೇವಳಕ್ಕೆ ಆಗಮಿಸಿದೆ. ಬೆಳಗ್ಗೆ ಉದಯಪೂರ್ವ ಕದಿರು ಮೂಹೂರ್ತ, ಧಾನ್ಯ ಸಂಗ್ರಹ ಕಣಜ ತುಂಬಿಸುವುದು, ಶಮೀ ಪೂಜೆ, ಸಂಜೆ ವಿಜಯೋತ್ಸವ ಸಹಿತ ಇನ್ನಿತರ ಕಾರ್ಯಕ್ರಮಗಳು ನಡೆಯಿತು. ಆನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಆನುವಂಶಿಕ ಜತೆ ಮೊಕ್ತೇಸರ ಆಜ್ರಿ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪಕ ಗುರು ಭಟ್ ಉಪಸ್ಥಿತರಿದ್ದರು.